ಬೋಫೋರ್ಸ್ ಸಂಬಂಧ 'ಕಲ್ಪಿಸುವ' ಜೇಟ್ಲಿ ವಿರುದ್ಧ ಮೊಯ್ಲಿ ಕಿಡಿ
ಬೆಂಗಳೂರು, ಮಂಗಳವಾರ, 4 ಜನವರಿ 2011( 14:10 IST )
ಇಟಲಿ ಮೂಲದ ಉದ್ಯಮಿ ಒಟ್ಟಾವಿಯೋ ಕ್ವಟ್ರೋಚಿ ಮತ್ತು ಕಾಂಗ್ರೆಸ್ ನಾಯಕರ ನಡುವೆ ಸಂಬಂಧ ಕಲ್ಪಿಸಲು ಪ್ರಯತ್ನಿಸಿರುವ ಹಿರಿಯ ಬಿಜೆಪಿ ನಾಯಕ ಅರುಣ್ ಜೇಟ್ಲಿ ಅವರ ಮೇಲೆ, ಸೋಮವಾರ ಕಾನೂನು ಸಚಿವ ವೀರಪ್ಪ ಮೊಯಿಲಿ ಹರಿಹಾಯ್ದಿದ್ದಾರೆ.
ಕ್ವಟ್ರೋಚಿ ಮತ್ತು ಅವರ ಪಾಲುದಾರ ವಿನ್ ಛಡ್ಡಾ ಅವರು ಬೋಫೋರ್ಸ್ ಫಿರಂಗಿ ಖರೀದಿ ವೇಳೆ ಕಮಿಷನ್ ಹಣ ಪಡೆದಿದ್ದರು ಎಂಬ ಆದಾಯ ತೆರಿಗೆ ನ್ಯಾಯಮಂಡಳಿ ಸಲ್ಲಿಸಿದ್ದ ವರದಿಯನ್ನು ಆಧರಿಸಿ, ಅರುಣ್ ಜೇಟ್ಲಿ ಕೊಟ್ಟಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಮೊಯಿಲಿ, ಕ್ವಟ್ರೋಚಿ ಮತ್ತು ಕಾಂಗ್ರೆಸ್ ನಡುವೆ ನೇರ ಸಂಬಂಧ ಕಲ್ಪಿಸುವುದು ಆಧಾರರಹಿತ ಮತ್ತು ನ್ಯಾಯಸಮ್ಮತವಾದುದಲ್ಲ ಎಂದಿದ್ದಾರೆ.
ಜೇಟ್ಲಿ ಹೇಳಿಕೆ ಅವಗಣನೆಗೆ ಅರ್ಹ ಎಂದಿರುವ ಮೊಯಿಲಿ, ಆದಾಯ ತೆರಿಗೆ ನ್ಯಾಯಮಂಡಳಿ ಸಲ್ಲಿಸಿದ್ದ ವರದಿಯನ್ನು ಕೇಂದ್ರ ಸರಕಾರ ಅಧ್ಯಯನ ನಡೆಸಲಿದೆ ಎಂದರು.
1987 ರಲ್ಲಿ ನಡೆದ 1500 ಕೋಟಿ ರೂ. ಮೌಲ್ಯದ ಹೋವಿಟ್ಜರ್ ಫಿರಂಗಿ ಖರೀದಿಯಲ್ಲಿ, ಕ್ವಟ್ರೋಚಿ ಮತ್ತು ಛಡ್ಡಾ ಸುಮಾರು 41 ಕೋಟಿ ರೂ. ಹಣವನ್ನು ಕಮಿಷನ್ ರೂಪದಲ್ಲಿ ಪಡೆದಿದ್ದರು ಎಂದು ನ್ಯಾಯಮಂಡಳಿ ವರದಿ ಸಲ್ಲಿಸಿತ್ತು.
ನ್ಯಾಯಮಂಡಳಿ ವರದಿಯನ್ನು 'ತನ್ನಿಂತಾನೇ ಸತ್ಯ ಹೊರಬಿದ್ದಂತಾಗಿದೆ' ಎಂದಿರುವ ಜೇಟ್ಲಿ, ಭ್ರಷ್ಟಾಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಮೇಲೆ ಕಿಡಿಕಾರಿದ್ದಾರೆ.