ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಕ್ರಮ ಆಸ್ತಿ ಆರೋಪ; ಸಂಕಷ್ಟದಲ್ಲಿ ಮಾಜಿ ಸಿಜೆಐ ಬಾಲಕೃಷ್ಣ (Youth Congress | KG Balakrishnan | PV Sreenijan | Kerala)
Bookmark and Share Feedback Print
 
PTI
PTI
ಮದ್ರಾಸು ಹೈಕೋರ್ಟ್ ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ್ದ ಎ. ರಾಜಾ ಪ್ರಕರಣದಲ್ಲಿ ವಿವಾದಕ್ಕೆ ತುತ್ತಾಗಿದ್ದ ಸುಪ್ರಿಂ ಕೋರ್ಟ್ ಮಾಜಿ ಮುಖ್ಯ ನ್ಯಾಯಾಮೂರ್ತಿ ಕೆ.ಜಿ. ಬಾಲಕೃಷ್ಣನ್ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಕುಟುಂಬದ ಮೇಲೆ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿರುವ ಆರೋಪಗಳ ಕುರಿತು ಪ್ರಕರಣ ದಾಖಲಾಗಿದೆ. ಈ ನಡುವೆ ಅವರ ಅಳಿಯ ಪಿ.ವಿ. ಶ್ರೀನಿಜನ್ ಯುವ ಕಾಂಗ್ರೆಸ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ತ್ರಿಶೂರಿನಲ್ಲಿನ ಜಾಗೃತ ನ್ಯಾಯಾಲಯದಲ್ಲಿ ಬಾಲಕೃಷ್ಣನ್ ಕುಟುಂಬದ ವಿರುದ್ಧ ಪ್ರಕರಣ ದಾಖಲಿಸಿರುವುದು ಸರಕಾರೇತರ ಸಂಸ್ಥೆ. ಪ್ರಕರಣ ದಾಖಲಾಗಿರುವುದು ಹೌದು ಎಂದು ನ್ಯಾಯಾಲಯವೇ ಒಪ್ಪಿಕೊಂಡಿದ್ದು, ಜನವರಿ 18ಕ್ಕೆ ಪ್ರಕರಣ ವಿಚಾರಣೆಗೆ ನ್ಯಾಯಾಧೀಶ ವಿ. ಜಯರಾಮನ್ ದಿನಾಂಕ ನಿಗದಿಪಡಿಸಿದ್ದಾರೆ.

ಈ ಪ್ರಕರಣದಲ್ಲಿ ಮೊದಲ ಪ್ರತಿವಾದಿ ಬಾಲಕೃಷ್ಣನ್. ನಂತರದ ಪ್ರತಿವಾದಿಗಳು ಅವರ ಸಹೋದರ ಕೆ.ಜಿ. ಭಾಸ್ಕರನ್ ಮತ್ತು ಶ್ರೀನಿಜನ್.

ಮಾಜಿ ನ್ಯಾಯಮೂರ್ತಿ ಬಾಲಕೃಷ್ಣನ್ ಅವರು ಸುಪ್ರಿಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿದ್ದ ಸಂದರ್ಭದಲ್ಲಿ ಅವರ ಅಳಿಯ ಶ್ರೀನಿಜನ್ ಮತ್ತು ಸಹೋದರ ಭಾಸ್ಕರನ್ ಅವರ ಸಂಪತ್ತು, ಆದಾಯಕ್ಕಿಂತ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿರುವ ಕುರಿತು ಜಾಗೃತ ಮತ್ತು ಭ್ರಷ್ಟಾಚಾರ ನಿರ್ಮೂಲನಾ ದಳದಿಂದ ತನಿಖೆ ನಡೆಸಬೇಕು ಎಂದು 'ಮಲಯಾಳಂ ವೇದಿ' ಎಂಬ ಎನ್‌ಜಿಒ ಅಧ್ಯಕ್ಷ ಜಾರ್ಜ್ ವಟ್ಟಾಕುಲಂ ಸಾರ್ವಜನಿಕ ಹಿತಾಸಕ್ತಿ ದೂರು ದಾಖಲಿಸಿದ್ದಾರೆ.

ಈಗಾಗಲೇ ಜಾಗೃತ ದಳದಿಂದ ತನಿಖೆಗೊಳಪಟ್ಟಿರುವ ಶ್ರೀನಿಜನ್, ಯುವ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಅವರಿಗೆ ತನ್ನ ಪಕ್ಷದಿಂದ ರಾಜಕೀಯ ಬೆಂಬಲ ನೀಡುವ ಬದಲು, ವಿವರಣೆ ಕೇಳಲಾಗಿತ್ತು.

ಈ ಸಂಬಂಧ ನಡೆದ ಕೇರಳ ರಾಜ್ಯ ಯುವ ಕಾಂಗ್ರೆಸ್‌ನ ಮಹತ್ವದ ಸಭೆಯಲ್ಲಿ, ಅಧಿಕಾರಿಗಳೂ ಸೇರಿದಂತೆ ಹಲವು ನಾಯಕರು ಬಾಲಕೃಷ್ಣನ್ ಅವರ ಕುಟುಂಬ ಹೊಂದಿರುವ ಅಕ್ರಮ ಆಸ್ತಿಯ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸಿದರು ಎಂದು ಮೂಲಗಳು ತಿಳಿಸಿವೆ.

ರಾಜ್ಯ ಯುವ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷರಾಗಿದ್ದ ಶ್ರೀನಿಜನ್, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರ್ನಾಕುಲಂ ಜಿಲ್ಲೆಯ ನಾರಕ್ಕಲ್ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು.

ಈ ನಡುವೆ ಪ್ರತಿಕ್ರಿಯೆ ನೀಡಿರುವ ಕೇರಳ ಮುಖ್ಯಮಂತ್ರಿ ಅಚ್ಯುತಾನಂದನ್, ಭಾಸ್ಕರನ್ ವಿರುದ್ಧ ಯಾವುದೇ ದೂರು ಬಂದಲ್ಲಿ ಸರ್ಕಾರ ಕ್ರಮಕೈಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ