ಬೋಫೋರ್ಸ್ ಹಗರಣದ ಪ್ರಮುಖ ಆರೋಪಿ, ಇಟಲಿ ಉದ್ಯಮಿ ಒಟ್ಟಾವಿಯೊ ಕ್ವಟ್ರೋಚಿಯನ್ನು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ರಕ್ಷಿಸುತ್ತಿದ್ದಾರೆ ಎಂದು ಕಿಡಿಕಾರಿರುವ ಬಿಜೆಪಿ, ಕ್ಷಮೆ ಯಾಚಿಸುವಂತೆ ಆಗ್ರಹಿಸಿದೆ. ಅಲ್ಲದೆ, ಕ್ವಟ್ರೋಚಿಯನ್ನು ನೆಹರೂ ಕುಟುಂಬ ರಕ್ಷಿಸುತ್ತಿದೆ ಎಂದು ಆರೋಪಿಸಿದೆ.
ಪ್ರಧಾನಿಯವರೇ, ನೀವು ಕ್ವಟ್ರೋಚಿಗೆ ಕ್ಲೀನ್ ಚಿಟ್ ನೀಡಲು ಯತ್ನಿಸಿದ್ದೀರಿ ಎಂದು ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್ ಕುಟುಕಿದ್ದಾರೆ. ಈ ಹಿಂದೆ ಕ್ವಟ್ರೋಚಿ ಬಗ್ಗೆ ಪ್ರಧಾನಿ ನೀಡಿರುವ ಎಲ್ಲಾ ಹೇಳಿಕೆಗಳನ್ನು ನೆನಪು ಮಾಡಿಕೊಟ್ಟಿರುವ ಬಿಜೆಪಿ, ಕೂಡಲೇ ಕ್ಷಮೆ ಯಾಚಿಸುವಂತೆ ಒತ್ತಾಯಿಸಿದೆ.
'ಜನರನ್ನು ಪೀಡಿಸುವುದು ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ ಉತ್ತಮ ಬೆಳವಣಿಗೆಯಲ್ಲ. ಕ್ವಟ್ರೋಚಿ ಕೇಸು ಭಾರತ ಸರ್ಕಾರವನ್ನು ಮುಜುಗರಕ್ಕೆ ಈಡು ಮಾಡುತ್ತಿದೆ' ಎಂದು ಪ್ರಧಾನಿ ಈ ಹಿಂದೆ ಹೇಳಿದ್ದನ್ನು ನಾನು ನೆನಪಿಸುತ್ತಿದ್ದೇನೆ. ಅದೇ ಕ್ವಟ್ರೋಚ್ಚಿಯನ್ನು ಈಗ ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣವು, ದಲ್ಲಾಳಿ ಎಂದು ಹೇಳಿದೆ. ಆತನಿಗೆ ಕಿಕ್‌ಬ್ಯಾಕ್‌ಗಳನ್ನು ನೀಡಲಾಗಿತ್ತು ಎಂದು ಸ್ಪಷ್ಟವಾಗಿ ತಿಳಿಸಿದೆ. ಹಾಗಾಗಿ ತನ್ನ ಹಿಂದಿನ ಹೇಳಿಕೆಗಾಗಿ ಪ್ರಧಾನಿಯವರು ಕ್ಷಮೆ ಯಾಚಿಸಬೇಕು ಎಂದು ಪ್ರಸಾದ್ ಹೇಳಿದರು.
ಕ್ವಟ್ರೋಚಿಯನ್ನು ರಕ್ಷಿಸುತ್ತಿರುವ ನೆಹರೂ ಕುಟುಂಬದ ಮೇಲೂ ಅವರು ತೀವ್ರ ವಾಗ್ದಾಳಿ ನಡೆಸಿದರು.
ಗಾಂಧಿಗಳಿಗೆ (ನೆಹರೂ ಕುಟುಂಬ) ಆಪ್ತನಾಗಿದ್ದ ಎಂಬ ಕಾರಣಕ್ಕೆ ಆತನನ್ನು ರಕ್ಷಿಸಲು ಅಧಿಕಾರ ದುರುಪಯೋಗಪಡಿಸಿಕೊಳ್ಳಲಾಯಿತು. ಕ್ವಟ್ರೋಚಿಯನ್ನು ರಕ್ಷಿಸಲು ಒಂದು ಪ್ರಭಾವಿ ಕಾಣದ ಕೈ ಇಲ್ಲಿದೆ ಎಂದೂ ಅವರು ಆರೋಪಿಸಿದರು.
ಬೋಫೋರ್ಸ್ ಒಪ್ಪಂದಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣ ಹೇಳಿರುವುದರಲ್ಲಿ ಹೊಸದೇನೂ ಇಲ್ಲದಿರುವುದರಿಂದ, ಇಟಲಿ ಉದ್ಯಮಿ ಕ್ವಟ್ರೊಚಿ ವಿರುದ್ಧದ ತನ್ನ ಪ್ರಕರಣವನ್ನು ಹಿಂದಕ್ಕೆ ಪಡೆಯಬೇಕೆಂಬ ಮನವಿಯನ್ನು ಪುರಸ್ಕರಿಸಬೇಕು ಎಂದು ಸಿಬಿಐ ಸುಪ್ರೀಂ ಕೋರ್ಟಿನಲ್ಲಿ ಇಂದು ಅರ್ಜಿ ಸಲ್ಲಿಸಿದ ನಂತರ ಬಿಜೆಪಿ ಉರಿದು ಬಿದ್ದಿದೆ.
ಉದ್ದೇಶ ಪೂರ್ವಕವಾಗಿ ತನಿಖೆಯನ್ನು ಸಂಕಷ್ಟಕ್ಕೆ ಸಿಲುಕಿಸಿದ್ದ ಅವರು, ಈಗ ಕೇಸು ಬೇಡ ಎನ್ನುತ್ತಿದ್ದಾರೆ ಎಂದು ಬಿಜೆಪಿ, ಸಿಬಿಐ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.