ಬಿ.ಎಸ್. ಯಡಿಯೂರಪ್ಪ ಕರ್ನಾಟಕದ ಅತಿ ಭ್ರಷ್ಟ ಮುಖ್ಯಮಂತ್ರಿ ಎಂದು ಮತ್ತೊಮ್ಮೆ ಜರೆದಿರುವ ಮಾಜಿ ಪ್ರಧಾನ ಮಂತ್ರಿ ಎಚ್.ಡಿ. ದೇವೇಗೌಡ, ಇದೀಗ ಹೊರ ಬಂದಿರುವ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಫಲಿತಾಂಶ ಬಿಜೆಪಿಗೆ ಆಗಿರುವ ಮಹತ್ವದ ಹಿನ್ನಡೆ ಹಾಗೂ ಗೆಲುವು ಸಾಧಿಸಲು ಹಣಬಲ ಮತ್ತು ಅಧಿಕಾರ ದುರ್ಬಳಕೆ ಮಾಡಲಾಗಿತ್ತು ಎಂದು ಆರೋಪಿಸಿದ್ದಾರೆ.
ಚುನಾವಣಾ ಫಲಿತಾಂಶ ಘೋಷಣೆಯಾದ ನಂತರ ನವದೆಹಲಿಯಲ್ಲಿ ಪತ್ರಕರ್ತರ ಜತೆ ಮಾತನಾಡಿದ ಅವರು, ಇತರ ರಾಜಕೀಯ ಪಕ್ಷಗಳತ್ತ ಬೆಟ್ಟು ತೋರಿಸುವ ಮೊದಲು ಬಿಜೆಪಿ ಕರ್ನಾಟಕ ಮುಖ್ಯಮಂತ್ರಿ ಯಡಿಯೂರಪ್ಪನವರ ಸಾಕಷ್ಟು ಹಗರಣಗಳ ಬಗ್ಗೆ ಚಿಂತಿಸಬೇಕು ಎಂದು ಸಲಹೆ ನೀಡಿದರು.
ಬಿಜೆಪಿಗೆ ನಿಜಕ್ಕೂ ನಾಚಿಕೆ ಎಂಬುದು ಇದ್ದರೆ, ಸಾಕಷ್ಟು ಹಗರಣ ಆರೋಪ ಎದುರಿಸುತ್ತಿರುವ ತನ್ನದೇ ಮುಖ್ಯಮಂತ್ರಿ ವಿರುದ್ಧ ಕ್ರಮ ಕೈಗೊಳ್ಳಲಿ. ಆ ಮುಖ್ಯಮಂತ್ರಿಗೆ ನಾಚಿಕೆಯೇ ಇಲ್ಲ. ಕಳೆದ 60 ವರ್ಷದ ನನ್ನ ರಾಜಕೀಯದಲ್ಲಿ ಇಂತಹ ಮುಖ್ಯಮಂತ್ರಿಯನ್ನು ನಾನು ನೋಡಿಲ್ಲ ಎಂದು ಕಿಡಿ ಕಾರಿದರು.
ರಾಷ್ಟ್ರ ರಾಜಧಾನಿಯಲ್ಲಿ ಜೆಡಿಎಸ್ ನೂತನ ಕಚೇರಿಯನ್ನು ಉದ್ಘಾಟಿಸಿದ ನಂತರ ಅವರು ಮಾತನಾಡುತ್ತಿದ್ದರು.
ತನ್ನ ಪುತ್ರನ ವಿರುದ್ಧ ಸಿಎಂ ಬಳಸುತ್ತಿರುವ ಭಾಷೆಯೂ ಗೌಡರಿಗೆ ಕಿರಿಕಿರಿ ತರಿಸಿರುವುದು ಬಹಿರಂಗವಾಗಿದೆ.
ಮುಖ್ಯಮಂತ್ರಿಯ ಭ್ರಷ್ಟಾಚಾರವನ್ನು ಬಯಲು ಮಾಡಿದ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿಯವರ ಬಗ್ಗೆ ಯಡಿಯೂರಪ್ಪ ಬಹಿರಂಗವಾಗಿ ಅಸಹ್ಯಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರು ಬಳಸುತ್ತಿರುವ ಭಾಷೆ ಸರಿಯಿಲ್ಲ. ಜೆಡಿಎಸ್‌ನ್ನು ಬೇರು ಸಹಿತ ಕಿತ್ತು ಹಾಕುತ್ತೇನೆ ಎಂಬ ಮಾತಂತೂ ಆಘಾತ ತಂದಿದೆ ಎಂದು ಗೌಡರು ತಿಳಿಸಿದರು.
ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣಾ ಫಲಿತಾಂಶದ ಕುರಿತು ಕೂಡ ಕೇಸರಿ ಪಕ್ಷದ ಮೇಲೆ ಹರಿಹಾಯ್ದರು. ಜಿ.ಪಂ.ನಲ್ಲಿ ಬಿಜೆಪಿ 12ರಲ್ಲಿ ಗೆದ್ದಿದೆ. ತಲಾ ನಾಲ್ಕರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ಗಳು ಗೆದ್ದಿವೆ. 10ರಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಇವುಗಳಲ್ಲಿ ಬಹುತೇಕ ನಮ್ಮ ಮಡಿಲಿಗೆ ಬೀಳಲಿವೆ. ಒಟ್ಟಾರೆ ಫಲಿತಾಂಶ ಬಿಜೆಪಿಗೆ ಆಗಿರುವ ಹಿನ್ನಡೆ ಎಂದರು.
ಚುನಾವಣೆ ಸಂದರ್ಭದಲ್ಲಿ ಸಾಕಷ್ಟು ಅಕ್ರಮಗಳು ನಡೆದಿವೆ. ಬಿಜೆಪಿ ಸರಕಾರವು ಪೊಲೀಸ್ ಇಲಾಖೆ ಮತ್ತು ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡಿದೆ. ಇದನ್ನು ನಮ್ಮ ಪಕ್ಷದ ಕಾರ್ಯಕರ್ತರೇ ಪತ್ತೆ ಹಚ್ಚಿದ್ದಾರೆ. ಹಣ ಮತ್ತು ಹೆಂಡ ಹಂಚಲು ಪೊಲೀಸ್ ಜೀಪನ್ನೇ ಬಳಸುವ ಹಂತಕ್ಕೆ ಈ ಬಾರಿ ಚುನಾವಣೆ ಹೋಗಿತ್ತು ಎಂದು ಆರೋಪಿಸಿದರು.
ಬಿಜೆಪಿಗೆ ತೀವ್ರ ಹಿನ್ನಡೆಯಾಗಿರುವುದು ಸ್ಪಷ್ಟ. ಅದರ ಬಲ ಕುಸಿದಿದೆ. ನಾವು ಮತ್ತಷ್ಟು ಪ್ರಬಲರಾಗಿದ್ದೇವೆ. ಅವರು ಗೆದ್ದಿರುವುದು ಅಕ್ರಮಗಳ ಮೂಲಕ ಎಂದೂ ಗೌಡರು ವಾಗ್ದಾಳಿ ನಡೆಸಿದರು.