'ಸ್ಪೆಕ್ಟ್ರಮ್' ರಾಜಾ ಅವಧಿಯಲ್ಲಿ ಹಂಚಿಕೆಯಾಗಿರುವ 2ಜಿ ತರಂಗಾಂತರ ಪರವಾನಗಿಗಳನ್ನು ರದ್ದು ಮಾಡಬೇಕೆಂದು ಮನವಿ ಬಂದಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ವೋಚ್ಚ ನ್ಯಾಯಾಲಯ, ಈ ಸಂಬಂಧ ಕೇಂದ್ರ ಸರಕಾರ, ದೂರಸಂಪರ್ಕ ಇಲಾಖೆ ಮತ್ತು ದೂರವಾಣಿ ಸಂಸ್ಥೆಗಳಿಗೆ ನೋಟೀಸು ಜಾರಿ ಮಾಡಿದೆ.
2ಜಿ ಹಗರಣಕ್ಕೆ ಸಂಬಂಧಿಸಿ ಮಹಾಲೇಖಪಾಲರು (ಸಿಎಜಿ) ಸಲ್ಲಿಸಿದ್ದ ವರದಿಯನ್ನು ಆಧರಿಸಿ, ಕೇಂದ್ರ ಜಾಗೃತ ಸಮಿತಿ (ಸಿವಿಸಿ) ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಕೇಸು ದಾಖಲಿಸಲು ಸೂಚನೆ ನೀಡಿರುವ ಹೊರತಾಗಿಯೂ, ದೂರಸಂಪರ್ಕ ಸಚಿವ ಕಪಿಲ್ ಸಿಬಲ್ ಅವರು ಸಿಎಜಿ ವರದಿಯ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಕ್ಕೆ ಸುಪ್ರಿಂ ಕೋರ್ಟ್ ಇದೇ ಸಂದರ್ಭದಲ್ಲಿ ಅಚ್ಚರಿ ವ್ಯಕ್ತಪಡಿಸಿದೆ.
2ಜಿ ತರಂಗಾಂತರ ಹಂಚಿಕೆಯಲ್ಲಿ ನಿಯಮಾವಳಿ ಉಲ್ಲಂಘನೆಯಾಗಿದ್ದರೂ ಮೌನವಾಗಿ ಉಳಿದಿದ್ದ, ಎ. ರಾಜಾ ನಿರ್ಗಮನ ಮತ್ತು ಸುಪ್ರೀಂ ಕೋರ್ಟ್ ಪ್ರಕರಣದ ವಿಚಾರಣೆ ಆರಂಭಿಸಿದ ನಂತರವಷ್ಟೇ ಪರವಾನಗಿ ರದ್ದಿಗೆ ಶಿಫಾರಸು ಮಾಡಿದ್ದ ಟ್ರಾಯ್ (ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ) ಕೂಡ ಈ ಪ್ರಕರಣದಲ್ಲಿ ಒಂದು ವಾದಿ ಎಂದು ನ್ಯಾಯಾಲಯ ಪರಿಗಣಿಸಿದೆ.
ಕೇಂದ್ರ, ದೂರಸಂಪರ್ಕ ಇಲಾಖೆ ಸೇರಿದಂತೆ ಎಟಿಸ್ಟಾಟ್, ವೊಡಾಫೋನ್, ಯುನಿನಾರ್, ಲೂಪ್ ಟೆಲಿಕಾಂ, ವಿಡಿಯೊಕಾನ್, ಎಸ್.ಟೆಲ್, ಅಲೈಯನ್ಸ್ ಇನ್ಫ್ರಾ, ಐಡಿಯಾ ಸೆಲ್ಯುಲಾರ್, ಟಾಟಾ ಟೆಲಿ ಸರ್ವಿಸಸ್, ಸಿಸ್ಟೆಮಾ ಶ್ಯಾಂ ಟೆಲಿ ಸರ್ವಿಸಸ್ ಮತ್ತು ಡಿಶ್‌ನೆಟ್ ವೈರ್‌ಲೆಸ್ ಮುಂತಾದ ಕಂಪನಿಗಳಿಗೂ ಉತ್ತರಿಸುವಂತೆ ಕೋರ್ಟ್ ನೋಟೀಸ್ ನೀಡಿದೆ.
ಎ. ರಾಜಾ ಅಧಿಕಾರಾವಧಿಯಲ್ಲಿ ನೀಡಲಾಗಿದ್ದ 122 ಪರವಾನಗಿಗಳನ್ನು ರದ್ದು ಮಾಡಬೇಕೆಂದು ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣ್ಯನ್ ಸ್ವಾಮಿ ಮತ್ತು ವಕೀಲ ಪ್ರಶಾಂತ್ ಭೂಷನ್ ಅವರು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು.
2ಜಿ ಹಗರಣದಿಂದ ಸರಕಾರದ ಬೊಕ್ಕಸಕ್ಕೆ 1.76 ಲಕ್ಷ ರೂ. ನಷ್ಟವಾಗಿದೆ ಎಂದು ಸಿಎಜಿ ಸಲ್ಲಿಸಿದ್ದ ವರದಿಯನ್ನು ಕಪಿಲ್ ಸಿಬಲ್ ಕೆಲ ದಿನಗಳ ಹಿಂದಷ್ಟೇ ಪ್ರಶ್ನಿಸಿದ್ದರು.