ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರೈಲಿನಲ್ಲಿ ಹುಟ್ಟಿದ ಮಗುವಿಗೆ ಮಮತಾ ಬ್ಯಾನರ್ಜಿ ಹೆಸರು! (Mamata Banerjee | Railway minister | Barauni Express | Kurukshetra)
ರೈಲಿನಲ್ಲಿ ಹುಟ್ಟಿದ್ದಕ್ಕೆ ರೈಲ್ವೆ ಸಚಿವೆಯ ಹೆಸರೇ? ಇದೇನಪ್ಪ ವಿಚಿತ್ರ ಅಂತೀರಾ? ಹೌದು, ಅದೇ ಕಾರಣಕ್ಕಾಗಿ ಮಮತಾ ಬ್ಯಾನರ್ಜಿ ಎಂದು ಹೆಸರಿಡಲಾಗಿದ. ಇದು ನಡೆದಿರುವುದು ಹರ್ಯಾಣದಲ್ಲಿ.
ಕುರುಕ್ಷೇತ್ರ ಮತ್ತು ಕರ್ನಲ್ ನಿಲ್ದಾಣಗಳ ನಡುವೆ ಸಾಗುತ್ತಿದ್ದ ಬರೂನಿ ಎಕ್ಸ್‌ಪ್ರೆಸ್ ರೈಲು ಗಾಡಿಯ ಎಸ್-9 ಬೋಗಿಯಲ್ಲಿ ಶನಿವಾರ ಮಹಿಳೆಯೊಬ್ಬರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಯಾವುದೇ ವೈದ್ಯಕೀಯ ಸಿಬ್ಬಂದಿ ಇಲ್ಲದೇ ಇದ್ದರೂ, ರೈಲಿನಲ್ಲಿದ್ದ ಮಹಿಳೆಯರೇ ಮುಂದಾಗಿ ಸುಖ ಪ್ರಸವ ಮಾಡಿಸಿದ್ದರು.
ಆ ಮಗುವಿಗೆ ಈಗ ಮಮತಾ ಬ್ಯಾನರ್ಜಿ ಎಂದು ನಾಮಕರಣ ಮಾಡಲಾಗಿದೆ.
'ಚಲಿಸುತ್ತಿರುವ ರೈಲಿನಲ್ಲಿ ಮಗು ಹುಟ್ಟಿದುದರಿಂದ ಆಕೆಗೆ ನಾವು ಮಮತಾ ಬ್ಯಾನರ್ಜಿ ಎಂದು ನಾಮಕರಣ ಮಾಡಲು ನಿರ್ಧರಿಸಿದ್ದೇವೆ. ಆಕೆಯ ಹುಟ್ಟಿನಿಂದ ನಿಜಕ್ಕೂ ನಮಗೆ ಅಪಾರ ಸಂತಸವಾಗಿದೆ' ಎಂದು ಮಗುವಿನ ತಾಯಿ ಆರತಿಯ ಮಾವ ದಯಾನಂದ್ ಹೇಳಿಕೊಂಡಿದ್ದಾರೆ.
ಬಿಹಾರ ನಿವಾಸಿಯಾಗಿರುವ ಆರತಿ, ಇಬ್ಬರು ಮಕ್ಕಳು ಮತ್ತು ತನ್ನ ಮಾವ ದಯಾನಂದ್ ಜತೆ ಪಂಜಾಬ್‌ನ ಜಲಂಧರ್‌ನಲ್ಲಿ ರೈಲು ಹತ್ತಿದ್ದಳು.
ರೈಲ್ವೆ ಪೊಲೀಸ್ ಅಧಿಕಾರಿಗಳ ಪ್ರಕಾರ, ಚಂಡೀಗಢದಿಂದ 110 ಕಿಲೋ ಮೀಟರ್ ದೂರದಲ್ಲಿರುವ ಕುರುಕ್ಷೇತ್ರ ನಗರದಿಂದ ರೈಲು ಹೋಗುವ ಹೊತ್ತಿನಲ್ಲಿ ಆರತಿಗೆ ಪ್ರಸವ ವೇದನೆ ಆರಂಭವಾಗಿತ್ತು. ಮುಂದಿನ ನಿಲ್ದಾಣದಲ್ಲಿ ಆಂಬುಲೆನ್ಸ್ ಸಿದ್ಧಪಡಿಸುವಂತೆ ಅವರು ಸೂಚಿಸಿದ್ದರು.
ಆದರೆ ಆ ನಿಲ್ದಾಣ ತಲುಪುವ ಮೊದಲೇ ಆರತಿ ಸಹ ಪ್ರಯಾಣಿಕರ ಸಹಕಾರದೊಂದಿಗೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ನಂತರ ಅವರನ್ನು ಕರ್ನಲ್ ನಿಲ್ದಾಣದಲ್ಲಿ ಇಳಿಸಿ, ಆಂಬುಲೆನ್ಸ್‌ನಲ್ಲಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯಕೀಯ ಸಹಾಯಕಿ ಕಿರಣ್ ಬಾಲಾ ತಿಳಿಸಿದ್ದಾರೆ.
ಮಮತಾ ಬ್ಯಾನರ್ಜಿಯಾಗಲಿರುವ ಮಗು ಆರತಿಗೆ ಮೂರನೆ ಮಗಳಂತೆ. ಈ ಸುದ್ದಿ ಮಮತಾ ಬ್ಯಾನರ್ಜಿ ಕಿವಿಗೆ ಬಿದ್ದಲ್ಲಿ ಆರ್ಥಿಕ ಸಹಕಾರ ಅಥವಾ ಇನ್ನಿತರ ಯಾವುದೇ ಸಹಾಯಕ್ಕೆ ಮುಂದಾಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ.