ಹಿಂದೂ ನಾಯಕರನ್ನು ಭಯೋತ್ಪಾದಕರು ಎಂದು ಬಿಂಬಿಸುವ ಮೂಲಕ ಅವರ ಗೌರವಕ್ಕೆ ಮಸಿ ಬಳಿಯುತ್ತಿರುವ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ವಿಶ್ವ ಹಿಂದೂ ಪರಿಷತ್, ಸ್ವಾಮಿ ಅಸೀಮಾನಂದ್ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ ಎನ್ನುವುದು ಶುದ್ಧ ಸುಳ್ಳು ಎಂದು ಕಿಡಿಕಾರಿದೆ.
ನಾವು ಜನರಲ್ಲಿ ಅರಿವನ್ನುಂಟು ಮಾಡಲು ಪ್ರಯತ್ನಿಸುತ್ತಿದ್ದೇವೆ. ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ನಾಯಕರನ್ನು ಕಾಂಗ್ರೆಸ್ ಭಯೋತ್ಪಾದನೆಯ ಸುಳಿಯಲ್ಲಿ ಸಿಲುಕಿಸಲು ಯತ್ನಿಸಿದರೆ, ಅದರ ವಿರುದ್ಧ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ವಿಎಚ್‌ಪಿಯ ಅಂತಾರಾಷ್ಟ್ರೀಯ ಅಧ್ಯಕ್ಷ ಅಶೋಕ್ ಸಿಂಘಾಲ್ ತಿಳಿಸಿದ್ದಾರೆ.
ಹಿಂದೂ ನಾಯಕರನ್ನು ಕೇಸರಿ ಭಯೋತ್ಪಾದಕರು ಎಂದು ಹೀಗಳೆಯುತ್ತಿರುವ ಕಾಂಗ್ರೆಸ್‌ನ ನೀತಿಯ ವಿರುದ್ಧ ಗೋವಾದಲ್ಲಿ ನಡೆದ ಮೂರು ದಿನಗಳ ಸಮಾವೇಶದಲ್ಲಿ ಗೊತ್ತುವಳಿಯೊಂದನ್ನು ಅಂಗೀಕರಿಸಲಾಗಿದೆ ಎಂದು ಈ ಸಂದರ್ಭದಲ್ಲಿ ಸಿಂಘಾಲ್ ಸುದ್ದಿಗಾರರಿಗೆ ತಿಳಿಸಿದರು.
ಸ್ವಾಮಿ ಅಸೀಮಾನಂದರಂತಹ ನಾಯಕರಿಗೆ ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟದ ಸಂಬಂಧ ಕಲ್ಪಿಸಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ನಂಬಲಸಾಧ್ಯವಾದ ಸಂಗತಿಗಳನ್ನು ಕಾಂಗ್ರೆಸ್ ಮಾತನಾಡುತ್ತಿದೆ ಎಂದು ಲೇವಡಿ ಮಾಡಿದರು.
ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟ, ಮಾಲೆಗಾಂವ್ ಸ್ಫೋಟ ಮತ್ತು ಹೈದರಾಬಾದಿನ ಮೆಕ್ಕಾ ಮಸೀದಿಯ ಸ್ಫೋಟಕ್ಕೆ ಸಂಬಂಧಿಸಿ ನಡೆಸಲಾದ ಧೀರ್ಘ ತನಿಖೆಯಲ್ಲಿ ಜೆಹಾದಿಗಳ ಕೈವಾಡವಿರುವುದು ತನಿಖಾ ವರದಿಯಿಂದ ಸ್ಪಷ್ಟವಾಗಿದೆ. ಆದರೆ ಕಾಂಗ್ರೆಸ್, ಆ ಎಲ್ಲಾ ಆರೋಪಗಳನ್ನು ಈಗ ಹಿಂದೂ ಸಂಘಟನೆಗಳ ಮೇಲೆ ಹೊರಿಸುವ ಮೂಲಕ, ಹಿಂದೂಗಳನ್ನು ದೂಷಿಸಲು ಹೊಸ ಪಿತೂರಿ ನಡೆಸುತ್ತಿದೆ ಎಂದರು.
ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟಕ್ಕೆ ಸಂಬಂಧಿಸಿ ಸ್ವಾಮಿ ಅಸೀಮಾನಂದ ಅವರು ತಪ್ಪೊಪ್ಪಿಕೊಂಡಿರುವುದು ಶುದ್ಧ ಸುಳ್ಳು ಎಂದಿರುವ ಸಿಂಘಾಲ್, ನಾಚಿಕೆಯಿಲ್ಲದ ಮಾದ್ಯಮಗಳು ಸೂಕ್ತ ಆಧಾರವಿಲ್ಲದೆ ವರದಿ ಮಾಡುತ್ತಿದೆ ಎಂದರು. ತಪ್ಪೊಪ್ಪಿಗೆ ಎಂಬುದು ಕೇವಲ ಕಟ್ಟುಕಥೆ, ಸ್ವಾಮಿ ಅಸೀಮಾನಂದರ ವಕೀಲರು ಸಾಬೀತುಪಡಿಸಿರುವ ದಾಖಲೆಯಲ್ಲಿ ಯಾವುದೇ ರೀತಿಯ ತಪ್ಪೊಪ್ಪಿಕೊಂಡಿರುವ ಉಲ್ಲೇಖವಿಲ್ಲ ಎಂದು ಹೇಳಿದರು.
ಹಿಂದೂ ಭಯೋತ್ಪಾದನೆ ಅಥವಾ ಕೇಸರಿ ಭಯೋತ್ಪಾದನೆ ಎಂಬ ಪದಪ್ರಯೋಗ ಇಡೀ ಹಿಂದೂ ಸಮುದಾಯವನ್ನು ಹೀಯಾಳಿಸಿದಂತಾಗುತ್ತದೆ. ಇಂತಹ ಪದಗಳನ್ನು ಪ್ರಯೋಗಿಸುವ ಮೂಲಕ ಹಿಂದೂಗಳನ್ನು ಭಯೋತ್ಪಾದಕರೆಂದು ಬಿಂಬಿಸಲು ಕಾಂಗ್ರೆಸ್ ಯತ್ನಿಸಿದರೆ, ಕಠಿಣ ಪರಿಣಾಮವನ್ನು ಎದುರಿಸಬೇಕಾಗಬಹುದು ಎಂದು ವಿಎಚ್‌ಪಿ ಸಭೆಯಲ್ಲಿ ಗೊತ್ತುವಳಿ ಅಂಗೀಕರಿಸಲಾಯಿತು.
ವಿಎಚ್‌ಪಿಯ ಅಂತಾರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಸದಸ್ಯರ ಒಕ್ಕೊರಲಿನಿಂದ ಮರು ಆಯ್ಕೆಯಾದ ಸಿಂಘಾಲ್, ಆರ್ಎಸ್ಎಸ್ ಮತ್ತು ವಿಎಚ್‌ಪಿಯ ಮೇಲೆ ಜನರು ಅಪಾರ ನಂಬಿಕೆ ವಿಶ್ವಾಸ ಇಟ್ಟಿದ್ದಾರೆ ಎಂದರು.