ಪ್ರಸಿದ್ಧ ಶಿರ್ಡಿ ಸಾಯಿಬಾಬಾ ಕ್ಷೇತ್ರ ಮಹಾರಾಷ್ಟ್ರದ ಶ್ರೀಮಂತ ದೇವಾಲಯಗಳಲ್ಲಿ ಒಂದಾಗಿದ್ದು, ಇಲ್ಲಿ ಒಟ್ಟು 32 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳಿವೆಯಂತೆ. ದೇಗುಲದ ಒಟ್ಟು ಹೂಡಿಕೆ ಸುಮಾರು 4,27,17,02,929 ರೂಪಾಯಿಗಳು! ಇದು ಅಧಿಕೃತ ಮಾಹಿತಿ.
ಮಹಾರಾಷ್ಟ್ರ ಸರ್ಕಾರ ರಚಿಸಿರುವ ಆಡಳಿತ ಮಂಡಳಿಯನ್ನು ಹೊಂದಿರುವ ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ (ಶಿರ್ಡಿ) 51,71,00,100 ರೂ. ಮೌಲ್ಯದ ಕಿಸಾನ್ ವಿಕಾಸ್ ಪತ್ರ, ಭಾರತ ಸರ್ಕಾರದ ಶೇ.8 ರೂ. ಬಡ್ಡಿಯ 48,15,53,000 ರೂ. ಉಳಿತಾಯ ಠೇವಣಿ, ಮಹಾರಾಷ್ಟ್ರದ ಜೀವನ್ ಪ್ರಾಧಿಕಾರನ್‌ದಲ್ಲಿ 8 ಕೋಟಿ ರೂ., ಇನ್ನಿತರ ಕೆಲವು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ 3,19,30,49,929 ರೂ. ಠೇವಣಿ ಹಾಗೂ ಪ್ರಸ್ತುತ 47,82,31,835.64 ರೂ.ಗಳ ಮೂಲಧನವನ್ನು ಹೊಂದಿದೆ.
24,41,10,640 ರೂ. ಮೌಲ್ಯದ ಬಂಗಾರದ ಅಲಂಕಾರಿಕ ವಸ್ತು ಮತ್ತು ಆಭರಣಗಳು, 3,26,19,152 ರೂ. ಮೌಲ್ಯದ ಬೆಳ್ಳಿ ಆಭರಣ, 612,317 ರೂ. ಮೊತ್ತದ ಬೆಳ್ಳಿ ನಾಣ್ಯ, 1,28,89,749 ರೂ. ಮೌಲ್ಯದ ಚಿನ್ನದ ನಾಣ್ಯ, 1,12,31,903 ರೂ. ಮೌಲ್ಯದ ಚಿನ್ನದ ಪದಕಗಳನ್ನು ಶಿರ್ಡಿ ಸಂಸ್ಥೆ ಹೊಂದಿದೆ.
ಶಿರ್ಡಿ ಆಡಳಿತ ಮಂಡಳಿಯ 2009-10ನೇ ಸಾಲಿನ ವಾರ್ಷಿಕ ಲೆಕ್ಕಪತ್ರವನ್ನು, ಡಿಸೆಂಬರ್ 2010ರ ವಿಧಾನಸಭಾ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಾಗಿತ್ತು ಎಂದು ಲೆಕ್ಕಪರಿಶೋಧಕ ಶರದ್ ಎಸ್ ಗಾಯಕ್‌ವಾಡ್ ತಿಳಿಸಿದ್ದಾರೆ.
ಚಿನ್ನ ಮತ್ತು ಬೆಳ್ಳಿ ಸೇರಿದಂತೆ ಒಟ್ಟಾರೆ ಅಲಂಕಾರಿಕ ವಸ್ತು ಮತ್ತು ಆಭರಣಗಳ ಮೌಲ್ಯ ಸುಮಾರು 32,23,59,372 ರೂ. ಗಳು ಎಂದು ವಿವರಣೆ ನೀಡಲಾಗಿದೆ.
ದೇವಾಲಯದ 2009-10ನೇ ಸಾಲಿನ ವಾರ್ಷಿಕ ನಿವ್ವಳ ಲಾಭ 94,67,79,142 ರೂ.ಗಳು. ಇದು 2008-09ನೇ ಸಾಲಿನ 87,22,71,012 ರೂ. ನಿವ್ವಳ ಲಾಭವನ್ನು ಮೀರಿಸಿದೆ.
ಬಾಡಿಗೆಯಿಂದ ಬಂದ ಮೊತ್ತ - 1,64,88,01,030 ರೂ., ಹೂಡಿಕೆ ಹಣ, ದತ್ತಿ ಹಾಗೂ ಬ್ಯಾಂಕ್ ಖಾತೆಯ ಮೊತ್ತ 1,51,51,43,503 ರೂ.ಗಳು. ಎಂಟು ಲಕ್ಷದ ಸಾಯಿಬಾಬಾ ಮೂರ್ತಿ ಸೇರಿದಂತೆ ಸ್ಥಿರಾಸ್ತಿ ಮತ್ತು ಕಟ್ಟಡಗಳ ಮೌಲ್ಯ- 79,28,30,95 ರೂ.
2,00,79,164 ರೂ. ಮೌಲ್ಯದ ಅತ್ಯಮೂಲ್ಯ ಮುತ್ತು-ರತ್ನಗಳನ್ನು ಸಾರ್ವಜನಿಕ ಹರಾಜು ಹಾಕುವ ಮೂಲಕ ಸಂಸ್ಥೆಗೆ ಹಣ ಹೊಂದಿಸುವ ಕ್ರಮಕ್ಕೆ ತಡೆ ಹೇರಬೇಕೆಂದು ಆಡಳಿತ ಸಮಿತಿಗೆ ಲೆಕ್ಕಪರಿಶೋಧಕರು ಸಲಹೆ ನೀಡಿದ್ದಾರೆ.
2009-10ರಲ್ಲಿ 2,44,888 ರೂ. ಮೌಲ್ಯದ 147.10 ಗ್ರಾಂ ಚಿನ್ನ, 1,02,640 ರೂ. ಮೌಲ್ಯದ 4508 ಗ್ರಾಂ ಬೆಳ್ಳಿಯನ್ನು ದೇವಳ ಸ್ವೀಕರಿಸಿದೆ ಎಂದು ವರದಿ ತಿಳಿಸಿದೆ.