ಕಾಂಗ್ರೆಸ್‌ನ ಕುಖ್ಯಾತ ಹಗರಣ ಬೋಫೊರ್ಸ್ ಬಹುತೇಕ ಠುಸ್ಸಾಗಿದೆ. ಕೆಲ ದಿನಗಳ ಹಿಂದಷ್ಟೇ ಆದಾಯ ತೆರಿಗೆ ಇಲಾಖೆ ಖಚಿತಪಡಿಸಿದ್ದ ಕಿಕ್‌ಬ್ಯಾಕ್ ಪ್ರಕರಣಕ್ಕೂ, ಬೋಫೊರ್ಸ್ ಹಗರಣಕ್ಕೂ ಸಂಬಂಧ ಕಲ್ಪಿಸಬೇಕಾಗಿಲ್ಲ. ಹಾಗಾಗಿ ಇಟಲಿ ಉದ್ಯಮಿ ಒಟ್ಟಾವಿಯೋ ಕ್ವಟ್ರೋಚಿ ವಿರುದ್ಧದ ಪ್ರಕರಣವನ್ನು ಮುಚ್ಚಬೇಕು ಎಂದು ಸಿಬಿಐ ಮಾಡಿದ್ದ ಮನವಿಗೆ ನ್ಯಾಯಾಲಯ ಅಸ್ತು ಎಂದಿದೆ.
1,500 ಕೋಟಿ ರೂಪಾಯಿ ಮೊತ್ತದ ಬೋಫೋರ್ಸ್ ಶಸ್ತ್ರಾಸ್ತ್ರಗಳ ವ್ಯವಹಾರದಲ್ಲಿ ಮದ್ಯವರ್ತಿಗಳಾದ ಇಟಲಿ ಉದ್ಯಮಿ ಒಟ್ಟಾವಿಯೋ ಕ್ವಟ್ರೊಚಿ ಮತ್ತು ವಿನ್ ಚಡ್ಡಾರಿಗೆ ಭಾರತ ಸರಕಾರವು ಲಂಚ ನೀಡಿತ್ತು ಎಂಬ ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣ (ಐಟಿಎಟಿ) ಹೇಳಿದ್ದರಿಂದ ಪ್ರಕರಣ ಮತ್ತಷ್ಟು ಗರಿಗೆದರಿತ್ತು.
ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣವು ಹೀಗೆ ಹೇಳಿರುವುದರಿಂದ ಸಿಬಿಐ ಮತ್ತು ಕೇಂದ್ರ ಸರಕಾರದ ನಿಲುವಿನಲ್ಲಿ ಯಾವುದಾದರೂ ಬದಲಾವಣೆಯಿದೆಯೇ ಎಂದು ಪ್ರಶ್ನಿಸಲಾಗಿದ್ದ ಅರ್ಜಿಯನ್ನು ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ವಿನೋದ್ ಯಾದವ್ ವಜಾಗೊಳಿಸಿ, ಸಿಬಿಐ ಮನವಿಯನ್ನು ಎತ್ತಿ ಹಿಡಿದರು. ಇದರೊಂದಿಗೆ ಬೋಫೊರ್ಸ್ ಹಗರಣದ ಕ್ವಟ್ರೊಚಿ ಪ್ರಕರಣ ಬಹುತೇಕ ಮುಕ್ತಾಯಗೊಂಡಂತಾಗಿದೆ.
1986ರ ಬೋಫೊರ್ಸ್ ಗನ್ ವ್ಯವಹಾರದಲ್ಲಿ ಕ್ವಟ್ರೋಚಿ ಮತ್ತು ಚಡ್ಡಾ 412 ಮಿಲಿಯನ್ ರೂಪಾಯಿಗಳ ಕಮೀಷನ್ ಪಡೆದಿದ್ದರು. ಇದು ಕಾನೂನು ಬಾಹಿರವಾಗಿದೆ. ಭಾರತ ಸರಕಾರದ ಕಾನೂನುಗಳ ಪ್ರಕಾರ ವ್ಯವಹಾರಗಳಲ್ಲಿ ದಲ್ಲಾಳಿಗಳಿಗೆ ಅವಕಾಶವಿಲ್ಲ ಎಂದು ಟ್ರಿಬ್ಯುನಲ್ ಹೇಳಿತ್ತು.
ಐಟಿಎಟಿ ಆದೇಶ ನೀಡಿರುವುದು ತೆರಿಗೆ ಸಂಬಂಧಿ ವಿಚಾರದಲ್ಲೇ ಹೊರತು, ಬೋಫೊರ್ಸ್ ಪ್ರಕರಣದ ಕ್ರಿಮಿನಲ್ ದೃಷ್ಟಿಕೋನದಲ್ಲಿ ಅಲ್ಲ. ಹಾಗಾಗಿ ಅದಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಸಿಬಿಐ ಪ್ರಕಟಿಸಿರುವ ನಿಲುವು ತನಗೆ ಸಮಾಧಾನ ತಂದಿದೆ ಎಂದು ನ್ಯಾಯಾಲಯವು ಇಂದು ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ಫೆಬ್ರವರಿ 10ಕ್ಕೆ ಮುಂದೂಡಿದೆ. ಅದೇ ಹೊತ್ತಿಗೆ ಸಿಬಿಐ ವಿರುದ್ಧ ನ್ಯಾಯಾಧೀಶರು ಆಕ್ರೋಶ ವ್ಯಕ್ತಪಡಿಸಿರುವ ಪ್ರಸಂಗವೂ ನಡೆದಿದೆ.
ಸಿಬಿಐ ದುರುದ್ದೇಶವನ್ನು ಹೊಂದಿದೆ ಮತ್ತು ನಂಬಿಕೆಯನ್ನು ಕಳೆದುಕೊಂಡಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಸಾರ್ವಜನಿಕರ ಹಿತಾಸಕ್ತಿಯಿಂದ ಹೇಳುವುದಾದರೆ, ಈ ಕುರಿತು ನಾನು ಸಂತೃಪ್ತನಲ್ಲ. ನನ್ನ ಪ್ರಕಾರ ಈ ಪ್ರಕರಣ ಸುಪ್ರೀಂ ಕೋರ್ಟಿಗೆ ಹೋಗಬೇಕು. ಕ್ವಟ್ರೋಚಿ ವಿರುದ್ಧದ ರೆಡ್ ಕಾರ್ನರ್ ನೊಟೀಸನ್ನು ಹಿಂದಕ್ಕೆ ಪಡೆಯುವ ಮೂಲಕ ಕುದುರೆಯ ಮುಂದಕ್ಕೆ ಗಾಡಿಯನ್ನು ಕಟ್ಟಲು ಸಿಬಿಐ ಹೊರಟಿದೆ ಎಂದು ನ್ಯಾಯಾಧೀಶರು ತೀಕ್ಷ್ಣವಾಗಿ ನುಡಿದರು.