ದೇಶದಲ್ಲಿ ನಡೆದ ಹಲವು ಸ್ಫೋಟಗಳಲ್ಲಿ ಭಾಗಿಯಾಗಿದ್ದು ಯಾರೆಂದು ಈಗ ಬಹಿರಂಗವಾಗಿದೆ. ಹಾಗಾಗಿ ಈ ಸ್ಫೋಟಗಳ ಹೆಸರಿನಲ್ಲಿ ಜೈಲು ಸೇರಿರುವ ಮುಸ್ಲಿಮರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಮುಂಬೈ ಸೇರಿದಂತೆ ಹಲವೆಡೆ ಮುಸ್ಲಿಂ ನಾಗರಿಕರು ಮತ್ತು ರಾಜಕೀಯ ನಾಯಕರು ಒತ್ತಾಯಿಸಿದ್ದಾರೆ.
2007ರ ಫೆಬ್ರವರಿ 18ರಂದು ನಡೆದಿದ್ದ ಸಂಜೋತಾ ಎಕ್ಸ್‌ಪ್ರೆಸ್ ರೈಲು ಬಾಂಬ್ ಸ್ಫೋಟ, ಹೈದರಾಬಾದ್‌ನ ಅಜ್ಮೀರ್ ಸ್ಫೋಟ, ಮೆಕ್ಕಾ ಮಸೀದಿ ಸ್ಫೋಟಗಳನ್ನು ನಡೆಸಿದ್ದು ಹಿಂದೂ ತೀವ್ರವಾದಿಗಳು. ಇದರಲ್ಲಿ ಆರೆಸ್ಸೆಸ್ ಕಾರ್ಯಕರ್ತರು ಮತ್ತು ನಾಯಕರು ಪಾಲ್ಗೊಂಡಿದ್ದಾರೆ ಎಂದು ಸಿಬಿಐ ಮ್ಯಾಜಿಸ್ಟ್ರೇಟ್ ಮುಂದೆ ಆರೆಸ್ಸೆಸ್ ಸಂಬಂಧ ಹೊಂದಿರುವ ಸ್ವಾಮಿ ಅಸೀಮಾನಂದ್ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ ಎಂದು ಎರಡು ದಿನಗಳ ಹಿಂದಷ್ಟೇ ವರದಿಯಾಗಿತ್ತು.
ಈ ಸಂಬಂಧ ಮಹಾರಾಷ್ಟ್ರ ಗೃಹಸಚಿವ ಆರ್.ಆರ್. ಪಾಟೀಲ್ ಅವರನ್ನು ಭೇಟಿ ಮಾಡಿರುವ ಮುಸ್ಲಿಮರ ನಿಯೋಗವೊಂದು, ಸಂಜೋತಾ ಎಕ್ಸ್‌ಪ್ರೆಸ್ ಮತ್ತು ಮಾಲೆಗಾಂವ್ ಸ್ಫೋಟ ಸಂಬಂಧ ಸೆರೆಯಾಗಿರುವ 10ಕ್ಕೂ ಹೆಚ್ಚು ಮುಸ್ಲಿಂ ಯುವಕರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದೆ.
ಮಾಲೆಗಾಂವ್ ಸ್ಫೋಟದ ಆರೋಪದ ಮೇಲೆ ನಮ್ಮಲ್ಲಿಂದ 14-15 ಮುಸ್ಲಿಂ ಹುಡುಗರನ್ನು ಪೊಲೀಸರು ಬಂಧಿಸಿದ್ದರು. ಆದರೆ ಇದು ಆರೆಸ್ಸೆಸ್ ಕೃತ್ಯ ಎಂದು ಆಸೀಮಾನಂದ್ ತಪ್ಪೊಪ್ಪಿಗೆ ನೀಡಿದ್ದಾರೆ. ಹಾಗಾಗಿ ನಮ್ಮ ಹುಡುಗರನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ನಿಯೋಗದ ನೇತೃತ್ವ ವಹಿಸಿದ್ದ ಮಾಜಿ ಶಾಸಕ ಸೊಹೈಲ್ ಲೋಖಂಡ್‌ವಾಲಾ ಮನವಿ ಮಾಡಿದರು.
ಮೂಲಭೂತವಾದಿ ಸಂಘಟನೆ ಮತ್ತು ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ ಎಂಬ ಕಾರಣ ಕೊಟ್ಟು ಸಿಮಿಯನ್ನು ನಿಷೇಧಿಸಿದಂತೆ ಆರೆಸ್ಸೆಸ್ ಮೇಲೆ ಕೂಡ ನಿಷೇಧ ಹೇರಲಾಗುತ್ತದೆಯೇ ಎಂದೂ ಈ ನಿಯೋಗ ಸರಕಾರವನ್ನು ಪ್ರಶ್ನಿಸಿದೆ.
ಮಹಾರಾಷ್ಟ್ರ ಮಾಜಿ ಕಾರ್ಮಿಕ ಸಚಿವ ಹಾಗೂ ಎನ್‌ಸಿಪಿ ಶಾಸಕ ನವಾಬ್ ಮಲಿಕ್ ಕೂಡ ಇದಕ್ಕೆ ಬೆಂಬಲ ಸೂಚಿಸಿದ್ದಾರೆ. ಜೈಲಿನಲ್ಲಿ ಕೊಳೆಯುತ್ತಿರುವ ಆರೋಪಿಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ.
ಇದುವರೆಗೆ ನಡೆದಿರುವ ತಪ್ಪುಗಳನ್ನು ವಿವೇಚನೆಯಿಂದ ತಿದ್ದಿಕೊಳ್ಳಬೇಕು ಮತ್ತು ಅಮಾಯಕರನ್ನು ಬಿಡುಗಡೆ ಮಾಡಿ, ಅವರಿಗೆ ಪುನರ್ಜೀವನ ಕಲ್ಪಿಸಬೇಕು ಎಂದು ಮಲಿಕ್ ಮನವಿ ಮಾಡಿದ್ದಾರೆ.
ಬಿಡುಗಡೆ ಮಾಡಿ, ಇಲ್ಲಾಂದ್ರೆ... ಹೀಗೆಂದು ಸರಕಾರಕ್ಕೆ ಬೆದರಿಕೆ ಹಾಕಿರುವುದು ಸಮಾಜವಾದಿ ಪಕ್ಷದ ನಾಯಕ ಅಬೂ ಆಸೀಮ್ ಅಜ್ಮಿ. ಮಾಲೆಗಾಂವ್, ಸಂಜೋತಾ ಎಕ್ಸ್‌ಪ್ರೆಸ್, ಅಜ್ಮೀರ್ ಮತ್ತು ಮೆಕ್ಕಾ ಮಸೀದಿ ಬಾಂಬ್ ಸ್ಫೋಟಗಳ ಸಂಬಂಧ ಬಂಧಿಸಿರುವ ಮುಸ್ಲಿಮರನ್ನು ತಕ್ಷಣವೇ ಬಿಡುಗಡೆ ಮಾಡಬೇಕು. ನಾವು ನಿಮಗೆ ಎರಡು ವಾರಗಳ ಕಾಲಾವಕಾಶ ನೀಡುತ್ತೇವೆ. ತಪ್ಪಿದಲ್ಲಿ ಜನವರಿ 20ರಂದು ಜೈಲ್ ಭರೋ ಮಾಡುತ್ತೇವೆ ಎಂದು ಹೇಳಿದ್ದಾರೆ.
ಈ ಪ್ರಕರಣಗಳಲ್ಲಿ ಮುಸ್ಲಿಮರನ್ನು ಸುಳ್ಳು ಕೇಸು ಹಾಕಿ ಪೊಲೀಸರು ಸಿಲುಕಿಸಿದ್ದರು. ನಿಜವಾಗಿ ಯಾರು ತಪ್ಪಿತಸ್ಥರು ಎನ್ನುವುದು ಈಗ ಹೊರಗೆ ಬಂದಿದೆ. ಹಾಗಾಗಿ ಅವರನ್ನು ಬಿಡುಗಡೆ ಮಾಡಬೇಕು. ಈ ಸಂಬಂಧ ನಾನು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್, ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾನ್ ಅವರಿಗೂ ಪತ್ರ ಬರೆದಿದ್ದೇನೆ ಎಂದು ಅಜ್ಮಿ ತಿಳಿಸಿದರು.