ಗಾಳಿಪಟ ಹಿಡಿಯಲು ಹೋದ ನಾಲ್ವರು ಮಕ್ಕಳು ರೈಲಿನ ಇಂಜಿನ್ ಅಡಿಗೆ ಸಿಲುಕಿ ಪ್ರಾಣತೆತ್ತ ಭೀಕರ ಘಟನೆ ನಗರದ ಮಾಳವೀಯ ನಗರ ಪ್ರದೇಶದಲ್ಲಿ ಭಾನುವಾರ ಸಂಭವಿಸಿದೆ. ಸೆಕ್ಟರ್ 11ರಲ್ಲಿ ಅಪರಾಹ್ನ 3.20ರ ಸುಮಾರಿಗೆ ಈ ದುರಂತ ನಡೆದಿದೆ.
ಮಕರ ಸಂಕ್ರಾತಿಯ ಸಂಭ್ರಮದಲ್ಲಿ ಮಕ್ಕಳು ಮನೆಗಳ ಮಹಡಿಗಳಲ್ಲಿ ಹಾಗೂ ಕಾಲೋನಿಗಳಲ್ಲಿ ಗಾಳಿಪಟ ಹಾರಿಸುವುದರಲ್ಲಿ ನಿರತರಾಗಿದ್ದರು. ಮನೋಹರಪುರ ಕಟಿ ಬಸ್ತಿ ಪ್ರದೇಶದ ಈ ನಾಲ್ವರು ಮಕ್ಕಳು ಸಮೀಪದ ಕೇರಿಯಿಂದ ಹಾರಿಬರುತ್ತಿದ್ದ ಗಾಳಿಪಟಗಳನ್ನು ಹಿಡಿಯಲು ಪ್ರಯತ್ನಿಸುತ್ತಿದ್ದರು. ಕೇವಲ ಒಂದೆರಡು ರೂಪಾಯಿಯ ಈ ಗಾಳಿಪಟಗಳು ಈ ದುರ್ದೈವಿ ಮಕ್ಕಳ ಪಾಲಿಗೆ ಅತ್ಯಂತ ದುಬಾರಿಯಾಗಿ ಪರಿಣಮಿಸಿವೆ.
ಮೃತ ಮಕ್ಕಳನ್ನು ರಮೇಶ್ಚಂದ್ರ ಬೇರ್ವ ಎಂಬವರ ಪುತ್ರ ವಿಜಯ (12), ಬದ್ರಿ ಬೇರ್ವ ಎಂಬವರ ಪುತ್ರ ರವಿ (16), ಗೋಪಿ ಎಂಬವರ ಪುತ್ರ ಗೋಲು (13), ಗೊಂಡಿಲಾಲ್ ಎಂಬವರ ಪುತ್ರ ರಾಕೇಶ್ (16) ಎಂದು ಗುರುತಿಸಲಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಮೃತ ದೇಹವನ್ನು ಮೃತ ಮಕ್ಕಳ ಸಂಬಂಧಿಕರಿಗೆ ಒಪ್ಪಿಸಲಾಗಿದೆ.
ದ್ವಿಪಥ ರೈಲ್ವೇ ಹಳಿಯಲ್ಲಿ ಮಕ್ಕಳು ಗಾಳಿಪಟದ ಬೆನ್ನುಬಿದ್ದಿದ್ದರು. ಹಳಿಯೊಂದರಲ್ಲಿ ಗೂಡ್ಸ್ ರೈಲು ಸಾಗಿದ ತಕ್ಷಣ, ಇನ್ನೊಂದರಲ್ಲಿ ಇದ್ದಕ್ಕಿದ್ದಂತೆ ಪ್ರಯೋಗಾರ್ಥ ಚಲಿಸುತ್ತಿದ್ದ ಇಂಜಿನ್ ಅತ್ಯಂತ ವೇಗದಿಂದ ಸಾಗಿ ಬಂದಿದ್ದು, ಮಕ್ಕಳ ಮೇಲೆಯೇ ಸಾಗಿತ್ತು. ಗಾಳಿಪಟಗಳ ಮೇಲೆಯೇ ಗಮನ ಕೇಂದ್ರೀಕರಿಸಿದ್ದ ಮಕ್ಕಳು ಅದೇ ಉತ್ಸಾಹದಲ್ಲಿ ಶವವಾಗಿದ್ದರು. ಇಬ್ಬರು ಮಕ್ಕಳು ಚಕ್ರದಡಿ ನುಜ್ಜುಗುಜ್ಜಾಗಿದ್ದರೆ, ಮತ್ತಿಬ್ಬರ ದೇಹವು ಸುಮಾರು 30 - 40 ಅಡಿ ದೂರಕ್ಕೆ ಜಿಗಿದಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.