ವಿಶ್ವಪ್ರಸಿದ್ಧ ತಿರುಪತಿ ತಿಮ್ಮಪ್ಪನಿಗೂ ಹೊಸ ವರ್ಷ ಸಂಭ್ರಮವೇ? ಹೌದು, 2011ರ ಜನವರಿ 1ರಂದು ತಿಮ್ಮಪ್ಪನ ಹುಂಡಿಗೆ ದಾಖಲೆಯ 3.80 ಕೋಟಿ ರೂಪಾಯಿ ಕಾಣಿಕೆ ಬಿದ್ದಿದೆ!
ದೇವಳದ ಇತಿಹಾಸದಲ್ಲೇ ಇದು ದಾಖಲೆ. ಇಷ್ಟೊಂದು ಮೊತ್ತದ ಹುಂಡಿಯನ್ನು ತಿರುಪತಿ ಸೇರಿದಂತೆ ಭಾರತದ ಯಾವುದೇ ದೇವಾಲಯವು ಒಂದೇ ದಿನದಲ್ಲಿ ಕಾಣಿಕೆಯಾಗಿ ಪಡೆದಿರುವ ಉದಾಹರಣೆಯಿಲ್ಲ. ಕಳೆದ ವರ್ಷದ ಕಾಣಿಕೆ ಹೋಲಿಸಿದರೂ ಭಾರೀ ಹೆಚ್ಚಳವಿದು ಎಂದು ತಿರುಮಲ ತಿರುಪತಿ ದೇವಸ್ಥಾನಂ ಅಧಿಕಾರಿಗಳು ತಿಳಿಸಿದ್ದಾರೆ.
PR
ಹೊಸ ವರ್ಷದ ಮೊದಲ ದಿನ 80,000ಕ್ಕೂ ಹೆಚ್ಚು ಭಕ್ತಾದಿಗಳು ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಕಳೆದ ವರ್ಷದ ಇದೇ ದಿನ ಸಂಗ್ರಹವಾಗಿದ್ದ ಹುಂಡಿಯ ಒಟ್ಟು ಮೊತ್ತ 3 ಕೋಟಿ. ಈ ಬಾರಿ ಅದು 3.80 ಕೋಟಿ ರೂಪಾಯಿಗಳಿಗೆ ತಲುಪಿದೆ.
ಭಕ್ತರು ಹಾಕಿರುವ ನಗದು ಹಣದ ಲೆಕ್ಕಾಚಾರ ಮಾತ್ರ ಮಾಡಲಾಗಿದೆ. ಇದರ ಹೊರತಾಗಿ ಹುಂಡಿಗೆ ಹಾಕಿರುವ ಚಿನ್ನ, ಬೆಳ್ಳಿ ಮತ್ತಿತರ ಆಭರಣಗಳನ್ನು ಇದಕ್ಕೆ ಸೇರಿಸಲಾಗಿಲ್ಲ.
ಹೊಸ ವರ್ಷದ ಮೊದಲನೆ ದಿನದಂದು ವಿಶ್ವದ ಶ್ರೀಮಂತ ದೇವರ ದರ್ಶನಕ್ಕೆ ಭಾರೀ ಶ್ರೀಮಂತರು, ಗಣ್ಯರು ತುದಿಗಾಲಲ್ಲಿ ನಿಂತಿದ್ದರು. ಅವರಲ್ಲಿ ಕೆಲವರಿಗೆ ಮಾತ್ರ ಅವಕಾಶ ಸಿಕ್ಕಿದೆಯಂತೆ. ದೇವಸ್ಥಾನದ ಆಡಳಿತ ಹೇಳುವ ಪ್ರಕಾರ, 3,650 ಮಂದಿ ಗಣ್ಯರು (ವಿಐಪಿಗಳು) ಪತ್ರ ಬರೆದಿದ್ದರು. ಅವರಲ್ಲಿ 1,960 ಮಂದಿಗೆ ಮಾತ್ರ ಟಿಕೆಟುಗಳನ್ನು ನೀಡಲಾಗಿದೆ.
ಅವರಲ್ಲಿ ಛತ್ತೀಸ್‌ಗಢ ಮುಖ್ಯಮಂತ್ರಿ ರಮನ್ ಸಿಂಗ್, ಗುಂಟೂರು ಸಂಸದ ರಾಯಪಾಠಿ ಸಾಂಬಶಿವ ರಾವ್ ಮತ್ತು ರಾಜ್ಯ ಸಚಿವ ಪಿತಾನಿ ಸತ್ಯನಾರಾಯಣ ಸೇರಿದಂತೆ ಸಾವಿರಾರು ಗಣ್ಯರು ಸೇರಿದ್ದಾರೆ.