ನನ್ನ ಮಗ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ. ಅಂತಹ ಯಾವುದೇ ಪತ್ರ ನನಗೆ ಕಳುಹಿಸಿಲ್ಲ. ಇದೆಲ್ಲ ಮಾಧ್ಯಮ ವರದಿಗಳು. ಅವುಗಳನ್ನು ಹಾಗೆಯೇ ಮುಂದುವರಿಯಲು ಬಿಡಿ ಎಂದು ತಮಿಳುನಾಡು ಮುಖ್ಯಮಂತ್ರಿ ಹಾಗೂ ಡಿಎಂಕೆ ವರಿಷ್ಠ ಎಂ. ಕರುಣಾನಿಧಿ ಮೌನ ಮುರಿದಿದ್ದಾರೆ.
2ಜಿ ತರಂಗಾಂತರ ಹಗರಣದಲ್ಲಿ ಎ. ರಾಜಾರನ್ನು ಡಿಎಂಕೆ ಸಮರ್ಥಿಸಿಕೊಳ್ಳುತ್ತಿರುವುದು ಮತ್ತು ಪಕ್ಷದಲ್ಲಿ ತನ್ನ ಕಿರಿಯ ಸಹೋದರಿ ಕನಿಮೋಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿ ಅಳಗಿರಿ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಸ್ಥಾನ ಹಾಗೂ ಡಿಎಂಕೆ ದಕ್ಷಿಣ ವಲಯದ ಸಂಘಟನಾ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡುವ ಪತ್ರವನ್ನು ತನ್ನ ತಂದೆಗೆ ಸಲ್ಲಿಸಿದ್ದರು ಎಂದು ವರದಿಗಳು ಹೇಳಿದ್ದವು.
ಆದರೆ ಈ ವರದಿಗಳನ್ನು ಸ್ವತಃ ಕರುಣಾನಿಧಿ ತಳ್ಳಿ ಹಾಕಿದ್ದಾರೆ. ನನ್ನ ಮಗ ಅಂತಹ ಯಾವುದೇ ಪತ್ರ ನೀಡಿಲ್ಲ. ಆತ ರಾಜೀನಾಮೆ ನೀಡುವ ಪ್ರಶ್ನೆಯೇ ಉದ್ಭವಿಸಿಲ್ಲ. ಇದೆಲ್ಲ ಮಾಧ್ಯಮಗಳ ಸೃಷ್ಟಿ ಎಂದು ಸ್ಪಷ್ಟನೆ ನೀಡಿದ್ದಾರೆ.
ಅದೇ ಹೊತ್ತಿಗೆ ಅತ್ತ ರಾಜಾ ವಿರುದ್ಧ ಪ್ರಕರಣ ದಾಖಲಿಸಲು ದೆಹಲಿ ನ್ಯಾಯಾಲಯವೊಂದು ಬಹುತೇಕ ಒಪ್ಪಿಗೆ ನೀಡುವ ಹಂತಕ್ಕೆ ಬಂದಿರುವುದಕ್ಕೆ ಪ್ರತಿಕ್ರಿಯಿಸಲು ಕರುಣಾನಿಧಿ ನಿರಾಕರಿಸಿದರು.
ನ್ಯಾಯಾಲಯಗಳ ಮುಂದಿರುವ ವಿಚಾರಗಳ ಕುರಿತು ನಾನು ಯಾವತ್ತೂ ಪ್ರತಿಕ್ರಿಯೆ ನೀಡುವುದಿಲ್ಲ. ರಾಜಾ ತಪ್ಪು ಮಾಡಿದ್ದು ಸಾಬೀತಾದಲ್ಲಿ ಅವರ ವಿರುದ್ಧ ಪಕ್ಷ ಕ್ರಮ ಕೈಗೊಳ್ಳುತ್ತದೆ ಎಂದರು.
ರಾಜಾ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಜನತಾ ಪಕ್ಷದ ಸುಬ್ರಮಣ್ಯನ್ ಸ್ವಾಮಿ ದಾಖಲಿಸಿದ್ದ ಖಾಸಗಿ ದೂರನ್ನು ಪರಿಗಣಿಸಿರುವ ದೆಹಲಿ ನ್ಯಾಯಾಲಯವು, ದೂರು ಸಮರ್ಥನೀಯ ಎಂದು ನಿನ್ನೆಯಷ್ಟೇ ಹೇಳಿತ್ತು. ಈ ಕುರಿತು ನ್ಯಾಯಾಲಯ ಶೀಘ್ರದಲ್ಲೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ.