ದಿಗ್ವಿಜಯ್-ಕರ್ಕರೆ ನಡುವೆ ಮಾತುಕತೆ ನಡೆದೇ ಇಲ್ಲ: ವಿಎಚ್‌ಪಿ
ಭೋಪಾಲ, ಮಂಗಳವಾರ, 4 ಜನವರಿ 2011( 10:46 IST )
ಮುಂಬೈ ಭಯೋತ್ಪಾದನಾ ದಾಳಿ ನಡೆದ ದಿನ 2008ರ ನವೆಂಬರ್ 26ರಂದು ಹತರಾದ ಉಗ್ರ ನಿಗ್ರಹ ದಳದ ಮುಖ್ಯಸ್ಥ ಹೇಮಂತ್ ಕರ್ಕರೆ ಮತ್ತು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ನಡುವೆ ಯಾವುದೇ ದೂರವಾಣಿ ಮಾತುಕತೆ ನಡೆದಿಲ್ಲ ಎಂದು ವಿಶ್ವ ಹಿಂದೂ ಪರಿಷತ್ ಸ್ಪಷ್ಟಪಡಿಸಿದೆ.
ಕರ್ಕರೆಯವರ ಜತೆ ಮಾತನಾಡಿದ್ದೇನೆ ಎಂದು ದಿಗ್ವಿಜಯ್ ಸಿಂಗ್ ಸುಳ್ಳು ಹೇಳುತ್ತಿದ್ದಾರೆ ವಿಶ್ವ ಹಿಂದೂ ಪರಿಷತ್ ಮಧ್ಯಪ್ರದೇಶದ ಹಿರಿಯ ನಾಯಕ ಬಿ.ಎಲ್. ತಿವಾರಿ ಹೇಳಿದ್ದಾರೆ. ಮಾಹಿತಿ ಹಕ್ಕು ಮೂಲಕ ಪಡೆದುಕೊಂಡಿರುವ ದಾಖಲೆಗಳನ್ನೂ ಅವರು ಪತ್ರಕರ್ತರಿಗೆ ತೋರಿಸಿದ್ದಾರೆ.
2008ರ ನವೆಂಬರ್ 26ರಂದು ದಿಗ್ವಿಜಯ್ ಸಿಂಗ್ ಮತ್ತು ಹೇಮಂತ್ ಕರ್ಕರೆಯವರ ನಡುವೆ 94****5461 ಮೊಬೈಲ್ ನಂಬರಿನಲ್ಲಿ ಯಾವುದೇ ಮಾತುಕತೆ ನಡೆದಿಲ್ಲ. ಈ ಪೋಸ್ಟ್‌ಪೇಡ್ ನಂಬರ್ ಮಧ್ಯಪ್ರದೇಶ ಕಾಂಗ್ರೆಸ್ ಸಮಿತಿ ಹೆಸರಿನಲ್ಲಿದೆ ಎಂದು ತಿವಾರಿ ವಿವರಣೆ ನೀಡಿದರು.
ಮುಂಬೈ ದಾಳಿ ಮಾಡಿದ್ದು ಪಾಕಿಸ್ತಾನಿಯರು ಅಲ್ಲ ಎಂಬ ಅರ್ಥದಲ್ಲಿ ಆರಂಭದಲ್ಲಿ ಮಾತನಾಡಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್, ನಂತರ ಅದರಿಂದ ನುಣುಚಿಕೊಂಡಿದ್ದರು. ಮುಂಬೈ ದಾಳಿ ಬಗ್ಗೆ ನನ್ನಲ್ಲಿ ಯಾವುದೇ ಸಂಶಯಗಳಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.
ಆದರೂ, ಹಿಂದೂ ಭಯೋತ್ಪಾದಕರಿಂದ ಕರ್ಕರೆಗೆ ಬೆದರಿಕೆಯಿತ್ತು, ಈ ಬಗ್ಗೆ ನನ್ನಲ್ಲಿ ಅವರು ತನ್ನ ಕಳವಳವನ್ನು ತೋಡಿಕೊಂಡಿದ್ದರು. ಸಾವಿಗೀಡಾದ ದಿನವೇ ನನ್ನಲ್ಲಿ ದೂರವಾಣಿ ಮಾತುಕತೆ ನಡೆಸಿದ್ದರು ಎಂದು ಕಾಂಗ್ರೆಸ್‌ನ ವಿವಾದಿತ ನಾಯಕ ಹೇಳಿಕೊಂಡಿದ್ದರು. ಇದನ್ನು ಸ್ವತಃ ಕರ್ಕರೆಯವರ ಪತ್ನಿ ನಿರಾಕರಿಸಿದ್ದ ಹೊರತಾಗಿಯೂ, ತನ್ನ ವಾದದಿಂದ ದಿಗ್ವಿಜಯ್ ಹಿಂದಕ್ಕೆ ಸರಿದಿರಲಿಲ್ಲ.
ಮುಂಬೈ ದಾಳಿಯಲ್ಲಿ ಆರೆಸ್ಸೆಸ್ ಕೈವಾಡವಿದೆ ಎಂಬ ಪುಸ್ತಕ ಬಿಡುಗಡೆ ಸಮಾರಂಭದಲ್ಲಿಯೂ ಇತ್ತೀಚೆಗಷ್ಟೇ ಪಾಲ್ಗೊಂಡಿದ್ದ ಕಾಂಗ್ರೆಸ್ ಹಿರಿಯ ನಾಯಕ, ತನ್ನ ಮಾತನ್ನು ಪುನರುಚ್ಛರಿಸಿದ್ದನ್ನು ಸ್ಮರಿಸಬಹುದಾಗಿದೆ.