ತುರ್ತು ಪರಿಸ್ಥಿತಿ ಸಂದರ್ಭದಲ್ಲಿನ ಎಲ್ಲಾ ದುರಾಚಾರಗಳನ್ನು ಸಂಜಯ್ ಗಾಂಧಿ ಮೇಲೆ ಹೊರಿಸುವ ಹಾಸ್ಯಾಸ್ಪದ ಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ, ಎಲ್ಲದಕ್ಕೂ ಆಗಿನ ಪ್ರಧಾನ ಮಂತ್ರಿ ಇಂದಿರಾ ಗಾಂಧಿ ಹೊಣೆಗಾರ್ತಿ ಎಂದು ಬೆಟ್ಟು ಮಾಡಿದರು.
ಕಾಂಗ್ರೆಸ್ ಪಕ್ಷಕ್ಕೆ 125 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಡೆದ ಸಮಾವೇಶದಲ್ಲಿ ಬಿಡುಗಡೆ ಮಾಡಲಾದ 'ಕಾಂಗ್ರೆಸ್ ಎಂಡ್ ದಿ ಮೇಕಿಂಗ್ ಆಫ್ ದಿ ಇಂಡಿಯನ್ ನೇಷನ್' ಎಂಬ ಪುಸ್ತಕದಲ್ಲಿ, ಕಾಂಗ್ರೆಸ್‌ನ ಕುಖ್ಯಾತ ತುರ್ತು ಪರಿಸ್ಥಿತಿಗೆ ಸಂಜಯ್ ಗಾಂಧಿಯನ್ನೇ ಅಪರಾಧಿಯನ್ನಾಗಿ ಮಾಡುವ ಯತ್ನವನ್ನು ಮಾಡಲಾಗಿರುವುದನ್ನು ಅಡ್ವಾಣಿ ಖಂಡಿಸಿ, ತನ್ನ ಬ್ಲಾಗಿನಲ್ಲಿ ಬರೆದಿದ್ದಾರೆ.
ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ದೇಶ ಅನುಭವಿಸಿದ ಎಲ್ಲಾ ಯಾತನೆಗಳಿಗೆ ಸಂಜಯ್ ಗಾಂಧಿಯವರನ್ನು ಬಲಿಪಶುವನ್ನಾಗಿ ಮಾಡುವ ನಗೆಪಾಟಲಿನ ಯತ್ನವನ್ನು ಪುಸ್ತಕದ ನಿರ್ದಿಷ್ಟ ಪ್ಯಾರಾವೊಂದರಲ್ಲಿ ಮಾಡಲಾಗಿದೆ ಎಂದು ಅಡ್ವಾಣಿ ಹೇಳಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕ, ವಿತ್ತ ಸಚಿವ ಪ್ರಣಬ್ ಮುಖರ್ಜಿ ಸಂಪಾದಕತ್ವದಲ್ಲಿನ ಪುಸ್ತ ಬಿಡುಗಡೆಯಾದ ಬೆನ್ನಲ್ಲೇ ಬಿಜೆಪಿ ನಾಯಕರು, ಸಂಜಯ್ ಗಾಂಧಿಯ ಸಮರ್ಥನೆಗೆ ಮುಂದಾಗಿದ್ದರು. ಅವರೊಬ್ಬರನ್ನೇ ಈಗ ಗುರಿ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಸಂಜಯ್ ಗಾಂಧಿ ವಿಧವಾ ಪತ್ನಿ ಮೇನಕಾ ಗಾಂಧಿ ಮತ್ತು ಪುತ್ರ ವರುಣ್ ಗಾಂಧಿ ಪ್ರಸಕ್ತ ಬಿಜೆಪಿ ಸಂಸದರು. ಇನ್ನೊಬ್ಬ ಬಿಜೆಪಿ ಹಿರಿಯ ನಾಯಕ ಜಗಮೋಹನ್ ಅವರು ಸಂಜಯ್ ಗಾಂಧಿಗೆ ಆಪ್ತರಾಗಿದ್ದವರು.
ಇಂದಿರಾ ಗಾಂಧಿಯವರು ತನ್ನ ಪಟ್ಟವನ್ನು ಉಳಿಸಿಕೊಳ್ಳುವುದಕ್ಕಾಗಿ ದೇಶದ ಹಿತಚಿಂತನೆಯನ್ನು ಬದಿಗೊತ್ತಿ ತುರ್ತು ಪರಿಸ್ಥಿತಿ ಹೇರಿದ್ದು ಜಗತ್ತಿಗೆ ತಿಳಿದಿರುವ ವಿಚಾರವಾದರೂ, ಕಾಂಗ್ರೆಸ್ ಮಾತ್ರ ಈಗಲೂ ಇಂದಿರಾ ಗಾಂಧಿಯನ್ನು ಸಮರ್ಥಿಸಿಕೊಳ್ಳುತ್ತಿದೆ. ತುರ್ತು ಪರಿಸ್ಥಿತಿಯಿಂದ ದೇಶಕ್ಕೆ ಲಾಭವಾಗಿತ್ತು ಎಂಬಂತೆ ಮಾತನಾಡುತ್ತಿದೆ.
ಇಂದಿರಾ ಗಾಂಧಿ ಆಟೋಪಗಳಿಂದಾಗಿ ಅಂದು ಜೈಲಿಗೆ ಹೋದವರಲ್ಲಿ ಅಡ್ವಾಣಿಯವರೂ ಒಬ್ಬರು. ಅವರ ಪ್ರಕಾರ ತುರ್ತು ಪರಿಸ್ಥಿತಿಯ ಆವಾಂತರಗಳಿಗೆ ನೇರ ಕಾರಣ ಇಂದಿರಾ ಗಾಂಧಿ.
ಸಚಿವ ಸಂಪುಟ ಅಥವಾ ಕಾನೂನು ಸಚಿವರು ಮತ್ತು ಗೃಹ ಸಚಿವರು -- ಇವರಲ್ಲಿ ಯಾರೊಬ್ಬರ ಜತೆಗೂ ಮಾತುಕತೆ ನಡೆಸದೆ ಸಂವಿಧಾನದ 352ನೇ ವಿಧಿಯನ್ನು ಜಾರಿಗೊಳಿಸಿ, ಪ್ರಜಾಪ್ರಭುತ್ವವನ್ನು ಅನಿರ್ದಿಷ್ಟಾವಧಿ ಅಮಾನತುಗೊಳಿಸುವಂತೆ ರಾಷ್ಟ್ರಪತಿ ಫಕ್ರುದ್ದೀನ್ ಆಲಿ ಅಹ್ಮದ್ ಅವರಿಗೆ ಶಿಫಾರಸು ಮಾಡಿದ್ದರು ಎಂದು ಈ ಕುರಿತು ಅಡ್ವಾಣಿ ತನ್ನ ಬ್ಲಾಗಿನಲ್ಲಿ ಬರೆದಿದ್ದಾರೆ.
ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಡೆದಿರುವ 'ಅತಿರೇಕ'ಗಳಿಗೆ ಮಾತ್ರ ಕಾಂಗ್ರೆಸ್ ತನ್ನ ಪುಸ್ತಕದಲ್ಲಿ ವಿಷಾದಿಸಿದೆ. ಯಾಕೆಂದರೆ ಈ 'ಅತಿರೇಕ'ಗಳನ್ನು ಎಸಗಿರುವುದು ಸಂಜಯ್ ಗಾಂಧಿ ಎಂಬ ಕಾರಣಕ್ಕೆ. ಅವರು ಕೊಳೆಗೇರಿ ಶುದ್ಧೀಕರಣ, ವರದಕ್ಷಿಣೆ ವಿರೋಧಿ ಕ್ರಮ ಮತ್ತು ಅನಕ್ಷರತೆ ನಿವಾರಣೆಗಾಗಿ ಸರ್ವಾಧಿಕಾರಿಯಂತೆ ವರ್ತಿಸಿದ್ದರು ಎಂಬುದಕ್ಕೆ ಎಂದು ಮಾಜಿ ಉಪ ಪ್ರಧಾನಿ ಬಣ್ಣಿಸಿದ್ದಾರೆ.
ಕಾಂಗ್ರೆಸ್ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಯಾವ ಯಾವ ರೀತಿಯ ದೌರ್ಜನ್ಯ ಎಸಗಿತ್ತು ಎಂಬುದಕ್ಕೆ ಅಡ್ವಾಣಿಯವರು ಮತ್ತೊಂದು ಉದಾಹರಣೆ ನೀಡಿದ್ದಾರೆ.
ಮೂಲಭೂತ ಹಕ್ಕುಗಳನ್ನು ಸರಕಾರವು ಅಮಾನತುಗೊಳಿಸಿದ್ದನ್ನು ಎಲ್ಲಾ ಹೈಕೋರ್ಟುಗಳು ತಿರಸ್ಕರಿಸಿದ ಸಂದರ್ಭದಲ್ಲಿ ಸರಕಾರವು ಸುಪ್ರೀಂ ಕೋರ್ಟಿಗೆ ಮನವಿ ಮಾಡಿತ್ತು. ಬಳಿಕ ಸರಕಾರದ ವಿರುದ್ಧವಿದ್ದ ಎಲ್ಲಾ ನ್ಯಾಯಮೂರ್ತಿಗಳನ್ನು ಶಿಕ್ಷಿಸಲಾಯಿತು. 19 ನ್ಯಾಯಾಧೀಶರನ್ನು ವರ್ಗಾವಣೆ ಮಾಡಲಾಯಿತು ಎಂದು ಅವರು ಆರೋಪಿಸಿದ್ದಾರೆ.