ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದ್ರೋಣಾಚಾರ್ಯರು ಏಕಲವ್ಯನಿಗೆ ಮಾಡಿದ್ದು ಅನ್ಯಾಯ: ಸುಪ್ರೀಂ! (Dronacharya | Mahabharata | Supreme Court | Eklavya)
Bookmark and Share Feedback Print
 
ದ್ರೋಣಾಚಾರ್ಯರು ತನ್ನ ಸ್ವಾರ್ಥಕ್ಕಾಗಿ, ಸ್ವಜನಪಕ್ಷಪಾತಕ್ಕಾಗಿ ಆ ರೀತಿಯಾಗಿ ನಡೆದುಕೊಂಡದ್ದನ್ನು ಯಾರೊಬ್ಬರೂ ಸಮರ್ಥಿಸಲಾರರು. ಅವರು ಮಾಡಿದ್ದು ತಪ್ಪೇ. ಏಕಲವ್ಯನಂತಹ ಪರೋಕ್ಷ ಶಿಷ್ಯನಿಂದ ಗುರುದಕ್ಷಿಣೆ ಪಡೆಯುವ ಹಕೀಕತ್ತಾದರೂ ಅವರಿಗೆ ಏನಿತ್ತು? ಅವರ ಗುರಿಯನ್ನೇ ಕಿತ್ತುಕೊಳ್ಳುವ ದಾಷ್ಟ್ಯವನ್ನು ಗುರುವಿನ ಹೆಸರಿನಲ್ಲಿ ದ್ರೋಣ ಮೆರೆದದ್ದು ಯಾಕೆ?

ದ್ರೋಣ ಮಾಡಿದ್ದು ಸರಿಯಲ್ಲ. ಅವರು ಬೇಡರ ಹುಡುಗ ಏಕಲವ್ಯನಿಗೆ ಮಾಡಿದ್ದು ಶುದ್ಧ ಅನ್ಯಾಯ. ಹೀಗೆಂದು ಹೇಳಿರುವುದು ದೇಶದ ಸರ್ವೋಚ್ಚ ನ್ಯಾಯಾಲಯ. ಅದೂ ಕಲಿಯುಗದ 2011ರ ವರ್ಷದಲ್ಲಿ. ದ್ವಾಪರಯುಗದಲ್ಲಿ ನಡೆದ ಘಟನೆಗೆ ಈಗ ಶಿಕ್ಷೆ ನೀಡಲಾಗುತ್ತದೆಯೇ?
PR

ಇಲ್ಲ, ಮಹಾರಾಷ್ಟ್ರದಲ್ಲಿ ನಡೆದ ಘಟನೆಯೊಂದಕ್ಕೆ ಮಹಾಭಾರತದ ಪ್ರಸಂಗವೊಂದನ್ನು ಹೋಲಿಸಿ ನ್ಯಾಯಮೂರ್ತಿಗಳು ಆಕ್ರೋಶ ವ್ಯಕ್ತಪಡಿಸಿದ ರೀತಿಯಿದು. ಬುಡಕಟ್ಟು ಮಹಿಳೆಯೊಬ್ಬಳನ್ನು ಹಾಡುಹಗಲೇ ಬೆತ್ತಲೆ ಮಾಡಿ ಮೆರವಣಿಗೆ ಮಾಡಲಾಗಿತ್ತು. ಇದು ನಾಚಿಕೆಗೇಡು, ಅಪಮಾನಕಾರಿ ಮತ್ತು ತೀವ್ರ ಖಂಡನಾರ್ಹ ಎಂದು ನ್ಯಾಯಾಲಯವು ಅಭಿಪ್ರಾಯಪಟ್ಟಿತು.

ಈ ಪ್ರಕರಣ ಕೂಡ ದ್ರೋಣಾಚಾರ್ಯರ ಪ್ರಕರಣ ಭಾಗದಂತಿರುವ ನಾಚಿಕೆಗೇಡಿನ ಪ್ರಸಂಗ. ದ್ರೋಣಾಚಾರ್ಯರು ಏಕಲವ್ಯನನ್ನು ಮುಟ್ಟಲು ಕೂಡ ನಿರಾಕರಿಸಿದವರು. ಆದರೂ ಧೃತಿಗೆಡದೆ ದ್ರೋಣರ ಪ್ರತಿಮೆಯನ್ನೇ ಗುರು ಎಂದು ಪರಿಗಣಿಸಿ ಬಿಲ್ವಿದ್ಯೆಯನ್ನು ಕಲಿತರೆ, ಗುರು ಎನಿಸಿಕೊಂಡವನಿಗೆ ಗುರುದಕ್ಷಿಣೆ ಪಡೆಯುವ ಹಕ್ಕಾದರೂ ಎಲ್ಲಿದೆ? ಅದೂ ಜಗಮೆಚ್ಚುವ ಬಿಲ್ಗಾರನಾಗಬೇಕೆಂದು ಹೊರಟವನು ತನ್ನ ಪ್ರೀತಿಯ ಶಿಷ್ಯ ಅರ್ಜುನನನ್ನು ಮೀರಿಸುತ್ತಾನೆ ಎಂದಾಗ, ಆತನನ್ನು ಮಣಿಸಲು ಬಲಗೈ ಹೆಬ್ಬೆರಳನ್ನು ಕೇಳುವುದೆಂದರೆ? -- ಹೀಗೆಂದು ನ್ಯಾಯಮೂರ್ತಿಗಳಾದ ಮಾರ್ಕಂಡೇಯ ಕಟ್ಜು ಮತ್ತು ಜ್ಞಾನ ಸುಧಾ ಮಿಶ್ರಾ ಅವರನ್ನೊಳಗೊಂಡ ಪೀಠವು ಪ್ರಶ್ನಿಸಿತು.

1994ರಲ್ಲಿ ನಡೆದಿದ್ದ ಘಟನೆಯದು. 25ರ ಹರೆಯದ ಮಹಿಳೆಯೊಬ್ಬಳು ಉನ್ನತ ಜಾತಿಯ ಯುವಕನೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿ ಆಕೆಯನ್ನು ಬಹಿರಂಗವಾಗಿ ಬಟ್ಟೆ ಬಿಚ್ಚಿಸಿ ಅಪಮಾನ ಮಾಡಲಾಗಿತ್ತು. ಮನಬಂದಂತೆ ಥಳಿಸಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರಿಗೆ ಸುಪ್ರೀಂ ಕೋರ್ಟ್ ಕಠಿಣ ಶಿಕ್ಷೆಯನ್ನು ವಿಧಿಸಿದೆ.

ಭಾರತದ ಬುಡಕಟ್ಟು ಜನರಿಗೆ ಮಾಡಲಾಗುತ್ತಿರುವ ಅನ್ಯಾಯ-ಅನಾಚಾರಗಳು ಭಾರತದ ಇತಿಹಾಸಕ್ಕೆ ಕಪ್ಪುಚುಕ್ಕೆ, ಅಪಮಾನ. ಬುಡಕಟ್ಟು ಮಂದಿಯನ್ನು ರಾಕ್ಷಸರು, ಅಸುರರು ಎಂದು ಕರೆಯಲಾಗಿದೆ. ಸಾಕಷ್ಟು ಮಂದಿಯನ್ನು ಅಸ್ಪ್ರಶ್ಯತೆಯ ಹೆಸರಿನಲ್ಲಿ ಕೊಂದು ಹಾಕಲಾಗಿದೆ. ಅವರಿಗೆ ಬೇಕುಬೇಕಾದ ರೀತಿಗಳಲ್ಲಿ ಅಪಮಾನ ಮಾಡಲಾಗಿದೆ ಎಂದೂ ನ್ಯಾಯಾಲಯವು ಅಸಮಾಧಾನ ವ್ಯಕ್ತಪಡಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ