ಯಡ್ಡಿ ಸುದ್ದಿಯೇ ಇಲ್ಲ | ಮೋದಿ, ವರುಣ್ ರ‌್ಯಾಲಿಯಿಂದ ಹೊರಗೆ
ಗುವಾಹತಿ, ಸೋಮವಾರ, 10 ಜನವರಿ 2011( 13:11 IST )
ಸ್ವಜನ ಪಕ್ಷಪಾತ ಮತ್ತು ಭೂ ಹಗರಣ ಆರೋಪಗಳನ್ನು ಎದುರಿಸುತ್ತಿರುವ ಕರ್ನಾಟಕ ಮುಖ್ಯಮಂತ್ರಿ ಕುರಿತು ಪ್ರಸ್ತಾಪವೇ ಇಲ್ಲ. ಅದಕ್ಕಿಂತಲೂ ಅಚ್ಚರಿಯ ವಿಚಾರವೆಂದರೆ ಕೇಂದ್ರ ಸರಕಾರದ ಭ್ರಷ್ಟಾಚಾರ ವಿರುದ್ಧದ ಬಿಜೆಪಿ ರ‌್ಯಾಲಿಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ವರುಣ್ ಗಾಂಧಿ ಕಾಣಿಸಿಕೊಳ್ಳದೇ ಇರುವುದು.
ಇದು ಬಹಿರಂಗವಾದದ್ದು ಭಾನುವಾರ ಅಸ್ಸಾಂನಲ್ಲಿ ಮುಕ್ತಾಯಗೊಂಡ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ. ಭ್ರಷ್ಟಾಚಾರ ಕುರಿತು ಸಾಕಷ್ಟು ಪ್ರಸ್ತಾವನೆಗಳನ್ನು ಮಾಡಿದರೂ ಸಹ ಯಡಿಯೂರಪ್ಪನವರ ಕುರಿತು ಯಾವುದೇ ಪ್ರಸ್ತಾಪವಿಲ್ಲ. ಮುಖ್ಯಮಂತ್ರಿ ಬದಲಾವಣೆ ಕುರಿತೂ ಚಕಾರವಿಲ್ಲ. ಅವರನ್ನೇ ಮುಂದುವರಿಸುವ ಕುರಿತು ಇತ್ತೀಚಿನ ಚುನಾವಣಾ ಫಲಿತಾಂಶಗಳ ನಂತರ ಗಟ್ಟಿ ನಿರ್ಧಾರಕ್ಕೆ ಬಿಜೆಪಿ ಬಂದಂತಿದೆ.
ಭಾನುವಾರ ಬಿಜೆಪಿ ನಡೆಸಿದ ರ‌್ಯಾಲಿಯಲ್ಲಿ ಮೋದಿ ಮತ್ತು ವರುಣ್ ಭಾಗವಹಿಸಲಿಲ್ಲ. ಮೊದಲ ದಿನ ಇಬ್ಬರೂ ಕಾರ್ಯಕಾರಿಣಿಯಲ್ಲಿ ಭಾಗವಹಿಸಿದ್ದರಾದರೂ, ಎರಡನೇ ದಿನ ತಪ್ಪಿಸಿಕೊಂಡಿದ್ದರು.
ಮೂಲಗಳ ಪ್ರಕಾರ ಬಿಜೆಪಿಯು ಬಿಹಾರದ ಅಭಿವೃದ್ಧಿ ಮಾದರಿಯನ್ನು ಸ್ವೀಕರಿಸಿದೆ. ಬಿಹಾರ ಚುನಾವಣೆಯಲ್ಲಿ ಅಭಿವೃದ್ಧಿ ಮಂತ್ರಕ್ಕೆ ಮತದಾರ ತಲೆದೂಗಿರುವುದರಿಂದ, ಮುಂದಿನ ದಿನಗಳಲ್ಲಿ ಇತರ ವಿಚಾರಗಳಿಗಿಂತ ಹೆಚ್ಚಾಗಿ ಪ್ರಗತಿಯನ್ನೇ ಮುಂದಿಟ್ಟುಕೊಳ್ಳುವ ನಿರ್ಧಾರಕ್ಕೆ ಬಿಜೆಪಿ ಬಂದಿದೆ.
ಅದೇ ಕಾರಣದಿಂದ ಮೋದಿ ಮತ್ತು ವರುಣ್ ಅವರನ್ನು ಭಾನುವಾರದ ರ‌್ಯಾಲಿಯಿಂದ ಬಿಜೆಪಿ ದೂರ ಇಟ್ಟಿದೆ. ಭಾನುವಾರ ಮೋದಿಯವರು ದೆಹಲಿಯಲ್ಲಿ ನಡೆದ ಭಾರತೀಯ ಪ್ರವಾಸಿ ದಿವಸ್ ಕಾರ್ಯಕ್ರಮಕ್ಕೆ ತೆರಳಿದರೆ, ಅಸ್ಸಾಂ ಬಿಜೆಪಿಯ ಉಸ್ತುವಾರಿ ಹಾಗೂ ರಾಷ್ಟ್ರೀಯ ಕಾರ್ಯದರ್ಶಿಯೂ ಆಗಿರುವ ವರುಣ್ ಬೇರೊಂದು ಕಾರ್ಯಕ್ರಮದ ನೆಪದಲ್ಲಿ ನಿರ್ಗಮಿಸಿದರು.
ಯುಪಿಎ ಸರಕಾರದ ವಿರುದ್ಧ ಎನ್‌ಡಿಎ ನಡೆಸುವ ರಾಷ್ಟ್ರವ್ಯಾಪಿ ರ‌್ಯಾಲಿಯಿಂದ ಬೆಂಗಳೂರನ್ನು ಇತ್ತೀಚೆಗಷ್ಟೇ ಹೊರಗಿಡಲಾಗಿತ್ತು. ಇದಕ್ಕಿದ್ದ ಕಾರಣ ಕರ್ನಾಟಕದಲ್ಲಿ ಮುಜುಗರ ಎದುರಿಸಬಾರದು ಎನ್ನುವುದು. ಸ್ವತಃ ಸರಕಾರದ ವಿರುದ್ಧವೇ ಭಾರೀ ಆರೋಪಗಳು ಇರುವುದರಿಂದ ಇಂತಹ ನಿರ್ಧಾರಕ್ಕೆ ಬರಲಾಗಿತ್ತು.
ಈಗ ಬಿಜೆಪಿಯ ಬೆಂಕಿಯ ಚೆಂಡುಗಳು ಎಂದು ಗುರುತಿಸಲಾಗುವ ಮೋದಿ ಮತ್ತು ವರುಣ್‌ರನ್ನು ಕೂಡ ದೂರ ಇಡುವ ಕೆಲಸಗಳು ನಡೆಯುತ್ತಿವೆ. ಜತೆಗೆ ಬಣ ರಾಜಕೀಯ ಕೂಡ ಹೆಚ್ಚು ಕೆಲಸ ಮಾಡುತ್ತಿದೆ ಎಂದು ಹೇಳಲಾಗಿದೆ.