ದಿಗ್ವಿಜಯ್ ಸಿಂಗ್ ಜಿಹಾದಿ ಬೆಂಬಲಿಗ: ಆರೆಸ್ಸೆಸ್ ವಾಗ್ದಾಳಿ
ನವದೆಹಲಿ, ಬುಧವಾರ, 5 ಜನವರಿ 2011( 13:48 IST )
ಮುಂಬೈ ದಾಳಿ ಕುರಿತು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ದಿನಕ್ಕೊಂದರಂತೆ ಮಾಡುತ್ತಿರುವ ಆಪಾದನೆಗಳು 'ಕ್ಷುಲ್ಲಕ' ಎಂದು ಬಣ್ಣಿಸಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ, ಅವರ ಹೆಸರು ಜಿಹಾದಿ ಬೆಂಬಲಿಗ ಎಂದು ಭಾರತದ ಇತಿಹಾಸದಲ್ಲಿ ದಾಖಲಾಗಲಿದೆ ಎಂದು ಲೇವಡಿ ಮಾಡಿದೆ.
ಅವರ ಬಗ್ಗೆ ನಾವು ಅಗಾಧವಾದ ಕರುಣೆ ವ್ಯಕ್ತಪಡಿಸುತ್ತಿದ್ದೇವೆ. ಭಾರತದಲ್ಲಿ 21ನೇ ಶತಮಾನದಲ್ಲಿ ಜಿಹಾದಿ ಶಕ್ತಿಗಳನ್ನು ಬಹುವಾಗಿ ಬೆಂಬಲಿಸಿದ ವ್ಯಕ್ತಿ ಎಂಬುದು ಅವರ ಹೆಸರಿನಲ್ಲಿ ಚರಿತ್ರೆಯಲ್ಲಿ ದಾಖಲಾಗಲಿದೆ. ಅವರ ಹಾಸ್ಯಾಸ್ಪದ ಹೇಳಿಕೆಗಳ ಬಗ್ಗೆ ಇದಕ್ಕಿಂತ ಹೆಚ್ಚು ಏನೂ ಹೇಳಲಾಗದು ಎಂದು ಆರೆಸ್ಸೆಸ್ ನಾಯಕ ರಾಮ್ ಮಾಧವ್ ತಿಳಿಸಿದರು.
ಮುಂಬೈ ದಾಳಿಯ ದಿನ ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥ ಹೇಮಂತ್ ಕರ್ಕರೆಯವರು ತನಗೆ ಕರೆ ಮಾಡಿದ್ದರು ಎಂಬ ದಾಖಲೆಗಳನ್ನು ದಿಗ್ವಿಜಯ್ ಸಿಂಗ್ ಬಿಡುಗಡೆ ಮಾಡಿದ ನಂತರ ಮಾಧವ್ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.
ಮಾಲೆಗಾಂವ್ ಸ್ಫೋಟ ಪ್ರಕರಣದ ತನಿಖೆ ನಡೆಸುತ್ತಿದ್ದ ಕರ್ಕರೆಯವರಿಗೆ ಹಿಂದೂ ಬಲಪಂಥೀಯ ಸಂಘಟನೆಗಳಿಂದ ಜೀವ ಬೆದರಿಕೆಯಿತ್ತು. ಹಾಗೆಂದು ಸ್ವತಃ ಕರ್ಕರೆಯವರು ನನ್ನಲ್ಲಿ ಹೇಳಿಕೊಂಡಿದ್ದರು. ಅವರು ಸಾಯುವ ದಿನವೂ ನನಗೆ ಫೋನ್ ಮಾಡಿ ಜೀವ ಬೆದರಿಕೆ ಇರುವುದನ್ನು ತಿಳಿಸಿದ್ದರು ಎಂದು ದಿಗ್ವಿಜಯ್ ಆರೋಪಿಸಿದ್ದರು.
ಸಿಂಗ್ ದ್ವಿಮುಖ ನೀತಿಯನ್ನು ತರಾಟೆಗೆ ತೆಗೆದುಕೊಂಡಿರುವ ಆರೆಸ್ಸೆಸ್ ನಾಯಕ, ಎಟಿಎಸ್ ತನಿಖಾ ರೀತಿಯನ್ನು ತಾವು ಪ್ರಶ್ನಿಸಿದ್ದು ಹೌದು ಎಂಬುದನ್ನು ಒಪ್ಪಿಕೊಂಡಿದ್ದಾರೆ.
ಮಧ್ಯಪ್ರದೇಶ ಪೊಲೀಸ್ ಪಡೆಯ ಮೇಲೆ ಆರೋಪಗಳ ಮೇಲೆ ಆರೋಪ ಮಾಡುತ್ತಾರೆ ಮತ್ತು ಅದು ಸರಿ ಎಂದು ದಿಗ್ವಿಜಯ್ ಭಾವಿಸುತ್ತಾರೆ. ಆ ಪೊಲೀಸರು ಆರೆಸ್ಸೆಸ್‌ನ ಮೂಲ ಸೈನಿಕರು ಎಂದು ಜರೆಯುತ್ತಾರೆ. ಬಾಟ್ಲಾ ಹೌಸ್ ಎನ್‌ಕೌಂಟರ್ ನಡೆಸಿದ ದೆಹಲಿ ಪೊಲೀಸರ ಮೇಲೆ ಮುಗಿ ಬೀಳುತ್ತಾರೆ. ಮಾವೋವಾದಿಗಳ ವಿರುದ್ಧ ಹೋರಾಡುವವರ ಮೇಲೆಯೂ ವಾಗ್ದಾಳಿ ನಡೆಸುತ್ತಾರೆ ಎಂದು ದಿಗ್ವಿಜಯ್ ನಡೆಯನ್ನು ಮಾಧವ್ ವಿಶ್ಲೇಷಣೆ ನಡೆಸಿದರು.