ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 75ರ ಮುದುಕಿಯನ್ನು ಅತ್ಯಾಚಾರ ಮಾಡಿ ಕೊಂದ ದುಷ್ಕರ್ಮಿಗಳು (Punjab | rape and murder | violence | Chandigarh)
Bookmark and Share Feedback Print
 
ಒಂಟಿಯಾಗಿದ್ದ 75 ವರ್ಷದ ವೃದ್ಧೆಯೊಬ್ಬರನ್ನು ಮನೆಯಲ್ಲಿಯೇ ಅತ್ಯಾಚಾರ ಮಾಡಿ ಕೊಲೆ ಮಾಡಿದ ಭೀಭತ್ಸ ಘಟನೆ ಚಂಡಿಗಢದಲ್ಲಿ ನಡೆದಿದೆ. ಪಂಜಾಬ್ ಪ್ರಭಾರ ಅಡ್ವೊಕೇಟ್ ಜನರಲ್ ರೂಪೀಂದರ್ ಕೋಸ್ಲಾ ಅವರ ಅತ್ತೆ ಗುರ್ಬಾಲ್ ಮನಿಂದರ್ ಮನ್ ಎಂಬವರೇ ಬಲಿಪಶು.

ಚಂಡೀಗಢದ ಪ್ರತಿಷ್ಠಿತ 21ನೇ ಬಡಾವಣೆಯಲ್ಲಿ ಈ ಘಟನೆ ನಡೆದಿದೆ. ಒಬ್ಬರಿಗಿಂತ ಹೆಚ್ಚು ಮಂದಿ ಕೃತ್ಯದಲ್ಲಿ ಪಾಲ್ಗೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಕೋಸ್ಲಾ ಅವರು, ಇತ್ತೀಚೆಗೆ ಅಮೆರಿಕಾದಿಂದ ಬಂದಿದ್ದ ತನ್ನ ಮಗಳ ಹುಟ್ಟುಹಬ್ಬ ಆಚರಿಸಲು ಗುರುವಾರ ಅತ್ತೆಯ ಮನೆಗೆ ತೆರಳಿದ ಸಂದರ್ಭ ಈ ಘಟನೆ ಬೆಳಕಿಗೆ ಬಂದಿದೆ. ಇತ್ತೀಚೆಗೆ ಸುಣ್ಣಬಣ್ಣ ಬಳಿದಿದ್ದ ತನ್ನ ಅತ್ತೆಯ ಮನೆಯಲ್ಲಿ ಪೈಂಟ್‌ ಸಲಕರಣಗಳೆಲ್ಲವೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

ಚಿಲಕ ಹಾಕಿದ ಬೆಡ್‌ರೂಮೊಂದರಲ್ಲಿ ಕೊಳೆತ ಅರೆನಗ್ನ ಸ್ಥಿತಿಯಲ್ಲಿ ಮೃತದೇಹ ಕಂಡು ಬಂದಿತ್ತು. ಆರೋಪಿಗಳು ಕೊಲೆ ಮಾಡುವ ಮುನ್ನ ಅತ್ಯಾಚಾರ ಎಸಗಿದ್ದಾರೆ. ಎರಡು ಅಥವಾ ಅದಕ್ಕಿಂತ ಹೆಚ್ಚು ಜನರು ಈ ಕೃತ್ಯ ಎಸಗಿದ್ದು, ಕಳೆದ ಐದು ದಿನಕ್ಕಿಂತ ಮೊದಲು ಘಟನೆ ನಡೆದಿದೆ ಎಂದು ಶಂಕಿಸಲಾಗಿದೆ.

ಮನೆಯೊಳಗೆ ಬಲಪ್ರಯೋಗದಿಂದ ಪ್ರವೇಶಿಸಿರುವ ಯಾವುದೇ ಕುರುಹು ಪತ್ತೆಯಾಗಿಲ್ಲ. ವೃದ್ಧೆ ಒಬ್ಬಂಟಿಯಾಗಿ ವಾಸಿಸುತ್ತಿದ್ದರಿಂದ ಹಂತಕರು ಸುಲಭವಾಗಿ ಕೊಲೆ ಮಾಡಿರಬಹುದು. ಈ ಸಂಬಂಧ ಅತ್ಯಾಚಾರ ಕೇಸು ದಾಖಲಿಸಲು ವೈದ್ಯಕೀಯ ವರದಿಗಾಗಿ ಕಾಯಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಳೆದ ತಿಂಗಳು ಐದು ವರ್ಷದ ಬಾಲಕ ಖುಷ್ಪ್ರೀತ್‌ನನ್ನು ಅಪಹರಿಸಿದ್ದ ಕಿಡಿಗೇಡಿಗಳು, ಪೋಷಕರು ಸಂಪೂರ್ಣ ಒತ್ತೆಹಣ ನೀಡಿದರೂ, ಕೊಲೆಮಾಡಿದ್ದರು. ಬಾಲಕನ ಮೃತದೇಹ ಪತ್ತೆಯಾದಾಗ ಬೀದಿಗಿಳಿದು ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ದ ಜನರು, ಈಗ ಪತ್ತೆಯಾಗಿರುವ ಮತ್ತೊಂದು ಘಟನೆಯಿಂದ ಆಘಾತಕ್ಕೊಳಗಾಗಿದ್ದಾರೆ.

ಈ ಎರಡೂ ಘಟನೆಗಳಿಂದ ರಾಜ್ಯದ ಜನ ಬೆಚ್ಚಿ ಬಿದ್ದಿದ್ದಾರೆ. ಆರೋಪಿಗಳನ್ನು ಬಂಧಿಸಲು ಮೀನಾ-ಮೇಷ ಎಣಿಸುತ್ತಿರುವ ಪೊಲೀಸರು ಮತ್ತು ಹದಗೆಟ್ಟ ಕಾನೂನಿನ ವಿರುದ್ಧ ರೊಚ್ಚಿಗೆದ್ದ ಜನರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ