ಪಾಕಿಸ್ತಾನಕ್ಕೆ ತೆರಳುತ್ತಿದ್ದ ಸಂಜೋತಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಸ್ಫೋಟ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಾಮಿ ಅಸೀಮಾನಂದ ಅವರು ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ ಎಂಬ ವರದಿಗಳನ್ನು "ಇದು ಇತ್ತೀಚೆಹೆ ಬೋಫೋರ್ಸ್ ಹಗರಣಕ್ಕೆ ಮತ್ತೆ ಬಲ ಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮಾಡುತ್ತಿರುವ ಗಮನ ಬೇರೆಡೆ ಸೆಳೆಯುವ ತಂತ್ರ" ಎಂದು ಬಿಜೆಪಿ ಟೀಕಿಸಿದೆ.
ಇದರ ಹಿಂದೆ ಸ್ಪಷ್ಟ ವಿಧಾನವೊಂದಿದೆ. ಎರಡು ದಿನದ ಹಿಂದೆ, ಮಾಧ್ಯಮಗಳೆಲ್ಲವೂ ಬೋಫೋರ್ಸ್ ಲಂಚ ಪ್ರಕರಣದ ಆರೋಪಿಯಾಗಿರುವ ಇಟಲಿ ಉದ್ಯಮಿ ಒಟ್ಟಾವಿಯೋ ಕ್ವಟ್ರೋಚಿಯ ಮಾಜಿ ಚಾಲಕ ಮತ್ತು ಗಾಂಧಿ ಕುಟುಂಬದ ಭದ್ರತಾ ಅಧಿಕಾರಿಯೊಬ್ಬನ ಹೇಳಿಕೆಯನ್ನು ಪ್ರಕಟಿಸಿದವು. ಕ್ವಚ್ರೋಟಿ ಮತ್ತು ದಿವಂಗತ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಸೋನಿಯಾ ಗಾಂಧಿ ನಡುವೆ ಆತ್ಮೀಯ ಸಂಬಂಧವಿತ್ತು ಎಂದವರು ಹೇಳಿದ್ದರು. ಈ ಆರೋಪಗಳ ಬಗ್ಗೆ ಕಾಂಗ್ರೆಸ್ ಎಂದಾದರೂ ನಿರಾಕರಿಸಿದೆಯೇ ಎಂದು ಬಿಜೆಪಿ ವಕ್ತಾರ ರವಿಶಂಕರ್ ಪ್ರಸಾದ್ ಅವರು ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಬೋಫೋರ್ಸ್ ಪ್ರಕರಣದ ಬಗ್ಗೆ ಪ್ರತಿಪಕ್ಷಗಳಿಂದ ಗದ್ದಲ ಜೋರಾಗುತ್ತಿದೆ, ಜನರ ಆಕ್ರೋಶ ಮತ್ತೆ ಚಿಗಿತುಕೊಳ್ಳುತ್ತದೆ ಎಂದಾದಾಗ, ದಿಢೀರನೇ, ಅಸೀಮಾನಂದರಿಗೆ ಕೆಲವು ಆರೆಸ್ಸೆಸ್ ನಾಯಕರೊಂದಿಗೆ ಸಂಬಂಧ ಕಲ್ಪಿಸುವ ಅರೆಬರೆ ವಿಷಯಗಳನ್ನು ತನಿಖಾ ಏಜೆನ್ಸಿ ಸೋರಿಕೆ ಮಾಡುತ್ತದೆ. ಖಂಡಿತವಾಗಿಯೂ ಇದು ಖಂಡನಾರ್ಹ ಮತ್ತು ಜನರ ಗಮನ ಬೇರೆಡೆ ಸೆಳೆಯುವ ಕಾಂಗ್ರೆಸ್ ತಂತ್ರ ಎಂದವರು ಹೇಳಿದರು.
ಕಾಂಗ್ರೆಸ್‌ನ ವೈಯಕ್ತಿಕ ಅಜೆಂಡಾಕ್ಕಾಗಿ ಸಿಬಿಐ ಮತ್ತು ಇತರ ತನಿಖಾ ಏಜೆನ್ಸಿಗಳನ್ನು ನೀವು ಬಳಸಿ, ದುರ್ಬಳಕೆ ಮಾಡಿಕೊಂಡರೆ, ವಿಶೇಷವಾಗಿ ತನ್ನ ಮೇಲೆ ಒಂದರ ಮೇಲೊಂದು ಬರುತ್ತಿರುವ ಹಗರಣಗಳಿಂದ ನುಣುಚಿಕೊಳ್ಳುವ ಸಲುವಾಗಿ ಬಳಸಿಕೊಂಡರೆ, ಖಂಡಿತವಾಗಿಯೂ ಇದು ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ರಾಜಿ ಮಾಡಿಕೊಂಡಂತೆ ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಣಿಗಾಗಿ ಇಲ್ಲಿಗಾಗಮಿಸಿರುವ ರವಿಶಂಕರ್ ಪ್ರಸಾದ್ ವಿಷಾದಿಸಿದರು.
ಇದೇ ಕಾಂಗ್ರೆಸ್ ವಿಶ್ವಸಂಸ್ಥೆಯೂ ಸೇರಿದಂತೆ ಇಡೀ ಜಗತ್ತಿನ ಮುಂದೆ, ಸಂಝೋತಾ ಎಕ್ಸ್‌ಪ್ರೆಸ್ ಸ್ಫೋಟದಲ್ಲಿ ಪಾಕಿಸ್ತಾನಿ ಉಗ್ರಗಾಮಿಗಳ ಕೈವಾಡವಿದೆ ಎಂದು ಹೇಳಿಕೊಂಡಿದೆ. ಈಗ ಹಿಂದೂ ತೀವ್ರವಾದಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಹೇಳಿದರೆ, ಇದು ಪಾಕಿಸ್ತಾನದ ಉಗ್ರಗಾಮಿಗಳಿಗೆ ಕುಮ್ಮಕ್ಕು ಕೊಟ್ಟಂತಾಗುತ್ತದೆ. ಪಾಕಿಸ್ತಾನಕ್ಕೆ ಕೂಡ, ಭಾರತದಲ್ಲಿ ತಾನೇನೂ ಉಗ್ರಗಾಮಿ ಚಟುವಟಿಕೆ ಮಾಡಿಸುತ್ತಿಲ್ಲ, ಎಲ್ಲವೂ ಹಿಂದೂ ತೀವ್ರವಾದಿಗಳೇ ಮಾಡುತ್ತಿದ್ದಾರೆ ಎಂದು ವಾದಿಸಿ ನುಣುಚಿಕೊಳ್ಳಲೊಂದು ಕಾರಣ ಸಿಕ್ಕಿದಂತಾಗಿದೆ ಎಂದು ಪ್ರಸಾದ್ ಹೇಳಿದರು.