ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮತ್ತೆ ಕಾಂಗ್ರೆಸ್ ಕತ್ತು ಹಿಸುಕುತ್ತಿದೆ ಬೋಫೋರ್ಸ್ ಹಗರಣ (Bofors scam | Ottavio Quattrochi | Win Chadha | Congress)
Bookmark and Share Feedback Print
 
ನವದೆಹಲಿ: ನೆಹರು ಕುಟುಂಬದ ಆಪ್ತ ಒಟ್ಟಾವಿಯೋ ಕ್ವಟ್ರೋಚ್ಚಿ ಮತ್ತು ವಿನ್ ಚಡ್ಡಾರಿಗೆ ಸರಕಾರವಲಂಚ ನೀಡಿತ್ತು ಎಂಬುದನ್ನು ಆದಾಯ ತೆರಿಗೆ ಇಲಾಖೆ ಬಹಿರಂಗಪಡಿಸಿದ್ದು, ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರ ಕೇಂದ್ರದಲ್ಲಿ ಅಧಿಕಾರದಲ್ಲಿದ್ದಾಗ ನಡೆದಿದ್ದ ಕುಖ್ಯಾತ ಬೋಫೋರ್ಸ್ ಹಗರಣ ಮತ್ತೆ ಗರಿಗೆದರಿದೆ.

ರಾಜೀವ್ ಗಾಂಧಿ ಪಾಲ್ಗೊಂಡಿದ್ದಾರೆ ಎಂದು ಆರೋಪಿಸಲಾಗಿರುವ ಬೋಫೋರ್ಸ್ ಹಗರಣದಲ್ಲಿ ಕ್ವಟ್ರೋಚ್ಚಿಗೆ ಸಿಬಿಐ ಕ್ಲೀನ್ ಚಿಟ್ ನೀಡಿದೆಯಲ್ಲ ಎಂದು ಪ್ರಶ್ನಿಸುತ್ತಿದ್ದವರಿಗೆ ಈಗ ಮತ್ತೊಂದು ಇಲಾಖೆ ಉತ್ತರಿಸಿದ್ದು, ಕಾಂಗ್ರೆಸ್ ತೀವ್ರ ಮುಜುಗರಕ್ಕೆ ಸಿಲುಕಿದೆ.

ಇದನ್ನು ಹೊರಗೆಡವಿರುವುದು ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣ (ಐಟಿಎಟಿ). ಕ್ವಟ್ರೋಚ್ಚಿ ಮತ್ತು ಚಡ್ಡಾರಿಗೆ ಕಮೀಷನ್ ರೂಪದಲ್ಲಿ 242.62 ಮಿಲಿಯನ್ ಸ್ವೀಡಿಷ್ ಕ್ರೋನರ್ ಮೊತ್ತವನ್ನು ಭಾರತ ಸರಕಾರ ಪಾವತಿ ಮಾಡಿತ್ತು. ಕ್ವಟ್ರೋಚ್ಚಿ ಮತ್ತು ಆತನ ಪತ್ನಿ ಮರಿಯಾ ನಿಯಂತ್ರಣದಲ್ಲಿದ್ದ M/s Colbar Investments Limited Inc and M/s Wetelsen Overseas ಖಾತೆಗಳಿಗೆ ಲಂಚ ಸಂದಾಯವಾಗಿತ್ತು ಎಂದು ನ್ಯಾಯಾಧಿಕರಣ ಹೇಳಿದೆ.

ಕಿಕ್‌ಬ್ಯಾಕ್ ಅನ್ನು M/s AB Bofors ಕಮೀಷನ್ ರೂಪದಲ್ಲಿ ಕ್ವಟ್ರೋಚ್ಚಿ ಮತ್ತು ಚಡ್ಡಾರಿಗೆ M/s AE Services ಮತ್ತು M/s Svenska ಮೂಲಕ ನೀಡಿತ್ತು.

ಕ್ವಟ್ರೋಚ್ಚಿ ಭಾರತ ಸರಕಾರದಿಂದ ಪಡೆದಿರುವ ಲಂಚಕ್ಕಾಗಿ, ಆ ಸಂದರ್ಭದಲ್ಲಿ ಆತ ಭಾರತದಲ್ಲೇ ಇದ್ದುದರಿಂದ ಭಾರತ ಸರಕಾರಕ್ಕೆ ತೆರಿಗೆ ಪಾವತಿ ಮಾಡಬೇಕು. ಅದೇ ರೀತಿ ಚಡ್ಡಾ ಕಿಕ್‌ಬ್ಯಾಕ್ ರೂಪದಲ್ಲಿ ಪಡೆದಿರುವ ಹಣಕ್ಕೂ ತೆರಿಗೆ ಪಾವತಿಸಬೇಕು ಎಂದು ತೆರಿಗೆ ನ್ಯಾಯಾಧಿಕರಣ ತಿಳಿಸಿದೆ.

ಸರಕಾರಕ್ಕೆ ತೆರಿಗೆ ಪಾವತಿ ಮಾಡುವ ಸಂಬಂಧ ವಿನ್ ಚಡ್ಡಾನ ಪುತ್ರ ಹರ್ಷಾ ಆದಾಯ ತೆರಿಗೆ ಇಲಾಖೆ ಮೇಲ್ಮನವಿ ನ್ಯಾಯಾಧಿಕರಣಕ್ಕೆ ಮನವಿ ಮಾಡಿಕೊಂಡಿದ್ದ. ಬೋಫೋರ್ಸ್ ಒಪ್ಪಂದದಲ್ಲಿ ಕ್ವಟ್ರೊಚ್ಚಿ ಮತ್ತು ಚಡ್ಡಾರಿಗೆ ಕಾನೂನು ಬಾಹಿರವಾಗಿ ಕಮೀಷನ್ ಪಾವತಿ ಮಾಡಲಾಗಿತ್ತು ಎಂದು ಡಿಸೆಂಬರ್ 31ರಂದು ಹೇಳಿರುವ ನ್ಯಾಯಾಧಿಕರಣವು ಹರ್ಷಾ ಅರ್ಜಿಯನ್ನು ತಿರಸ್ಕರಿಸಿದೆ.

ಐಟಿಎಟಿ ಪ್ರಕಾರ, ರಕ್ಷಣಾ ಒಪ್ಪಂದಗಳಲ್ಲಿ ದಲ್ಲಾಳಿಗಳಿಗೆ ಅವಕಾಶ ನೀಡುವ ಬಗ್ಗೆ ಭಾರತ ಸರಕಾರ ಯಾವುದೇ ನೀತಿಗಳನ್ನು ಹೊಂದಿಲ್ಲವಾದ್ದರಿಂದ, ಕ್ವಟ್ರೋಚ್ಚಿ ಮತ್ತು ಚೆಡ್ಡಾರಿಗೆ ಮಾಡಿರುವ ಪಾವತಿಗಳು ಕಾನೂನು ಬಾಹಿರ.

ಕಾಂಗ್ರೆಸ್-ಸಿಬಿಐ ವಿರುದ್ಧ ಬಿಜೆಪಿ ವಾಗ್ದಾಳಿ...
ಕಾಂಗ್ರೆಸ್ ಸರಕಾರವು ಲಂಚ ನೀಡಿರುವುದು ಐಟಿಎಟಿ ಮೂಲಕ ಬಹಿರಂಗವಾಗಿರುವ ಬೆನ್ನಿಗೆ ಪ್ರಮುಖ ಪ್ರತಿಪಕ್ಷ ಬಿಜೆಪಿ ತೀವ್ರ ವಾಗ್ದಾಳಿ ಆರಂಭಿಸಿದೆ. ಕ್ವಟ್ರೋಚ್ಚಿಗೆ ಕ್ಲೀನ್ ಚಿಟ್ ನೀಡಿರುವುದಕ್ಕೆ ಸಿಬಿಐಯನ್ನೂ ತರಾಟೆಗೆ ತಗೆದುಕೊಂಡಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಅರುಣ್ ಜೇಟ್ಲಿ, ಐಟಿಎಟಿ ಹೇಳಿರುವುದಕ್ಕೂ, ಸಿಬಿಐ ಹೇಳಿರುವುದಕ್ಕೂ ಅಜಗಜಾಂತರ ವ್ಯತ್ಯಾಸಗಳಿವೆ. ಯಾರೊಬ್ಬರಿಗೂ ಕಿಕ್‌ಬ್ಯಾಕ್ ನೀಡಲಾಗಿಲ್ಲ ಎಂದು ಸಿಬಿಐ ಹೇಳಿತ್ತು. ಇದರ ಹಿಂದೆ ಯಾರಿದ್ದಾರೆ ಎಂಬುದು ಬಹಿರಂಗವಾಗಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸರಕಾರದ ಪ್ರಭಾವದ ಅಡಿಯಲ್ಲಿ ಸಿಬಿಐ ಕೆಲಸ ಮಾಡುತ್ತಿದೆ ಎಂದು ಆರೋಪಿಸಿರುವ ಜೇಟ್ಲಿ, ಪ್ರಾಮಾಣಿಕತೆ ಮತ್ತು ನಿಷ್ಪಕ್ಷಪಾತವಾಗಿ ತನಿಖೆ ನಡೆದಿಲ್ಲ ಎಂದರು.

ಬೋಫೋರ್ಸ್ ಹಗರಣದಲ್ಲಿ ಇಬ್ಬರಿಗೆ ಲಂಚ ನೀಡಲಾಗಿತ್ತು ಎಂದು ಐಟಿಎಟಿ ಹೇಳುತ್ತಿದೆ. ಅತ್ತ ಸಿಬಿಐ ಕ್ವಟ್ರೋಚ್ಚಿ ಮತ್ತು ಚಡ್ಡಾರಿಗೆ ಕ್ಲೀನ್ ಚಿಟ್ ನೀಡಿದೆ. ಇದರಲ್ಲಿ ಯಾವುದು ಸರಿ? ಸಿಬಿಐ ಇಂತಹ ನಿರ್ಧಾರಕ್ಕೆ ಬರಲು ಕಾರಣ ಯಾರು? ತನ್ನ ರಾಜಕೀಯ ನಿಯಂತ್ರಕರಿಗಾಗಿ ಸಿಬಿಐ ಕಾರ್ಯ ನಿರ್ವಹಿಸಿರುವುದು ಇದರ ಮೂಲಕ ಸ್ಪಷ್ಟವಾಗಿದೆ ಎಂದು ವಾಕ್ ಪ್ರಹಾರ ಮಾಡಿದರು.

ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧವೂ ಟೀಕೆಗಳ ಸುರಿಮಳೆಯನ್ನು ಸುರಿಸಿದ ಬಿಜೆಪಿ ನಾಯಕ, ಕ್ವಟ್ರೋಚ್ಚಿ ರಕ್ಷಣೆಗೆ ಕಾಂಗ್ರೆಸ್ ಸರಕಾರ ನಿಂತಿದೆ; ಆದರೆ ಸತ್ಯವನ್ನು ಶಾಶ್ವತವಾಗಿ ಮುಚ್ಚಿ ಹಾಕಲು ಸಾಧ್ಯವಿಲ್ಲ ಎಂದರು.
ಸಂಬಂಧಿತ ಮಾಹಿತಿ ಹುಡುಕಿ