ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣಗೆ ಕೇಂದ್ರ ಕೊಕ್? (SM Krishna | External Affairs Minister | Manmohan Singh | UPA govt)
Bookmark and Share Feedback Print
 
ದುರ್ಬಲ ವಿದೇಶಾಂಗ ಸಚಿವ ಎಂಬ ಟೀಕೆಗಳನ್ನು ಎದುರಿಸುತ್ತಿರುವ ಕರ್ನಾಟಕ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಸಚಿವ ಸ್ಥಾನ ಕಳೆದುಕೊಳ್ಳಲಿದ್ದಾರೆಯೇ? ಅವರ ಬದಲಿಗೆ ಬೇರೆಯವರಿಗೆ ಖಾತೆಯನ್ನು ವಹಿಸಲು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ನಿರ್ಧರಿಸಿದ್ದಾರೆಯೇ? ಹಾಗೆಂದು ಮಾಧ್ಯಮ ವರದಿಗಳು ಹೇಳುತ್ತಿವೆ. ಆದರೆ ಸ್ವತಃ ಸಚಿವರು ಇದನ್ನು ತಳ್ಳಿ ಹಾಕಿದ್ದಾರೆ.

ಮಾಧ್ಯಮದಲ್ಲಿ ಬರುತ್ತಿರುವ ವರದಿಗಳು ಕೇವಲ ಕಲ್ಪನೆ ಮಾತ್ರ. ಆದರೂ ತನ್ನ ಸಂಪುಟದಲ್ಲಿ ಯಾರು ಸಚಿವರಾಗಿರಬೇಕು ಮತ್ತು ಇರಬಾರದು ಎಂಬುದನ್ನು ನಿರ್ಧರಿಸುವ ವಿಶೇಷ ಅಧಿಕಾರ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರಿಗಿದೆ ಎಂದು ಕೃಷ್ಣ ಸ್ಪಷ್ಟನೆ ನೀಡಿದ್ದಾರೆ.

ನೀವು ಪ್ರಸಕ್ತ ಹೊಂದಿರುವ ಖಾತೆಯಲ್ಲೇ ಮುಂದುವರಿಯಲು ಬಯಸುತ್ತಿದ್ದೀರಾ ಅಥವಾ ಇದಕ್ಕಿಂತಲೂ ದೊಡ್ಡ ಸವಾಲನ್ನು ಎದುರಿಸಲು ಸಿದ್ಧರಾಗಿದ್ದೀರಾ ಎಂದು 2010ರಲ್ಲಿ ವಿದೇಶಾಂಗ ಸಚಿವಾಲಯವು ಮಾಡಿದ ಸಾಧನೆಗಳನ್ನು ಪತ್ರಿಕಾಗೋಷ್ಠಿಯಲ್ಲಿ ವಿವರಿಸುತ್ತಿದ್ದ ಸಚಿವರಲ್ಲಿ ಪತ್ರಕರ್ತರು ಕೇಳಿದರು.

ಇದಕ್ಕೆ ಉತ್ತರಿಸಿದ ಅವರು, 'ಪ್ರತಿಯೊಬ್ಬರಿಗೂ ವಿಶೇಷವಾಗಿ ಕಲ್ಪನೆ ಮಾಡಿಕೊಳ್ಳುವ ವಿಶೇಷ ಅಧಿಕಾರವಿದೆ. ಅದನ್ನೇ ನಾನೀಗ ನೋಡುತ್ತಿದ್ದೇನೆ. ನೀವು (ಮಾಧ್ಯಮಗಳು) ಇದನ್ನೇ ಮುಂದುವರಿಸಿ. ನಾವು ಅದನ್ನು ಓದುತ್ತಾ, ನೋಡುತ್ತಾ ಮುಂದುವರಿಯುತ್ತೇವೆ. ನಂತರ ಏನು ಬರುತ್ತದೋ ಅದನ್ನು ಎದುರಿಸುತ್ತೇವೆ' ಎಂದು ಚುಚ್ಚಿದರು.

ಆದರೂ ಎಂದು ಮಾತು ಮುಂದುವರಿಸಿದ ಕೃಷ್ಣ, ನನ್ನ ಪ್ರಕಾರ ಯಾರನ್ನು ಉಳಿಸಿಕೊಳ್ಳಬೇಕು, ಯಾರನ್ನು ಕೈ ಬಿಡಬೇಕು ಎನ್ನುವ ಸಂಪೂರ್ಣ ಹಕ್ಕು ಪ್ರಧಾನಿಯವರದ್ದು ಎಂದರು.

ಕೃಷ್ಣ ನಿಜಕ್ಕೂ ದುರ್ಬಲರೇ?
ಇದು ಕಾಂಗ್ರೆಸ್ ಸೇರಿದಂತೆ ಹಲವರನ್ನು ಕಾಡುತ್ತಿರುವ ಪ್ರಶ್ನೆ. ಅದು ಪಾಕಿಸ್ತಾನದ ಎದುರಿಗಿನ ಪ್ರಸಂಗವಾಗಿರಬಹುದು ಅಥವಾ ದೊಡ್ಡಣ್ಣ ಅಮೆರಿಕಾ ಜತೆಗಿನ ವ್ಯವಹಾರವಾಗಿರಬಹುದು. ಹಲವು ಸಂದರ್ಭಗಳಲ್ಲಿ ತೀವ್ರ ಟೀಕೆಗಳೊಗಾದ ಸಚಿವ ಎಸ್.ಎಂ. ಕೃಷ್ಣ.

ಮೂಲಗಳ ಪ್ರಕಾರ ಕೃಷ್ಣ ಅವರನ್ನು ವಿದೇಶಾಂಗ ಸಚಿವಾಲಯದಿಂದ ತೆಗೆದು ಬೇರೆ ಇನ್ಯಾವುದಾದರೂ ಖಾತೆಯನ್ನು ನೀಡುವ ಸಾಧ್ಯತೆಗಳಿವೆ. ಆ ಸ್ಥಾನಕ್ಕೆ ಆನಂದ್ ಶರ್ಮಾರನ್ನು ತರಲಾಗುತ್ತದೆ. ಇದು ಕಾಂಗ್ರೆಸ್ ನಿರ್ಧಾರ.

ಈ ನಿರ್ಧಾರ ಈಗ ಇದ್ದಕ್ಕಿದ್ದಂತೆ ತೆಗೆದುಕೊಂಡಿರುವುದಲ್ಲ. ಇತ್ತೀಚೆಗಷ್ಟೇ ನಡೆದ ಕಾಂಗ್ರೆಸ್ ಸಮಾವೇಶದ ಸಂದರ್ಭದಲ್ಲಿ ಬಹಿರಂಗವಾಗಿತ್ತು. ಕಾಂಗ್ರೆಸ್‌ನ ಅಂತಾರಾಷ್ಟ್ರೀಯ ನಿಲುವುಗಳ ಬಗ್ಗೆ ಪಕ್ಷದ ಹೇಳಿಕೆಯನ್ನು ನೀಡಲು ಕೃಷ್ಣ ಬದಲಿಗೆ ಶರ್ಮಾರನ್ನು ಆರಿಸಲಾಗಿತ್ತು.

ಈ ಸಮಾವೇಶಕ್ಕೆ ಕೃಷ್ಣ ಹೋಗಿದ್ದರೂ, ಶರ್ಮಾರನ್ನೇ ಪ್ರಮುಖರಂತೆ ಬಿಂಬಿಸಲಾಗಿತ್ತು. ಯುಪಿಎ ಸರಕಾರವು ಸಾಧಿಸಿದ ವಿದೇಶಾಂಗ ನೀತಿಯ ಸಾಧನೆಗಳ ಬಗ್ಗೆ ಶರ್ಮಾರೇ ವಿವರಣೆ ನೀಡಿದ್ದರು.

ಕೆಲವೇ ದಿನಗಳಲ್ಲಿ ಪ್ರಧಾನಿ ತನ್ನ ಸಂಪುಟ ವಿಸ್ತರಣೆ ನಡೆಸಲಿದ್ದು, ಈ ಸಂದರ್ಭದಲ್ಲಿ ಕೃಷ್ಣ ಹಣೆಬರಹ ನಿರ್ಧಾರವಾಗಲಿದೆ.
ಸಂಬಂಧಿತ ಮಾಹಿತಿ ಹುಡುಕಿ