ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕರುಣಾನಿಧಿ ಮನೆ ಜಗಳ; ಸಚಿವಗಿರಿಗೆ ಅಳಗಿರಿ ರಾಜೀನಾಮೆ? (DMK | M Karunanidhi | MK Alagiri | A Raja)
Bookmark and Share Feedback Print
 
ಕರ್ನಾಟಕದಂತೆ ತಮಿಳುನಾಡಿನಲ್ಲೂ ಇರುವ ಮತ್ತೊಂದು ಅಪ್ಪ-ಮಕ್ಕಳ ಪಕ್ಷ ಡಿಎಂಕೆ. ಆದರೆ ಅದರಲ್ಲಿ ಎಲ್ಲವೂ ಸರಿಯಿದ್ದಂತಿಲ್ಲ. 'ಸ್ಪೆಕ್ಟ್ರಂ ರಾಜಾ'ರನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿ ಎಂ. ಕರುಣಾನಿಧಿ ಹಿರಿಯ ಪುತ್ರ, ಎಂ.ಕೆ. ಅಳಗಿರಿ ಕೇಂದ್ರದ ಸಚಿವ ಸ್ಥಾನ ಮತ್ತು ಪಕ್ಷದ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಕರುಣಾನಿಧಿ ಉತ್ತರಾಧಿಕಾರಕ್ಕೆ ಯತ್ನಿಸುತ್ತಿರುವ ಅಳಗಿರಿಗೆ ಪ್ರಮುಖವಾಗಿ ಅಡ್ಡಗಾಲಾಗಿರುವುದು ಎಂ.ಕೆ. ಸ್ಟಾಲಿನ್. ತಮಿಳುನಾಡಿನಲ್ಲಿ ಗರಿಷ್ಠ ರಾಜಕೀಯ ಮೈಲೇಜ್ ಕೂಡ ಅವರಿಗೆ ಸಿಗುತ್ತಿದೆ. ಇದರಿಂದ ತೀವ್ರ ಮುಜುಗರಕ್ಕೊಳಗಾಗಿರುವ ಅಳಗಿರಿ, ಹಗರಣದ ಹೆಸರಿನಲ್ಲಿ ಪಕ್ಷದಲ್ಲಿ ಮಿಂಚಲು ಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಅದೇ ನಾಟಕದಂಗವಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಕೇಂದ್ರ ದೂರಸಂಪರ್ಕ ಸಚಿವರಾಗಿದ್ದ ಸಂದರ್ಭದಲ್ಲಿ ಎ. ರಾಜಾ ಮೂಗಿನಡಿಯಲ್ಲಿ ನಡೆದಿದ್ದ 2ಜಿ ತರಂಗಾಂತರ ಹಂಚಿಕೆ ಹಗರಣ ಸಂಬಂಧ ಅವರನ್ನು ಡಿಎಂಕೆಯಿಂದ ವಜಾಗೊಳಿಸಬೇಕು. ನನ್ನನ್ನು ರಾಜ್ಯ ರಾಜಕಾರಣದಲ್ಲಿ ಸಕ್ರಿಯವಾಗಿ ಭಾಗವಹಿಸಲು ಅವಕಾಶ ಮಾಡಿಕೊಡಬೇಕು ಎಂದು ಅಳಗಿರಿ ತನ್ನ ರಾಜೀನಾಮೆ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಅದು ಸಾಧ್ಯವಾಗದೇ ಇದ್ದಲ್ಲಿ, ನನ್ನ ರಾಜೀನಾಮೆ ಪತ್ರವನ್ನು ಸ್ವೀಕರಿಸಿ. ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಸ್ಥಾನದಿಂದ ಮುಕ್ತಗೊಳಿಸಿ. ಜತೆಗೆ ಪಕ್ಷದ ಸಂಘಟನಾ ಕಾರ್ಯದರ್ಶಿ ಹುದ್ದೆಯಿಂದಲೂ ತೆಗೆದು ಬಿಡಿ ಎಂದು ತಂದೆಯ ಮೇಲೆ ಒತ್ತಡ ಹೇರಿದ್ದಾರೆ.

ಮೂಲಗಳ ಪ್ರಕಾರ ಅಳಗಿರಿಯವರು ತನ್ನ ತಂದೆ ಕರುಣಾನಿಧಿಗೆ ನಿನ್ನೆ ಸಂಜೆಯೇ ತನ್ನ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ. ಆದರೆ ಪ್ರಧಾನ ಮಂತ್ರಿ ಕಚೇರಿ ಇನ್ನೂ ರಾಜೀನಾಮೆ ಪತ್ರ ಸ್ವೀಕರಿಸಿಲ್ಲ.

ಅಳಗಿರಿ ಕೇಂದ್ರ ಸಚಿವ ಸ್ಥಾನ ತೊರೆಯುವ ಉದ್ದೇಶದಿಂದ ರಾಜೀನಾಮೆ ನೀಡಿರುವ ಸಾಧ್ಯತೆ ಕಡಿಮೆ. ಅವರದ್ದೇನಿದ್ದರೂ ಒತ್ತಡ ತಂತ್ರ. ಸ್ಟಾಲಿನ್ ಮತ್ತು ಸಹೋದರಿ, ರಾಜ್ಯಸಭಾ ಸದಸ್ಯೆ ಕನಿಮೋಳಿಗೆ ಮೊದಲಿನಿಂದಲೂ ಅಳಗಿರಿ ಎಂದರೆ ಅಷ್ಟಕಷ್ಟೆ. ಇದು ನೀರಾ ರಾಡಿಯಾ ಟೇಪುಗಳಲ್ಲೂ ಬಹಿರಂಗವಾಗಿತ್ತು. ಹಾಗಾಗಿ ಪಕ್ಷದಲ್ಲಿ ನೆಲೆ ಕಂಡುಕೊಳ್ಳಲು ಇಂತಹ ತಂತ್ರವನ್ನು ಅಳಗಿರಿ ಅನುಸರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಕರುಣಾನಿಧಿ ಉತ್ತರಾಧಿಕಾರಿಯನ್ನಾಗಿ ಸ್ಟಾಲಿನ್‌ರನ್ನು ಡಿಎಂಕೆ ಬಿಂಬಿಸುತ್ತಿರುವುದು ಅಳಗಿರಿಗೆ ನುಂಗಲಾರದ ತುತ್ತು. ಈ ಕುರಿತ ಅಸಮಾಧಾನ ಹಲವು ಸಮಯದಿಂದ ಅಳಗಿರಿಯಲ್ಲಿ ಮನೆ ಮಾಡಿತ್ತು. ತನ್ನನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂಬ ಭಾವನೆಯಲ್ಲಿರುವ ಕೇಂದ್ರ ಸಚಿವ ಈಗ ಹಗರಣ ಮತ್ತು ತನ್ನ ವೈಯಕ್ತಿಕ ವಿಚಾರಗಳನ್ನು ಮುಂದಿಟ್ಟುಕೊಂಡು ಕೇಂದ್ರ ಬಿಂದುವಾಗಲು ಯತ್ನಿಸುತ್ತಿದ್ದಾರೆ ಎಂದು ವರದಿಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ