ಶಿಷ್ಟಾಚಾರದ ಪ್ರಕಾರ ಪ್ರಧಾನ ಮಂತ್ರಿಯನ್ನು ಸ್ವಾಗತಿಸಲು ಮುಖ್ಯಮಂತ್ರಿ ವಿಮಾನ ನಿಲ್ದಾಣಕ್ಕೆ ಹೋಗಬೇಕು. ಆದರೆ 'ಸ್ಪೆಕ್ಟ್ರಮ್ ರಾಜಾ' ಕಾರಣದಿಂದಾಗಿ ಕಾಂಗ್ರೆಸ್ ಮತ್ತು ಡಿಎಂಕೆ ನಡುವಿನ ಮುಸುಕಿನ ಗುದ್ದಾಟ ಮುಂದುವರಿಯಿತು.
ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಸ್ವಾಗತಿಸಲು ಹೋಗಲೇ ಇಲ್ಲ. ಕೊನೆಗೂ ಭೇಟಿಯಾಗಿದ್ದಾರೆ ಎನ್ನುವುದಷ್ಟೇ ಇಲ್ಲಿ ಸಮಾಧಾನ ತಂದಿರುವ ಸಂಗತಿ.
ಭಾನುವಾರ ಸಂಜೆ ಪ್ರಧಾನಿ ಸಿಂಗ್ ಚೆನ್ನೈಗೆ ಆಗಮಿಸಿದ್ದರು. ಈ ಹೊತ್ತಿನಲ್ಲಿ ವಿಮಾನ ನಿಲ್ದಾಣಕ್ಕೆ ಹೋಗುವ ತನ್ನ ಕಾರ್ಯಕ್ರಮವನ್ನು ಕರುಣಾನಿಧಿ ಬೇಕೆಂದೇ ತಪ್ಪಿಸಿಕೊಂಡಿದ್ದರು. ಬಳಿಕ ಸೋಮವಾರ ಬೆಳಿಗ್ಗೆ ರಾಜಭವನಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ.
ವಾಸ್ತವದಲ್ಲಿ ಇಂತಹ ನಾಟಕಕ್ಕೆ ಚಾಲನೆ ನೀಡಿದ್ದು ಕಾಂಗ್ರೆಸ್. ತಮಿಳುನಾಡಿನ ಡಿಎಂಕೆ ಸರಕಾರದ ಅಡ್ಯಾರ್ ಪಾರ್ಕ್ ಪ್ರೊಜೆಕ್ಟ್ ಅನ್ನು ಪ್ರಧಾನಿ ಉದ್ಘಾಟನೆ ಮಾಡುವ ಕಾರ್ಯಕ್ರಮವಿತ್ತು. ಆದರೆ ಕೇಂದ್ರ ಪರಿಸರ ಸಚಿವಾಲಯ ಕೊನೆಯ ಕ್ಷಣದವರೆಗೂ ಪರವಾನಗಿ ನೀಡದೇ ಇದ್ದುದರಿಂದ ಕಾರ್ಯಕ್ರಮವನ್ನು ಪ್ರಧಾನಿ ರದ್ದು ಪಡಿಸಿದ್ದರು.
ಇದಕ್ಕೆ ಪ್ರತಿಯಾಗಿ ಕರುಣಾನಿಧಿಯವರು ಪ್ರಧಾನಿಯವರನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಹೋಗಲಿಲ್ಲ. ಅದರ ಬದಲಿಗೆ ತಮಿಳು ಕವಿಯೊಬ್ಬರ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ತೆರಳಿದರು. ಆ ಮೂಲಕ ಏಟಿಗೆ ತಿರುಗೇಟು ನೀಡಿದರು.
ದೂರಸಂಪರ್ಕ ಖಾತೆ ಮಾಜಿ ಸಚಿವ '2ಜಿ ರಾಜಾ' ಪ್ರಕರಣದ ನಂತರ ಈ ಇಬ್ಬರು ಪರಸ್ಪರ ಭೇಟಿಯಾಗಿರುವುದು ಇದೇ ಮೊದಲು. ಪ್ರಧಾನಿ ಜತೆ ಸುಮಾರು 25 ನಿಮಿಷಗಳ ಕಾಲ ಮಾತುಕತೆ ನಡೆಸಿದ ಮುಖ್ಯಮಂತ್ರಿ ಕರುಣಾನಿಧಿ, ಕಾಂಗ್ರೆಸ್ ಮತ್ತು ಡಿಎಂಕೆ ನಡುವೆ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳಿಲ್ಲ; ನಮ್ಮ ಮೈತ್ರಿ ಇನ್ನಷ್ಟು ಗಟ್ಟಿಯಾಗಿದೆ ಎಂದು ಸ್ಪಷ್ಟಪಡಿಸಿದರು.
ತಮಿಳುನಾಡಿನಲ್ಲಿ ಹತ್ತಿರ ಬರುತ್ತಿರುವ ವಿಧಾನಸಭಾ ಮತ್ತು ಗ್ರಾಮ ಪಂಚಾಯತ್ ಚುನಾವಣೆಗಳ ಹಿನ್ನೆಲೆಯಲ್ಲಿಯೂ ಉಭಯ ನಾಯಕ ಭೇಟಿ ಕುತೂಹಲ ಕೆರಳಿಸಿದೆ. 2ಜಿ ಹಗರಣ ತಾರಕಕ್ಕೇರಿದ ಸಂದರ್ಭದಲ್ಲಿ ಡಿಎಂಕೆಯಿಂದ ಕಾಂಗ್ರೆಸ್ ಕಳಚಿಕೊಳ್ಳುತ್ತದೆ ಎಂದು ಹೇಳಲಾಗುತ್ತಿತ್ತಾದರೂ, ಅದು ನಂತರದ ದಿನಗಳಲ್ಲಿ ಸುಳ್ಳಾಗಿತ್ತು. ಆದರೂ ಯುಪಿಎ ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವುದು ಆಗಾಗ ಬಯಲಿಗೆ ಬರುತ್ತಿರುತ್ತದೆ.
ಭೇಟಿಯ ಸಂದರ್ಭದಲ್ಲಿ, ಕಳೆದ ತಿಂಗಳಿನ ಭಾರೀ ಮಳೆಯಿಂದಾಗಿ ಬಾಧೆಗೊಳಗಾಗಿರುವ ಕೆಲವು ಜಿಲ್ಲೆಗಳಿಗೆ ಹೆಚ್ಚಿನ ಪರಿಹಾರ ನೀಡುವಂತೆಯೂ ಕರುಣಾನಿಧಿ ಪ್ರಧಾನಿಯವರಲ್ಲಿ ಮನವಿ ಮಾಡಿಕೊಂಡರು.