ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಂಗ್ರೆಸ್ ಸರಕಾರ ಲಂಚ ನೀಡಿದ್ದು ಹೌದು: ಸಿಬಿಐ ಅಧಿಕಾರಿ
(Bofors gun deal | SK Jain | Ottavio Quattrocchi | Congress)
ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಸೇರಿದಂತೆ ಹಲವರು ಪಾಲ್ಗೊಂಡಿದ್ದಾರೆ ಎಂದು ಹೇಳಲಾಗಿರುವ, ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಡೆದಿದ್ದ ಬೋಫೋರ್ಸ್ ಹಗರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಲಂಚ ನೀಡಿದ್ದು ಹೌದು ಎಂದು ಮೊನ್ನೆ ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣ ಹೇಳಿದ ಬೆನ್ನಿಗೆ, ಸಿಬಿಐ ಮಾಜಿ ಅಧಿಕಾರಿಯೊಬ್ಬರು ಕೂಡ ದನಿಗೂಡಿಸಿದ್ದಾರೆ.
ಹವಾಲಾ ಡೀಲರ್ ಎಸ್.ಕೆ. ಜೈನ್ ಮತ್ತು ಇಟಲಿ ಉದ್ಯಮಿ ಒಟ್ಟಾವಿಯೋ ಕ್ವಟ್ರೋಚಿ (ನೆಹರೂ ಕುಟುಂಬದ ಆಪ್ತ) ಹೋವಿಟ್ಜರ್ ಮತ್ತು ಇತರ ಶಸ್ತ್ರಾಸ್ತ್ರ ಖರೀದಿ ವ್ಯವಹಾರದಲ್ಲಿ ಲಂಚ (ಕಿಕ್‌ಬ್ಯಾಕ್) ಪಡೆದಿರುವುದನ್ನು ಜೈನ್ ತನ್ನ ವಿಚಾರಣೆ ಸಂದರ್ಭದಲ್ಲಿ ಒಪ್ಪಿಕೊಂಡಿದ್ದರು ಎಂದು ಆ ತನಿಖೆಯ ನೇತೃತ್ವ ವಹಿಸಿದ್ದ ಸಿಬಿಐ ಮಾಜಿ ಜಂಟಿ ನಿರ್ದೇಶಕ ಬಿ.ಆರ್. ಲಾಲ್ ಬಹಿರಂಗಪಡಿಸಿದ್ದಾರೆ.
ಹೋವಿಟ್ಜರ್ ಮತ್ತಿತರ ಶಸ್ತಾಸ್ತ್ರಗಳ ಖರೀದಿ ವ್ಯವಹಾರದಲ್ಲಿ ಹವಾಲಾ ಡೀಲರ್ ಎಸ್.ಕೆ. ಜೈನ್ ಮತ್ತು ಇಟಲಿಯ ಶಸ್ತಾಸ್ತ್ರ ವ್ಯಾಪಾರಿ ಒಟ್ಟಾವಿಯೊ ಕ್ವಟ್ರೋಚಿ ಲಂಚ ಪಡೆದಿದ್ದನ್ನು 1995ರ ಮಾರ್ಚ್ 13ರಂದು ನೀಡಿದ ಲಿಖಿತ ಹೇಳಿಕೆಯಲ್ಲಿ ಜೈನ್ ದೃಢಪಡಿಸಿರುವುದಾಗಿ ಆಗ ತನಿಖೆಯ ನೇತೃತ್ವ ವಹಿಸಿದ್ದ ಸಿಬಿಐನ ಮಾಜಿ ಜಂಟಿ ನಿರ್ದೇಶಕ ಬಿ.ಆರ್. ಲಾಲ್ ಬಹಿರಂಗಪಡಿಸಿದ್ದಾರೆ.
ಸಿಬಿಐ ಮುಂದೆ ಜೈನ್ ಹೀಗೆ ಹೇಳಿರುವುದು 1995ರ ಮಾರ್ಚ್ 13ರಂದು. ಉನ್ನತರು ಮತ್ತು ಪ್ರಭಾವಿ ವ್ಯಕ್ತಿಗಳೊಂದಿಗೆ (?) ಆಪ್ತ ಸಂಬಂಧ ಹೊಂದಿದ್ದ ಜೈನ್ ಮತ್ತು ಕ್ವಟ್ರೋಚಿ, ಪಾಲುದಾರಿಕೆಯಲ್ಲಿ ಗುತ್ತಿಗೆ ಪಡೆದುಕೊಂಡಿದ್ದರು. 1,500 ಕೋಟಿ ರೂಪಾಯಿ ವ್ಯವಹಾರದ ಬೋಫೋರ್ಸ್ ಒಪ್ಪಂದದಲ್ಲಿ ಅವರಿಬ್ಬರು ಜಂಟಿಯಾಗಿ ಪಡೆದಿದ್ದ ಕಮೀಷನ್ ಶೇ.10. ಅದರಲ್ಲಿ ಶೇ.7 ಕ್ವಟ್ರೋಚಿ ಹಾಗೂ ಶೇ.3 ಜೈನ್‌ಗೆ ಸೇರಿತ್ತು ಎಂದು ಲಾಲ್ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಅದಕ್ಕಿಂತಲೂ ಆಘಾತಕಾರಿ ವಿಚಾರವೆಂದರೆ ಸಿಬಿಐ ಮೇಲೆ ಕಾಂಗ್ರೆಸ್ ನಾಯಕರು ಒತ್ತಡ ಹೇರಿದ್ದರು ಎನ್ನುವುದು. ಬೋಫೋರ್ಸ್ ಹಗರಣದಲ್ಲಿ ಹಲವು ಪ್ರಭಾವಿ ವ್ಯಕ್ತಿಗಳ ಹೆಸರುಗಳು ತನಿಖೆಯ ಸಂದರ್ಭದಲ್ಲಿ ಬಯಲಿಗೆ ಬಂದ ಕಾರಣ ಹೀಗಾಗಿತ್ತು ಎನ್ನುವುದು ಲಾಲ್ ಆರೋಪ.
ಆಗಿನ ಪ್ರಧಾನಿ, ದಿವಂಗತ ಪಿ.ವಿ. ನರಸಿಂಹ ರಾವ್ ಕಚೇರಿಯಲ್ಲಿನ ಅಧಿಕಾರಿಗಳು, ರಾಜಕಾರಣಿಗಳು, ಪ್ರಭಾವಿ ವ್ಯಕ್ತಿಗಳು ಸೇರಿದಂತೆ ಹಲವು ಮಂದಿಯಿಂದ ತಾನು ಈ ಪ್ರಕರಣದ ತನಿಖೆಯ ಸಂದರ್ಭದಲ್ಲಿ ಒತ್ತಡ ಎದುರಿಸಿದ್ದೆ. ಅದೇ ಕಾರಣದಿಂದ ನಂತರ ನನ್ನನ್ನು ವರ್ಗಾವಣೆ ಮಾಡುವ ಮೂಲಕ ಪ್ರಕರಣದ ತನಿಖೆಯಿಂದ ದೂರ ಇಡಲಾಯಿತು ಎಂದು ಆಪಾದಿಸಿದ್ದಾರೆ.
ಸ್ವೀಡನ್ ಕಂಪನಿ ಎ.ಬಿ. ಬೋಫೋರ್ಸ್ ಜತೆ ಭಾರತ ಸರಕಾರವು 15 ಬಿಲಿಯನ್ ರೂಪಾಯಿ ಮೊತ್ತದ ಒಪ್ಪಂದಕ್ಕೆ 1986ರ ಮಾರ್ಚ್ 24ರಂದು ಸಹಿ ಹಾಕಿತ್ತು. ಇಲ್ಲಿ ಹಲವು ರಾಜಕಾರಣಿಗಳು ಲಂಚ ಪಡೆದಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ 1990ರ ಜನವರಿ 22ರಂದು ಸಿಬಿಐ ಮೊದಲ ಪ್ರಕರಣ ದಾಖಲಿಸಿತ್ತು. ಪ್ರಸಕ್ತ ಅದರ ತನಿಖೆಯನ್ನು ಬಹುತೇಕ ಕೈ ಬಿಡಲಾಗಿದೆ.