ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತೀವ್ರವಾದಿಗಳು ಆರೆಸ್ಸೆಸ್‌ನಿಂದ ತೊಲಗಬೇಕು: ಭಾಗವತ್ (RSS | Mohan Bhagwat | Hindu terror | extremists)
Bookmark and Share Feedback Print
 
ತೀವ್ರವಾದಿಗಳಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಜಾಗವಿಲ್ಲ. ಮೂಲಭೂತವಾದವನ್ನೇ ಉಸಿರಾಡುವವರು ಸಂಘಟನೆಯನ್ನು ತೊರೆಯಬೇಕು ಎಂದು ನಾವು ಈಗಾಗಲೇ ಸೂಚನೆ ನೀಡಿದ್ದೇವೆ. ಪ್ರಸಕ್ತ ನಡೆಯುತ್ತಿರುವುದು ಕಾಂಗ್ರೆಸ್ ಪ್ರಾಯೋಜಿತ ನಾಟಕ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ವಿಶ್ಲೇಷಿಸಿದ್ದಾರೆ.

ಸೂರತ್‌ನಲ್ಲಿ ಪತ್ರಕರ್ತರ ಜತೆ ಮಾತನಾಡುತ್ತಿದ್ದ ಅವರು, ತೀವ್ರವಾದದ ದೃಷ್ಟಿಕೋನವನ್ನು ಹೊಂದಿರುವ ಸದಸ್ಯರು ಸಂಘಟನೆಯಿಂದ ತೊಲಗಬೇಕು ಎಂದು ಆರೆಸ್ಸೆಸ್ ಈ ಹಿಂದೆಯೂ ಹೇಳಿದೆ. ಮುಂದೆಯೂ ಹೇಳುತ್ತದೆ ಎಂದರು.

ಆದರೆ ಆರೆಸ್ಸೆಸನ್ನು ಭಯೋತ್ಪಾದನೆಗೆ ಸಂಬಂಧ ಕಲ್ಪಿಸಿ ಪ್ರಸಕ್ತ ನಡೆಯುತ್ತಿರುವ ವಿದ್ಯಮಾನಗಳು ಕಾಂಗ್ರೆಸ್‌ನ ಯತ್ನ. ಸಂಘಟನೆಯ ಹೆಸರನ್ನು ಕೆಡಿಸಲು ಅದು ಮಾಡುತ್ತಿರುವ ತಂತ್ರ. ಅವರು ಗಮನವನ್ನು ಬೇರೆಡೆ ಸೆಳೆಯಲು ಯತ್ನಿಸುತ್ತಿದ್ದಾರೆ. ಅದೇ ಕಾರಣದಿಂದ ಹಿಂದೂ ಭಯೋತ್ಪಾದನೆ ಎಂಬ ವ್ಯಾಖ್ಯಾನವನ್ನು ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.

ಇತ್ತೀಚಿನ ಚುನಾವಣೆಗಳಲ್ಲಿ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದೆ. ಜತೆಗೆ ಸಾಕಷ್ಟು ಹಗರಣಗಳನ್ನೂ ಅದು ಮೆತ್ತಿಕೊಂಡಿದೆ. ಇದರಿಂದ ಹತಾಶೆಗೊಳಗಾಗಿರುವ ಪಕ್ಷ, ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ನಮ್ಮ ಮೇಲೆ ಆಪಾದನೆಗಳನ್ನು ಮಾಡುತ್ತಿದೆ ಎಂದು ಭಾಗ್ವತ್ ಆರೋಪಿಸಿದರು.

ಸಂಜೋತಾ ಎಕ್ಸ್‌ಪ್ರೆಸ್, ಅಜ್ಮೀರ್ ದರ್ಗಾ ಮುಂತಾದ ಸ್ಫೋಟಗಳಲ್ಲಿ ಹಿಂದೂ ತೀವ್ರವಾದಿಗಳು ಪಾಲ್ಗೊಂಡದ್ದು ಹೌದು ಎಂದು ಆರೆಸ್ಸೆಸ್ ಜತೆ ಸಂಬಂಧ ಹೊಂದಿರುವ ಸ್ವಾಮಿ ಅಸೀಮಾನಂದ್ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಅವರು ಪ್ರತಿಕ್ರಿಯಿಸುತ್ತಿದ್ದರು.

ಸಿಬಿಐ ಮತ್ತೊಮ್ಮೆ ತಾನು ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಎಂಬುದನ್ನು ಎತ್ತಿ ತೋರಿಸಿದೆ. ಅದು ವಾದಿಸುತ್ತಿರುವ ಯಾವುದೇ ವಿಚಾರಗಳಿಗೂ ಆಧಾರಗಳಿಲ್ಲ. ಸುಖಾಸುಮ್ಮನೆ ಆರೋಪಗಳನ್ನು ಮಾಡಲಾಗುತ್ತಿದೆ. ಇದರಿಂದ ತನಿಖಾ ಸಂಸ್ಥೆಯು ತನ್ನ ಘನತೆಯನ್ನು ಕಳೆದುಕೊಳ್ಳುತ್ತಿದೆ ಎಂದೂ ಭಾಗ್ವತ್ ಅಸಮಾಧಾನ ವ್ಯಕ್ತಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ