ನಿತಿನ್ ಗಡ್ಕರಿ 'ಲೀಡರ್' ಅಲ್ಲ, 'ಡೀಲರ್': ಕಾಂಗ್ರೆಸ್ ವ್ಯಂಗ್ಯ
ರಾಂಚಿ, ಶುಕ್ರವಾರ, 7 ಜನವರಿ 2011( 11:56 IST )
ನಿತಿನ್ ಗಡ್ಕರಿ ಒಬ್ಬ 'ಲೀಡರ್' ಅಲ್ಲ, ಅವರೊಬ್ಬ'ಡೀಲರ್', ಅವರು ನಾಯಕನಾಗುವುದಕ್ಕಿಂತ ಹೆಚ್ಚು ಡೀಲರ್ ಆಗುತ್ತಿದ್ದಾರೆ -- ಹೀಗೆಂದು ಬಿಜೆಪಿ ರಾಷ್ಟ್ರಾಧ್ಯಕ್ಷರನ್ನು ಕುಟುಕಿರುವುದು ಆಡಳಿತ ಪಕ್ಷ ಕಾಂಗ್ರೆಸ್.
ಒಬ್ಬ ನಾಯಕನಾಗಿ ಪಕ್ಷವನ್ನು ಮುನ್ನಡೆಸುವ ಬದಲು ಅವರು ಡೀಲಿಂಗ್‌ನಲ್ಲಿ ತೊಡಗಿದ್ದಾರೆ. ಸಾಮರಸ್ಯ ವಿರೋಧಿ ಬೀಜಗಳನ್ನು ಬಿತ್ತಿ ಬೆಳೆ ತೆಗೆಯುವುದರಲ್ಲೇ ನಂಬಿಕೆಯನ್ನಿಟ್ಟಿರುವ ಪಕ್ಷವನ್ನು ಅದೇ ಹಾದಿಯಲ್ಲಿ ಮುನ್ನಡೆಸುತ್ತಿದ್ದಾರೆ. 2ಜಿ ತರಂಗಾಂತರ ಹಂಚಿಕೆ ಕುರಿತು ಸಂಸತ್ತಿನಲ್ಲಿ ಚರ್ಚಿಸುವ ಬದಲು ಪಲಾಯನವಾದ ಮಾಡುತ್ತಿದ್ದಾರೆ ಎಂದು ಎಐಸಿಸಿ ಕಾರ್ಯದರ್ಶಿ ಅಬ್ದುಲ್ ಮನನ್ ಟೀಕಿಸಿದ್ದಾರೆ.
PTI
2ಜಿ ತರಂಗಾಂತರ ಕುರಿತು ಸಂಸತ್ತಿನಲ್ಲಿ ಚರ್ಚೆ ನಡೆಸುವ ಬದಲು ಬಿಜೆಪಿ ಪಲಾಯನ ತತ್ವವನ್ನು ಅನುಸರಿಸುತ್ತಿದೆ. ಇದಕ್ಕೆ ಕಾರಣ ತನ್ನ ಹೂರಣ ಬಯಲಾಗುತ್ತದೆ ಎನ್ನುವುದು. ಅದು ಅಧಿಕಾರದಲ್ಲಿದ್ದ ಪ್ರಮೋದ್ ಮಹಾಜನ್ ಹೊತ್ತಿನಲ್ಲೇ 2ಜಿ ತರಂಗಾಂತರಕ್ಕೆ ವೇದಿಕೆ ನಿರ್ಮಾಣವಾದದ್ದು ಎನ್ನುವುದು ಬಿಜೆಪಿಗೆ ಗೊತ್ತಿದೆ ಎಂದು ಅಬ್ದುಲ್ ಪಕ್ಷದ ಕಾರ್ಯಕ್ರಮವೊಂದರಲ್ಲಿ ಲೇವಡಿ ಮಾಡಿದರು.
ನಮ್ಮ ದೇಶವು 'ಕೋಮುವಾದ', 'ಸಂಕುಚಿತ ಮನೋಭಾವ' ಮತ್ತು 'ಪ್ರಾಂತೀಯವಾದ'ದಂತಹ ಹಲವು ಸವಾಲುಗಳನ್ನು ಎದುರಿಸುತ್ತಿದೆ ಎಂದು ಅಭಿಪ್ರಾಯಪಟ್ಟಿರುವ ಕಾಂಗ್ರೆಸ್ ಮುಖಂಡ, ಹಗರಣವೊಂದರಲ್ಲಿ ರೆಡ್‌ಹ್ಯಾಂಡಾಗಿ ಸಿಕ್ಕಿ ಬಿದ್ದಿರುವ ವಿಶಿಷ್ಟತೆಯನ್ನು ಬಿಜೆಪಿ ಹೊಂದಿದೆ ಎಂದು ಅದರ ಮಾಜಿ ಅಧ್ಯಕ್ಷ ಬಂಗಾರು ಲಕ್ಷ್ಮಣ್ ಅವರನ್ನು ಉದಾಹರಿಸಿದರು.
ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಹಿರಿಯ ನಾಯಕ ಕೆ. ಕೇಶವ್ ರಾವ್ ಕೂಡ ಬಿಜೆಪಿ ವಿರುದ್ಧ ಹರಿ ಹಾಯ್ದಿದ್ದಾರೆ. ಜಾರ್ಖಂಡ್‌ನ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು, ಕೇಂದ್ರ ಸರಕಾರದ ಯೋಜನೆಗಳು ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳಬೇಕು ಎಂದೂ ಕರೆ ನೀಡಿದರು.
ಗ್ರಾಮೀಣ ಭಾಗದ ಜನರಿಗೆ ಯೋಜನೆಗಳ ಬಗ್ಗೆ ಅರಿವು ಇರುವುದಿಲ್ಲ. ಅವರಿಗೆ ಕೇಂದ್ರ ಸರಕಾರದ ಯೋಜನೆಗಳ ಕುರಿತು ವಿವರಣೆ ನೀಡಬೇಕು, ಅವರಿಗೆ ಮನದಟ್ಟು ಮಾಡಬೇಕು ಮತ್ತು ದುರುಪಯೋಗವಾಗದಂತೆ ತಡೆಯಬೇಕು ಎಂದರು.