ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ಸ್ಪೆಕ್ಟ್ರಮ್ ರಾಜಾ' ಕೆಟ್ಟ ದಿನಗಳು ಹತ್ತಿರ; ಕೋರ್ಟಲ್ಲಿದೆ ಚೆಂಡು (2G scam | Subramanian Swamy | A Raja | CBI)
Bookmark and Share Feedback Print
 
ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದಲ್ಲಿ ದೂರಸಂಪರ್ಕ ಸಚಿವರಾಗಿದ್ದ ಎ. ರಾಜಾ ವಿರುದ್ಧ 2ಜಿ ತರಂಗಾಂತರ ಹಂಚಿಕೆ ಹಗರಣ ಸಂಬಂಧ ಕ್ರಮ ಕೈಗೊಳ್ಳಬೇಕು ಎಂದು ಜನತಾ ಪಕ್ಷದ ಮುಖ್ಯಸ್ಥ ಸುಬ್ರಮಣ್ಯನ್ ಸ್ವಾಮಿ ಸಲ್ಲಿಸಿರುವ ಖಾಸಗಿ ದೂರು 'ಸಮರ್ಥನೀಯ' ಎಂದು ದೆಹಲಿ ನ್ಯಾಯಾಲಯವೊಂದು ಹೇಳಿದೆ.

ಸ್ವಾಮಿಯವರ ದೂರು ಸಮರ್ಥನೀಯ ಎಂದು ಪರಿಗಣಿಸಬಹುದು ಎನ್ನುವುದು ನನ್ನ ಅಭಿಪ್ರಾಯ ಎಂದು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಪ್ರದೀಪ್ ಚಡ್ಡಾ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ತಿಳಿಸಿದರು.

ಇದರೊಂದಿಗೆ 'ಸ್ಪೆಕ್ಟ್ರಮ್ ರಾಜಾ' ಎಂದೇ ಖ್ಯಾತರಾಗಿರುವ 2ಜಿ ಹಗರಣದ ರೂವಾರಿ, ಡಿಎಂಕೆ ಸಂಸದ ಎ. ರಾಜಾ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ವಿರುದ್ಧ ಎಫ್ಐಆರ್ ದಾಖಲಾದಲ್ಲಿ ಹೆಚ್ಚಿನ ತೊಂದರೆಯನ್ನು ಅನುಭವಿಸಲಿದ್ದಾರೆ.

ಶುಕ್ರವಾರ ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಮೊತ್ತ ಮೊದಲಾಗಿ ಈ ಪ್ರಕರಣದಲ್ಲಿ ದೂರುದಾರನಾಗಿರುವ ಸ್ವಾಮಿಯವರು ನ್ಯಾಯಾಲಯದಲ್ಲಿ ತನ್ನ ಹೇಳಿಕೆಯನ್ನು ನೀಡಬೇಕಾಗುತ್ತದೆ. ಹಾಗೆ ಮಾಡಿದಲ್ಲಿ ಮಾತ್ರ ಸ್ವಾಮಿ ಬಯಕೆಯಂತೆ ಅವರನ್ನು ಈ ಪ್ರಕರಣದಲ್ಲಿ ಸರಕಾರಿ ವಕೀಲರನ್ನಾಗಿ ನೇಮಿಸುವ ಕುರಿತು ನಿರ್ಧಾರಕ್ಕೆ ಬರಬಹುದು ಎಂದಿದೆ.

ಆದರೆ ಮಾತು ಮುಂದುವರಿಸಿದ ನ್ಯಾಯಮೂರ್ತಿ ಚಡ್ಡಾ, ನೀವು ದೂರುದಾರ ಮತ್ತು ಒಬ್ಬ ಸರಕಾರಿ ವಕೀಲನ ಪಾತ್ರಗಳನ್ನು ಏಕಕಾಲದಲ್ಲಿ ನಿರ್ವಹಿಸುವುದು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಇದಕ್ಕೆ ಪ್ರತಿಕ್ರಿಯಿಸಿದ ಸ್ವಾಮಿ, ನಾನು ಎರಡೆರಡು ಪಾತ್ರಗಳನ್ನು ಮಾಡಲು ಬಯಸುತ್ತಿಲ್ಲ; ನಾನು ಮೊದಲು ಒಬ್ಬ ದೂರುದಾರನಾಗಿ ನನ್ನ ಹೇಳಿಕೆಯನ್ನು ನೀಡುತ್ತೇನೆ. ನಂತರ ಈ ಬೃಹತ್ ಪ್ರಕರಣದಲ್ಲಿ ನಾನು ನ್ಯಾಯಾಲಯಕ್ಕೆ ಸಹಕರಿಸಲು ಸಿದ್ಧನಿದ್ದೇನೆ ಎಂದರು.

ದೂರನ್ನು ನಾನು ಕೂಲಂಕಷವಾಗಿ ಗಮನಿಸಿದ್ದೇನೆ, ಪರಿಶೀಲನೆ ನಡೆಸಿದ್ದೇನೆ. ಅದಕ್ಕೆ ಸಂಬಂಧಪಟ್ಟ ದಾಖಲೆಗಳತ್ತಲೂ ಗಮನ ಹರಿಸಿದ್ದೇನೆ. ನನ್ನ ಅಭಿಪ್ರಾಯದ ಪ್ರಕಾರ ಈ ದೂರು ಸಮರ್ಥನೀಯವಾಗಿದೆ ಮತ್ತು ವಿಚಾರಣೆಯನ್ನು ಮುಂದುವರಿಸಬಹುದಾಗಿದೆ ಎಂದು ನ್ಯಾಯಮೂರ್ತಿಗಳು ತಿಳಿಸಿದರು.

2ಜಿ ಹಗರಣದ ಸಂಬಂಧ ರಾಜಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಳೆದ ವರ್ಷದ ಡಿಸೆಂಬರ್ 15ರಂದು ಸ್ವಾಮಿ ಸಿಬಿಐ ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದರು. ಇದರಲ್ಲಿ ರಾಜಾಗೆ ಸಮನ್ಸ್ ನೀಡಬೇಕು, ತನ್ನನ್ನು ಸರಕಾರಿ ವಕೀಲನನ್ನಾಗಿ ನೇಮಕ ಮಾಡಬೇಕು ಮತ್ತು ಪ್ರಕರಣದಲ್ಲಿ ಸಿಬಿಐ, ಜಾರಿ ನಿರ್ದೇಶನಾಲಯಗಳು ಸಹಕರಿಸಬೇಕು ಎಂಬ ಮೂರು ಬೇಡಿಕೆಗಳನ್ನು ಸ್ವಾಮಿ ಮುಂದಿಟ್ಟಿದ್ದರು.
ಸಂಬಂಧಿತ ಮಾಹಿತಿ ಹುಡುಕಿ