ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ನಡೆದಿರುವ ಅವ್ಯವಹಾರಗಳ ಕುರಿತು ತನಿಖೆ ನಡೆಸುತ್ತಿರುವ ಸಿಬಿಐ ಬುಧವಾರ ಗೇಮ್ಸ್ ಸಂಘಟನಾ ಸಮಿತಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಸಂಸದ ಸುರೇಶ್ ಕಲ್ಮಾಡಿಯವರನ್ನು ವಿಚಾರಣೆಗೆ ಒಳಪಡಿಸಿದೆ. ಹಲವು ಒಪ್ಪಂದಗಳನ್ನು ಮತ್ತು ಗುತ್ತಿಗೆಗಳನ್ನು ಅವರು ಅಕ್ರಮವಾಗಿ ನೀಡಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಸಿಬಿಐ ಪ್ರಶ್ನಿಸಿದೆ.
ಇಂದು ಬೆಳಿಗ್ಗೆ 10 ಗಂಟೆ ಹೊತ್ತಿಗೆ ಸಿಬಿಐ ಪ್ರಧಾನ ಕಚೇರಿಗೆ ಬಂದ ಕಲ್ಮಾಡಿಯವರನ್ನು ಅರ್ಧ ಗಂಟೆಯ ನಂತರ ವಿಚಾರಣೆಗೆ ಒಳಪಡಿಸಲಾಯಿತು. ಇದು ಸಂಜೆಯವರೆಗೂ ಮುಂದುವರಿಯಿತು ಎಂದು ಮೂಲಗಳು ಹೇಳಿವೆ.
2010ರ ಡಿಸೆಂಬರ್ 24ರಂದು ದೆಹಲಿ ಮತ್ತು ಪುಣೆಯಲ್ಲಿನ ಕಲ್ಮಾಡಿಯವರ ನಿವಾಸಗಳಿಗೆ ಸಿಬಿಐ ದಾಳಿ ನಡೆಸಿತ್ತು. ಅವರ ಮೂವರು ಸಹಚರರಾದ ಟಿ.ಎಸ್. ದರ್ಬಾರಿ, ಸಂಜಯ್ ಮಹೀಂದ್ರೂ ಮತ್ತು ಎಂ. ಜಯಚಂದ್ರನ್ ಅವರನ್ನು ಈಗಾಗಲೇ ಬಂಧಿಸಲಾಗಿದೆ.
ಕಲ್ಮಾಡಿಯವರಿಗೆ ಸಂಬಂಧಪಟ್ಟ ಹಲವಾರು ಪ್ರಮುಖ ದಾಖಲೆಗಳನ್ನು ಈಗಾಗಲೇ ವಶಪಡಿಸಿಕೊಂಡಿಕೊಂಡಿರುವ ಸಿಬಿಐ, ಇನ್ನಿತರ ಮಾಹಿತಿಗಳನ್ನು ಪ್ರಶ್ನಾವಳಿಗಳ ಮೂಲಕ ಸಂಗ್ರಹಿಸುತ್ತಿದೆ. ಕಳೆದ ವರ್ಷ ಲಂಡನ್‌ನಲ್ಲಿ ನಡೆದ ಕ್ವೀನ್ಸ್ ಬೇಟನ್ ರಿಲೆ ಸೇರಿದಂತೆ ಇನ್ನಿತರ ಗುತ್ತಿಗೆ ಮತ್ತು ಒಪ್ಪಂದಗಳ ಸಂಬಂಧ ವಿಚಾರಣೆ ನಡೆಯಲಿದೆ ಎಂದು ಹೇಳಲಾಗಿದೆ.
ಕಲ್ಮಾಡಿ ಮೇಲಿರುವ ಆರೋಪಗಳು... * ಇಂಗ್ಲೆಂಡ್‌ನಲ್ಲಿ ನಡೆದ ಕ್ವೀನ್ಸ್ ಬೇಟನ್‌ನಲ್ಲಿ ಅಕ್ರಮ. * ಕಾಮನ್‌ವೆಲ್ತ್ ಗೇಮ್ಸ್‌ನ ಬಂಡವಾಳವನ್ನು ಇತರ ಕಾರ್ಯಗಳಿಗೆ ವಿನಿಯೋಗ. * ಭಾರತ ರಾಯಭಾರ ಕಚೇರಿಯ ಇ-ಮೇಲ್ ತಿದ್ದುಪಡಿ ಆರೋಪ. * ಕ್ರೀಡಾ ಸಾಮಗ್ರಿಗಳಿಗೆ ಮಾರುಕಟ್ಟೆ ಬೆಲೆಗಿಂತ ಹೆಚ್ಚು ಬೆಲೆಗೆ ಖರೀದಿಸಿದ್ದು. * ಸ್ಪೋರ್ಟ್ಸ್ ಸಮಯ ಗುರುತಿಸುವ ಯಂತ್ರದ ಗುತ್ತಿಗೆಯನ್ನು ಇತರ ಕಂಪನಿಗಳಿಗಿಂತ ಅಧಿಕ ಮೊತ್ತಕ್ಕೆ ಒಮೇಗಾ ಕಂಪನಿಗೆ ನೀಡಿರುವುದು.