ಆಂಧ್ರಪ್ರದೇಶದಲ್ಲಿ ಮತ್ತೆ ಗ್ಯಾಂಗ್‌ವಾರ್ ಶುರುವಾಗಿದೆ. ರಾಮ್‌ಗೋಪಾಲ್ ವರ್ಮಾ ಎರಡೆರಡು 'ರಕ್ತಚರಿತ್ರೆ'ಗಳನ್ನು ಮಾಡಿ ಕೈ ತೊಳೆದುಕೊಳ್ಳುವ ಮೊದಲೇ ಅದೇ ಪ್ರಕರಣದ ಮುಂದುವರಿದ ಭಾಗವೆಂಬಂತೆ ಪೆರಿಟಾಲ ರವಿ ಹತ್ಯೆ ಆರೋಪಿ ಸೂರ್ಯನಾರಾಯಣ ರೆಡ್ಡಿ ಆಲಿಯಾಸ್ ಮುದ್ದುಲಚೆರುವು ಸೂರಿಯನ್ನು ಗುಂಡಿಕ್ಕಿ ಕೊಂದು ಹಾಕಲಾಗಿದೆ.
ಇದು ನಡೆದಿರುವುದು ಸೋಮವಾರ ಅಪರಾಹ್ನ. ಇತ್ತೀಚಿನವರೆಗೂ ಬೆಂಗಳೂರಿನಲ್ಲೇ ಇದ್ದ ಸೂರಿ ಹೈದರಾಬಾದ್‌ನ ಜೂಬಿಲಿ ಹಿಲ್ಸ್‌ನಲ್ಲಿದ್ದ ಹೊತ್ತಿನಲ್ಲಿ ಗುಂಡಿಕ್ಕಲಾಗಿತ್ತು. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಸೂರಿ ಸಾವನ್ನಪ್ಪಿದ್ದಾನೆ.
ರೌಡಿ, ಆಂಧ್ರಪ್ರದೇಶದ ಮಾಜಿ ಸಚಿವ ಹಾಗೂ ತೆಲುಗು ದೇಶಂ ಪಕ್ಷದ ನಾಯಕ ಪೆರಿಟಾಲ ರವಿಯನ್ನು ಇದೇ ಸೂರಿ 2005ರಲ್ಲಿ ಹತ್ಯೆ ಮಾಡಿದ್ದ ಎಂದು ಆರೋಪಿಸಲಾಗಿತ್ತು. ಇದನ್ನೇ ಕಥಾ ವಸ್ತುವನ್ನಾಗಿ ಮಾಡಿಕೊಂಡು ರಾಮ್‌ಗೋಪಾಲ್ ವರ್ಮಾ 'ರಕ್ತಚರಿತ್ರ' ಎಂಬ ಎರಡೆರಡು ಭಾಗಗಳುಳ್ಳ ಸಿನಿಮಾ ತೆಗೆದಿದ್ದರು. ಅದು ಥಿಯೇಟರುಗಳಲ್ಲಿ ಓಡುತ್ತಿರುವ ಹೊತ್ತಿನಲ್ಲೇ ಆರೋಪಿಯ ಹೆಣವೂ ಬಿದ್ದಿದೆ.
ಕಳೆದ ತಿಂಗಳಷ್ಟೇ ರಕ್ತಚರಿತ್ರೆ ಸಿನಿಮಾವನ್ನು ಬೆಂಗಳೂರಿನಲ್ಲಿ ನೋಡಿದ್ದ ಕಾಂಗ್ರೆಸ್ ನಾಯಕ ಸೂರಿ, ಮೂರು ದಿನಗಳ ಹಿಂದಷ್ಟೇ ಹೈದರಾಬಾದ್‌ಗೆ ತೆರಳಿದ್ದ. ಸಹಚರರೇ ಈ ಕೊಲೆಯ ಹಿಂದಿರಬಹುದು ಎಂದು ಶಂಕಿಸಲಾಗಿದೆ.
ಹಲವು ಸುತ್ತಿನ ಗುಂಡು ಹಾರಿಸಿದ್ದರಿಂದ ಸೂರಿ ತೀವ್ರ ಗಾಯಗೊಂಡಿದ್ದ. ಕಿವಿ ಕೆಳಭಾಗಕ್ಕೆ ದೊಡ್ಡ ಪ್ರಮಾಣದ ಗಾಯವಾಗಿತ್ತು. ಆತನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಪ್ರಕರಣವೊಂದರ ಸಂಬಂಧ ವಕೀಲರೊಂದಿಗೆ ಮಾತುಕತೆ ನಡೆಸಿ ಮನೆಗೆ ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆದಿದೆ. ಆಗ ಸೂರಿಯ ಇಬ್ಬರು ಆಪ್ತರು ಜತೆಗಿದ್ದರು. ಮುಖ ಮುಚ್ಚಿಕೊಂಡಿದ್ದ ಮೂವರು ದುಷ್ಕರ್ಮಿಗಳು ರಾಯಲಸೀಮೆಯ ನಾಯಕನ ಮೇಲೆ ಏಕಾಏಕಿ ಗುಂಡಿನ ಮಳೆಗರೆದರು ಎಂದು ವರದಿಗಳು ಹೇಳಿವೆ.
ಜುಬಿಲಿ ಹಿಲ್ಸ್ ಬಾಂಬ್ ಸ್ಫೋಟ ಪ್ರಕರಣದಲ್ಲಿ 1997ರಲ್ಲಿ ಜೈಲು ಸೇರಿದ್ದ ಸೂರಿ, ವರ್ಷದ ಹಿಂದಷ್ಟೇ ಬಿಡುಗಡೆಯಾಗಿದ್ದ. ಈತನ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದವು.