ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 2ಜಿ ಹಗರಣ ನಡೆದೇ ಇಲ್ಲ: ಕೇಂದ್ರ | ಶುದ್ಧ ಸುಳ್ಳು: ಬಿಜೆಪಿ (BJP | 2G spectrum scam | A Raja | Kapil Sibal)
Bookmark and Share Feedback Print
 
ಸ್ವತಂತ್ರ ಭಾರತದ ಇತಿಹಾಸದಲ್ಲೇ ನಡೆದಿರುವ ಅತಿದೊಡ್ಡ ಹಗರಣ ಎಂದು ಬಿಂಬಿತವಾಗಿರುವ, 1.76 ಲಕ್ಷ ಕೋಟಿ ರೂಪಾಯಿ ಮೊತ್ತದ 2ಜಿ ತರಂಗಾಂತರ ಹಂಚಿಕೆ ಹಗರಣ ನಡೆದೇ ಇಲ್ಲ. ಈ ಸಂಬಂಧ ಸಿಎಜಿ ನೀಡಿರುವ ವರದಿ ಸತ್ಯವಲ್ಲ ಎಂದು ಕೇಂದ್ರ ಸರಕಾರ ವಾದಿಸಲು ಆರಂಭಿಸಿದೆ. ಹಾಗಿದ್ದರೆ ದೂರಸಂಪರ್ಕ ಸಚಿವರಾಗಿದ್ದ ಎ. ರಾಜಾ ರಾಜೀನಾಮೆ ನೀಡಿದ್ದು ಯಾಕೆ ಎಂದು ಬಿಜೆಪಿ ಪ್ರಶ್ನಿಸಿದೆ.

2ಜಿ ಹಗರಣ ಕುರಿತು ಮೊತ್ತ ಮೊದಲ ಬಾರಿ ಅಂಕಿ-ಅಂಶ ಬಹಿರಂಗಪಡಿಸಿದ ಮಹಾಲೇಖಪಾಲರ (ಸಿಎಜಿ) ವರದಿಯತ್ತ ಶಂಕೆ ವ್ಯಕ್ತಪಡಿಸಿರುವುದು ಕೇಂದ್ರ ದೂರಸಂಪರ್ಕ ಸಚಿವ ಕಪಿಲ್ ಸಿಬಲ್. ಪ್ರತಿಪಕ್ಷಗಳು ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆ ಪಟ್ಟು ಸಡಿಸದೇ ಇರುವ ಹಿನ್ನೆಲೆಯಲ್ಲಿ ಅವರು ಸರಕಾರವನ್ನು ಸಮರ್ಥಿಸಿಕೊಳ್ಳಲು ಮೇಲಿನಂತೆ ಹೇಳಿದ್ದಾರೆ.

ಸಿಎಜಿ ವರದಿ ಮಾಡಿರುವ ಹಗರಣದ ಅಂದಾಜು ಮೊತ್ತ 1.76 ಲಕ್ಷ ರೂ. ಮೇಲೆ ನನಗೆ ಸಂಶಯವಿದೆ. ಆಧಾರ ರಹಿತವಾಗಿ ಸಿಎಜಿ ವರದಿ ಸಲ್ಲಿಸಿರುವುದು ತುಂಬ ನೋವು ತಂದಿದೆ ಎಂದು ಅವರು ತಿಳಿಸಿದರು.

2ಜಿ ತರಂಗಾಂತರ ಹಂಚಿಕೆಯಿಂದ ಸರಕಾರದ ಬೊಕ್ಕಸಕ್ಕೆ ಆದ ನಷ್ಟವನ್ನೇ ಹಗರಣ ಎಂದು ಬಿಂಬಿಸುತ್ತಿರುವ ಸಿಎಜಿ ಕ್ರಮ ಸರಿಯಲ್ಲ ಎಂದಿರುವ ಅವರು, ಇಷ್ಟೆಲ್ಲಾ ರಾದ್ಧಾಂತಕ್ಕೆ 1999ರ ಎನ್‌ಡಿಎ ಸರಕಾರದ ದೂರಸಂಪರ್ಕ ನೀತಿಯೇ ಮೂಲ ಹೊಣೆ ಎಂದು ಜರೆದರು.

1994ರಲ್ಲಿ ಸ್ಥಾಪನೆಯಾದ ರಾಷ್ಟ್ರೀಯ ದೂರಸಂಪರ್ಕ ಅಧಿನಿಯಮ, ಬಿಜೆಪಿ ಬೆಂಬಲಿತ ಎನ್‌ಡಿಎ ಸರಕಾರದ ಬುದ್ಧಿವಂತಿಕೆಯಿಂದ ರೂಪ ತಳೆದದ್ದು. ಆ ನಿಯಮದಂತೆ ಎ. ರಾಜಾ ಅವರು ತರಂಗಾಂತರಗಳನ್ನು ಹಂಚಿದ್ದಾರೆ. ಎನ್‌ಡಿಎ ಅಧಿಕಾರದ ಅವಧಿಯಲ್ಲಿ 2ಜಿ ತರಂಗಗಳ 85 ಪರವಾನಗಿಯನ್ನು ನೀಡಲಾಗಿತ್ತು. ಯುಪಿಎ ಅಧಿಕಾರಾವಧಿಯಲ್ಲಿ 147 ಪರವಾನಗಿಯನ್ನು ಹಂಚಲಾಗಿತ್ತು ಎಂದು ವಿವರಣೆ ನೀಡಿದರು.

ಸರಕಾರದ ಬೊಕ್ಕಸಕ್ಕೆ ಇದರಿಂದ ಯಾವುದೇ ನಷ್ಟ ಸಂಭವಿಸಿಲ್ಲ. ಸಿಎಜಿ ವರದಿಯೇ ತಪ್ಪು ಎಂದ ಸಿಬಲ್, ವಿರೋಧ ಪಕ್ಷಗಳು ಸಾರ್ವಜನಿಕರಿಗೆ ಮೋಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಬಿಜೆಪಿಯಿಂದ ಖಾರ ಪ್ರತಿಕ್ರಿಯೆ...
ಸರಕಾರದ ಬೊಕ್ಕಸಕ್ಕೆ ಯಾವುದೇ ನಷ್ಟ ಸಂಭವಿಸಿಲ್ಲ ಎಂದಾದರೆ, ರಾಜಾ ರಾಜೀನಾಮೆ ಕೊಡುವ ಔಚಿತ್ಯವೇನಿತ್ತು ಎಂದು ಬಿಜೆಪಿ ಹಿರಿಯ ನಾಯಕ ಅರುಣ್ ಜೇಟ್ಲಿಯವರು ಕಪಿಲ್ ಸಿಬಲ್‌ರನ್ನು ಪ್ರಶ್ನಿಸಿದ್ದಾರೆ.

ಪಿಎಸಿ-ಜೆಪಿಸಿ-ಸಿಬಿಐಯನ್ನು ಒಂದೇ ಬುಟ್ಟಿಯಲ್ಲಿ ತೂಗಿ, ಸರಕಾರದ ಬೊಕ್ಕಸಕ್ಕೆ ಯಾವುದೇ ನಷ್ಟ ಸಂಭವಿಸಿಲ್ಲ ಎಂದು ವಾದಿಸುತ್ತಿರುವ ಸಿಬಲ್ ಅವರ ಎಲ್ಲಾ ವಿಷಯಗಳು ಹಗರಣವನ್ನು ದಾರಿತಪ್ಪಿಸುವ ಉದ್ದೇಶದಿಂದ ಕೂಡಿದೆ ಎಂದು ವ್ಯಂಗ್ಯವಾಡಿರುವ ರಾಜ್ಯಸಭಾ ವಿಪಕ್ಷ ನಾಯಕ, ಸಿಬಲ್ ಅಂಕಿ-ಅಂಶಗಳಲ್ಲಿ ಆಟವಾಡುತ್ತಿದ್ದಾರೆ ಎಂದು ಟೀಕಿಸಿದರು.

2008ರಲ್ಲಿ ಮಂಜೂರಾಗಿದ್ದ 2ಜಿ ತರಂಗಾಂತರ ಹಂಚಿಕೆ ವ್ಯವಹಾರಕ್ಕೆ 2001ರ ಬೆಲೆಯನ್ನು ಏಕೆ ನಿಗದಿ ಮಾಡಬೇಕಿತ್ತು ಎಂದು ಪ್ರಶ್ನಿಸಿರುವ ಜೇಟ್ಲಿ, ಸಿಬಲ್ ಅವರು ಹಗರಣದ ಮೊದಲ ಅಂಶವನ್ನೇ ಮರೆತಂತಿದೆ ಎಂದು ಬೆಟ್ಟು ಮಾಡಿದರು.
ಸಂಬಂಧಿತ ಮಾಹಿತಿ ಹುಡುಕಿ