ಕರ್ನಾಟಕದ ಹಾಲಪ್ಪ ಪ್ರಕರಣದ ಬೆನ್ನಿಗೆ ಶಾಸಕರು ಅತ್ಯಾಚಾರ ಮಾಡುವುದನ್ನು ಗೌರವದ ಕೆಲಸ ಎಂದು ಭಾವಿಸಿದಂತಿದೆ. ಇತ್ತೀಚೆಗಷ್ಟೇ ಉತ್ತರ ಪ್ರದೇಶದಲ್ಲೊಬ್ಬನ, ಬಿಹಾರದಲ್ಲಿ ಇನ್ನೊಬ್ಬನ ಅತ್ಯಾಚಾರ ಪ್ರಕರಣಗಳು ಹೊರ ಬಿದ್ದಿವೆ. ಅವರಲ್ಲೊಬ್ಬ ಹೇಳಿಕೊಂಡಿರುವುದು -- ನಾನು ಷಂಡ, ಅತ್ಯಾಚಾರ ಮಾಡುವುದು ಹೇಗೆ ಎಂದು ಪ್ರಶ್ನಿಸಿದ್ದಾನೆ!
ಹೀಗೆಂದು ಹೇಳಿರುವುದು ದಲಿತೋದ್ಧಾರಕಿ ಎಂದು ಹೇಳಿಕೊಳ್ಳುತ್ತಿರುವ ಮಹಾನುಭಾವ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿಯವರ ಬಹುಜನ ಸಮಾಜ ಪಕ್ಷದ ಶಾಸಕ. ಇತ್ತೀಚೆಗಷ್ಟೇ 17ರ ಹರೆಯದ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿ, ಆಕೆಯನ್ನು ಸುಳ್ಳು ಕೇಸಿನ ಮೂಲಕ ಜೈಲಿಗಟ್ಟಿದ್ದ ಈತನ ಹೆಸರು ಪುರುಷೋತ್ತಮ ನಾರಾಯಣ ದ್ವಿವೇದಿ.
ಪಕ್ಷದಿಂದ ಅಮಾನತುಗೊಂಡಿರುವ ಈ ಭೂಪ ಪತ್ರಕರ್ತರೊಂದಿಗೆ ಮಾತನಾಡುತ್ತಾ, 'ಅತ್ಯಾಚಾರ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಿ ಹಾಕಲಾಗಿದೆ. ಅತ್ಯಾಚಾರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಯಾಕೆಂದರೆ ನನಗೆ ಅತ್ಯಾಚಾರ ಮಾಡುವ ಸಾಮರ್ಥ್ಯವೇ ಇಲ್ಲ. ನಾನೊಬ್ಬ ಷಂಡ' ಎಂದು ಘೋಷಿಸಿಕೊಂಡಿದ್ದಾನೆ.
ಸುಮ್ಮನೆ ಹೇಳಿಕೆಯೆಂದೋ ಅಥವಾ ಹಾರಿಕೆ ಉತ್ತರವೆಂದೋ ನೀವು ಅಂದುಕೊಳ್ಳಬೇಕಿಲ್ಲ. ನಾನು ದೇಶದ ಯಾವುದೇ ಪ್ರತಿಷ್ಠಿತ ವೈದ್ಯಕೀಯ ಪರೀಕ್ಷೆಗೆ ಒಳಪಡಲು ಸಿದ್ಧನಿದ್ದೇನೆ. ನಾನು ಹೇಳುತ್ತಿರುವುದು ಸತ್ಯ. ಖಂಡಿತಕ್ಕೂ ನಾನು ಕೈಲಾಗದವ. ನನ್ನ ವಿರುದ್ಧದ ಪ್ರಕರಣ ರಾಜಕೀಯ ಪ್ರೇರಿತವಾಗಿದೆ ಎಂದು 'ಪುರುಷೋತ್ತಮ' ತಿಳಿಸಿದ್ದಾನೆ.
ಕೆಲ ದಿನಗಳ ಹಿಂದೆ ತನ್ನ ತಂದೆಯನ್ನು ಹೆದರಿಸಿ, ತನ್ನನ್ನು ಬೇರೆಯವರಿಗೆ ಮಾರಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷನ ಬಿಗಿ ಹಿಡಿತದಿಂದ ಪಾರಾಗಲು, ಈ ಶಾಸಕನ ಸಹಾಯ ಯಾಚಿಸಿದ ಬಾಲಕಿಯನ್ನು ಅತ್ಯಾಚಾರ ಮಾಡಲಾಗಿತ್ತು. ಬಳಿಕ, ಆಕೆ ತನ್ನ ಮನೆಯಿಂದ ಕಳ್ಳತನ ಮಾಡಿದ್ದಾಳೆ ಎಂದು ಆರೋಪಿಸಿ ಬಲಿಪಶುವನ್ನೇ ಜೈಲಿಗೆ ತಳ್ಳಿಸಿದ ಈ ಪುರುಷೋತ್ತಮ. ಇದು ನಡೆದದ್ದು ಉತ್ತರ ಪ್ರದೇಶದ ಬಂಡಾ ಜಿಲ್ಲೆಯಲ್ಲಿ.
ಬಾಲಕಿ ಆರೋಪ ಮಾಡಿದ ಬೆನ್ನಿಗೆ ಇತರ ರಾಜಕೀಯ ಪಕ್ಷಗಳು ಮಾಯಾವತಿ ಮೇಲೆ ಮುಗಿ ಬಿದ್ದಿದ್ದವು. ಬಿಸಿಯರಿತ ಮುಖ್ಯಮಂತ್ರಿ ತಕ್ಷಣವೇ ಶಾಸಕನನ್ನು ಪಕ್ಷದಿಂದ ಅಮಾನತು ಮಾಡಿದ್ದರು. ಅಲ್ಲದೆ ಸಿಐಡಿ ತನಿಖೆಗೆ ಆದೇಶ ನೀಡಿದ್ದರು. ಕೃತ್ಯ ಸಾಬೀತಾದರೆ ಜೈಲಿಗೆ ತಳ್ಳುವುದಾಗಿಯೂ ಹೇಳಿದ್ದರು.