ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಈಗ ಕೇಂದ್ರಕ್ಕೆ ಎಲೆಕ್ಷನ್ ಆದ್ರೆ ಕಾಂಗ್ರೆಸ್‌ಗಿಂತ ಬಿಜೆಪಿಗೆ ಲಾಭ (Congress | voter support | India | Commonwealth Games)
ಈಗ ಕೇಂದ್ರಕ್ಕೆ ಎಲೆಕ್ಷನ್ ಆದ್ರೆ ಕಾಂಗ್ರೆಸ್‌ಗಿಂತ ಬಿಜೆಪಿಗೆ ಲಾಭ
ನವದೆಹಲಿ:, ಶನಿವಾರ, 8 ಜನವರಿ 2011( 08:55 IST )
PTI
ಈಗಿಂದೀಗಲೇ ಚುನಾವಣೆ ನಡೆದರೆ ಕಳಂಕದಲ್ಲಿರುವ ಕಾಂಗ್ರೆಸ್ ನೆಲ ಕಚ್ಚುವುದು ಖಚಿತ. ಆದರೆ ಬಿಜೆಪಿಗೆ ಲಾಭವಾಗಬಹುದು. ಸೋನಿಯಾ ಗಾಂಧಿಯ ಜನಪ್ರಿಯತೆ ಭಾರೀ ಪ್ರಮಾಣದಲ್ಲಿ ಕುಸಿದಿದೆ. ಬಿಜೆಪಿಯಲ್ಲಿರುವ ಪ್ರಧಾನ ಮಂತ್ರಿ ಅಭ್ಯರ್ಥಿಗಳಲ್ಲಿ ಮುಂಚೂಣಿಯಲ್ಲಿರುವವರು ನರೇಂದ್ರ ಮೋದಿ. ಆ ಪಕ್ಷದ ಜನಪ್ರಿಯ ನಾಯಕರಲ್ಲಿ ಅಟಲ್ ಬಿಹಾರಿ ವಾಜಪೇಯಿ ನಂತರದ ಸ್ಥಾನವೂ ಮೋದಿಯವರದ್ದು -- ಹೀಗೆಂದು ಹೇಳಿರುವುದು ಸಮೀಕ್ಷೆ.
'ಎಸಿ ನೀಲ್ಸನ್-ಇಂಡಿಯಾ ಟುಡೇ' ಜಂಟಿಯಾಗಿ ನಡೆಸಿರುವ ಸಮೀಕ್ಷಾ ವರದಿಯಲ್ಲಿ ಇಂತಹ ಹತ್ತು ಹಲವು ಅಂಶಗಳನ್ನು ಪ್ರಸ್ತಾಪಿಸಲಾಗಿದೆ. 2010ರ ಡಿಸೆಂಬರ್ 4ರಿಂದ 19ರ ನಡುವೆ ಭಾರತದ 19 ರಾಜ್ಯಗಳ 12,349 ಮತದಾರರನ್ನು ಮುಖಾಮುಖಿ ಸಂದರ್ಶಿಸಿ ಈ ವರದಿಯನ್ನು ತಯಾರಿಸಲಾಗಿದೆ.
ಕಾಂಗ್ರೆಸ್‌ಗೆ ಹೀನಾಯ ಸೋಲು... 1.76 ಲಕ್ಷ ಕೋಟಿ ರೂಪಾಯಿಗಳ 2ಜಿ ಹಗರಣ, ಸಾವಿರಾರು ಕೋಟಿ ರೂಪಾಯಿಗಳ ಕಾಮನ್‌ವೆಲ್ತ್ ಗೇಮ್ಸ್ ಹಗರಣ, ಎರಡು ದಶಕಗಳ ಹಿಂದಿನ ಬೊಫೋರ್ಸ್ ಲಂಚ ಹಗರಣ ಮುಂತಾದುವುಗಳು ಆಡಳಿತ ಪಕ್ಷ ಕಾಂಗ್ರೆಸ್ ಮೇಲೆ ಗಂಭೀರ ಪರಿಣಾಮ ಬೀರಲಿವೆ.
ಎಲ್ಲಾದರೂ ನಾಳೆಯೇ ಚುನಾವಣೆ ನಡೆದಿರೆ ಕಾಂಗ್ರೆಸ್ ಪಾತಾಳಕ್ಕೆ ಕುಸಿಯುವುದು ಖಚಿತ. 2009ರ ಲೋಕಸಭಾ ಚುನಾವಣೆಯಲ್ಲಿ 206 ಸ್ಥಾನಗಳನ್ನು ಗೆದ್ದಿದ್ದ ಈ ಪಕ್ಷವು, ಸುಮಾರು 40 ಸ್ಥಾನಗಳನ್ನು ಕಳೆದುಕೊಳ್ಳಬಹುದು.
ಬಿಜೆಪಿಗೆ ಲಾಭ... ಪ್ರಸಕ್ತ ಬಿಜೆಪಿ ನೇತೃತ್ವದ ಎನ್‌ಡಿಎ ಕೂಟ ಹೊಂದಿರುವ ಒಟ್ಟು ಸ್ಥಾನಗಳು 159. ಈಗಲೇ ಚುನಾವಣೆ ನಡೆದರೆ, ಸಮೀಕ್ಷೆ ಪ್ರಕಾರ ಕನಿಷ್ಠ 20 ಸ್ಥಾನಗಳನ್ನು ಇದು ಹೆಚ್ಚಿಸಿಕೊಳ್ಳುತ್ತದೆ. ಅಂದಾಜು 174-184 ಸೀಟುಗಳನ್ನು ಗೆಲ್ಲಬಹುದು.
PTI
ಆದರೆ ಕಾಂಗ್ರೆಸ್ ಹಿನ್ನಡೆ ಅನುಭವಿಸಲಿದೆ. 2009ರ ಚುನಾವಣೆಯಲ್ಲಿ ಯುಪಿಎ ಪಡೆದಿರುವ 259 ಸ್ಥಾನಗಳಿಂದ ಕನಿಷ್ಠ 42 ಸ್ಥಾನಗಳನ್ನು ಕಳೆದುಕೊಳ್ಳಬಹುದು. 212-222ಕ್ಕೆ ಕುಸಿಯಬಹುದು. ಆದರೂ ಒಟ್ಟಾರೆ ಗಮನಿಸಿದರೆ ಯುಪಿಎಯೇ ಪ್ರಬಲವಾಗಿ ಕಾಣಿಸಿಕೊಳ್ಳಲಿದೆ.
ಲೋಕಸಭೆಯ ಪ್ರತಿಪಕ್ಷದ ಮುಖಂಡರು ಯಾರು ಎಂಬುದು ಶೇ.73 ಮಂದಿಗೆ ಗೊತ್ತಿಲ್ಲದ ಹೊರತಾಗಿಯೂ ಜನರಿಗೆ ಬಿಜೆಪಿ ಇಷ್ಟವಾಗಿದೆ. ಎಲ್ಲಾ ವಿಭಾಗಗಳಲ್ಲೂ ಬಿಜೆಪಿ ನಿರ್ವಹಣೆ ಉತ್ತಮವಾಗಿದೆ.
ಬಿಜೆಪಿ ಅಧ್ಯಕ್ಷರಾಗಿ ನಿತಿನ್ ಗಡ್ಕರಿ ಅತ್ಯುತ್ತಮ ಎಂದು ಹೇಳಿರುವುದು ಶೇ.28 ಮಂದಿ. ಶೇ.31ರಷ್ಟು ಮಂದಿ ಓಕೆ ಎಂದಷ್ಟೇ ಹೇಳಿದ್ದಾರೆ. ಅಧಿಕಾರದಲ್ಲಿರುವ ರಾಜ್ಯಗಳಾದ ಮಧ್ಯಪ್ರದೇಶ, ಗುಜರಾತ್, ಛತ್ತೀಸ್‌ಗಢ ಮತ್ತು ಕರ್ನಾಟಕಗಳಲ್ಲಿ ಬಿಜೆಪಿ ತನ್ನ ಪ್ರಭುತ್ವವನ್ನು ಉಳಿಸಿಕೊಂಡಿದೆ ಎಂದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.
ಬಿಜೆಪಿಯಲ್ಲಿ ಮೋದಿಯೇ ಪ್ರಧಾನಿ... ಪ್ರಧಾನ ಮಂತ್ರಿ ಸ್ಥಾನಕ್ಕೆ ಯಾರು ಸೂಕ್ತ ಎಂಬ ಪ್ರಶ್ನೆಗೆ ಜನತೆ ನೀಡಿರುವ ಹೆಸರುಗಳಿವು. ಶೇ.20 ಮಂದಿ ರಾಹುಲ್ ಗಾಂಧಿ, ಶೇ.17 ಮಂದಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಮನಮೋಹನ್ ಸಿಂಗ್ ಅವರಿಗೆ. ಶೇ.9ರಷ್ಟು ಜನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರೇ ಓಕೆ ಎಂದಿದ್ದಾರೆ.
PTI
2006ರ ಜನವರಿ ಸಮೀಕ್ಷೆಯಲ್ಲಿ ಶೇ.27ರ ಬೆಂಬಲ ಪಡೆದುಕೊಂಡಿದ್ದ ಸೋನಿಯಾ ಗಾಂಧಿ ಜನಪ್ರಿಯತೆ ಭಾರೀ ಪ್ರಮಾಣದಲ್ಲಿ ಕುಸಿತ ಕಂಡಿದೆ. ಅವರು ಪ್ರಧಾನಿ ಹುದ್ದೆಗೆ ಸೂಕ್ತ ಎಂದವರು ಶೇ.8 ಮಂದಿ ಮಾತ್ರ. ಹಗರಣಗಳು ಆಕೆಯ ಗೌರವಕ್ಕೆ ಭಾರೀ ಪ್ರಮಾಣದಲ್ಲಿ ಮಸಿ ಬಳಿದಿರುವುದು ಸ್ಪಷ್ಟವಾಗಿದೆ.
ರಾಹುಲ್ ಜನಪ್ರಿಯತೆ ಕುಸಿತ... ಕಳೆದ ಆರು ತಿಂಗಳುಗಳ ಅವಧಿಯಲ್ಲಿ ರಾಹುಲ್ ಗಾಂಧಿ ಶೇ.9ರಷ್ಟು ಜನಪ್ರಿಯತೆ ಕುಸಿತ ಕಂಡಿದ್ದಾರೆ. ಆದರೂ ಕಾಂಗ್ರೆಸ್‌ನಲ್ಲಿರುವ ಪ್ರಮುಖ ವ್ಯಕ್ತಿ ರಾಹುಲ್. ಶೇ.50 ಮಂದಿಯ ಪ್ರಕಾರ ಪ್ರಧಾನಿಯಾಗಲು ರಾಹುಲ್ ಗಾಂಧಿ ಸಿದ್ಧರಿದ್ದಾರೆ.
ಕಾಂಗ್ರೆಸ್ ಕೂಡ ರಾಹುಲ್ ಗಾಂಧಿಯನ್ನೇ ಪ್ರಧಾನ ಮಂತ್ರಿಯನ್ನಾಗಿ ಆಯ್ಕೆ ಮಾಡುವ ಸಾಧ್ಯತೆಗಳಿವೆ. ಇದಕ್ಕೆ ಕಾರಣ ಅವರಿಗಿರುವ ಜನಪ್ರಿಯತೆ ಎಂದು ಸಮೀಕ್ಷೆ ಕಂಡುಕೊಂಡಿದೆ.