ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕರ್ನಾಟಕದಲ್ಲಿ 12,000 ಆತ್ಮಹತ್ಯೆ, ದೇಶದಲ್ಲೇ 5ನೇ ಸ್ಥಾನ (NCRB | suicide spots | Karnataka | India)
Bookmark and Share Feedback Print
 
ಭಾರತ ಗಮನಾರ್ಹವೆನ್ನುವ ಪ್ರಗತಿ ದರವನ್ನು ದಾಖಲಿಸುತ್ತಿರುವುದು ಒಂದು ಕಡೆಯಾದರೆ, ಮತ್ತೊಂದು ಕಡೆ ಬಡಜೀವಗಳು ಹಲವಾರು ಕಾರಣಗಳನ್ನು ಮುಂದೊಡ್ಡಿ ಆತ್ಮಹತ್ಯೆಗಳಿಗೆ ಶರಣಾಗುತ್ತಿವೆ. ಈ ರೀತಿಯಾಗಿ ನಮ್ಮ ದೇಶದಲ್ಲಿ 2009ರಲ್ಲಿ ಪ್ರಾಣ ಕಳೆದುಕೊಂಡವರ ಒಟ್ಟು ಸಂಖ್ಯೆ ಬರೋಬ್ಬರಿ 1,27,151.

ಇದನ್ನು ಪ್ರಕಟಿಸಿರುವುದು ರಾಷ್ಟ್ರೀಯ ಅಪರಾಧ ದಾಖಲೆಗಳ ಇಲಾಖೆ. ಅದರ ಪ್ರಕಾರ 2009ರ ವರ್ಷದಲ್ಲಿ ಈ ಹಿಂದಿನ ವರ್ಷಕ್ಕಿಂತ ಹೆಚ್ಚಿನ ಆತ್ಮಹತ್ಯೆಗಳು ದಾಖಲಾಗಿವೆ. 2005ರಲ್ಲಿ 1,13,914 ಮಂದಿ, 2006ರಲ್ಲಿ 1,18,112 ಮಂದಿ, 2007ರಲ್ಲಿ 1,22,637 ಮಂದಿ ಹಾಗೂ 2008ರಲ್ಲಿ 1,25,017 ಮಂದಿ ನಾಗರಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕರ್ನಾಟಕಕ್ಕೆ ಐದನೇ ಸ್ಥಾನ...
ಇಡೀ ದೇಶದಲ್ಲೇ ಅತೀ ಹೆಚ್ಚು ಆತ್ಮಹತ್ಯೆಗೆ ಶರಣಾದವರ ರಾಜ್ಯ ಎಂಬ ಕುಖ್ಯಾತಿಗೆ ಪಾತ್ರವಾಗಿರುವುದು ಪಶ್ಚಿಮ ಬಂಗಾಲ. ಇಲ್ಲಿ 14,648 ಮಂದಿ (ಶೇ.11.5) 2009ರ ವರ್ಷದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಎರಡನೇ ಸ್ಥಾನದಲ್ಲಿ ಆಂಧ್ರಪ್ರದೇಶ 14,500 (ಶೇ.11.4), ಮೂರನೇ ಸ್ಥಾನದಲ್ಲಿ ತಮಿಳುನಾಡು 14,424 (ಶೇ.11.3), ನಾಲ್ಕನೇ ಸ್ಥಾನದಲ್ಲಿ ಮಹಾರಾಷ್ಟ್ರ 14,300 (ಶೇ.11.2) ಹಾಗೂ ಐದನೇ ಸ್ಥಾನದಲ್ಲಿ ಕರ್ನಾಟಕ 12,195 (ಶೇ.9.6) ಆತ್ಮಹತ್ಯೆಗಳನ್ನು ದಾಖಲಿಸಿದೆ.

ಉಳಿದಂತೆ ಕೇರಳ ಶೇ.6.9, ಮಧ್ಯಪ್ರದೇಶ ಶೇ.7.2, ಗುಜರಾತ್ ಶೇ.4.8, ರಾಜಸ್ತಾನ ಶೇ.4.0, ಛತ್ತೀಸ್‌ಗಢ ಶೇ.4.6 ಹಾಗೂ ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಶೇ.17.8ರ ಪ್ರಾಣ ಹಾನಿಯನ್ನು ಆತ್ಮಹತ್ಯೆಯ ರೂಪದಲ್ಲಿ ಕಂಡಿವೆ.

ಕರ್ನಾಟಕವು 2007ರಲ್ಲಿ ಶೇ.10ರ (ದೇಶದ ಆತ್ಮಹತ್ಯೆಯಲ್ಲಿ ಪಾಲು) ಆತ್ಮಹತ್ಯೆಯನ್ನು ಕಂಡಿತ್ತು. ಅದು 2008ರಲ್ಲಿ ಶೇ.9.8ಕ್ಕೆ ಹಾಗೂ 2009ರ ಹೊತ್ತಿಗೆ ಶೇ.9.6ಕ್ಕೆ ಕುಸಿದಿದೆ.

ಆತ್ಮಹತ್ಯೆಯ ಹಿಂದಿನ ಕಾರಣಗಳು...
ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವಂತಹ ಕೃತ್ಯಕ್ಕೆ ಯಾಕೆ ಬರುತ್ತಾನೆ ಎನ್ನುವುದನ್ನು ಅಂಕಿ-ಅಂಶಗಳಲ್ಲೇ ನೋಡುವುದಾದರೆ ಇದರಲ್ಲಿ ಅತಿ ಹೆಚ್ಚಿನ ಪಾಲು ಕೌಟುಂಬಿಕ ಸಮಸ್ಯೆಗಳು.

2009ರಲ್ಲಿ ಕೌಟುಂಬಿಕ ಸಮಸ್ಯೆಗಳಿಂದಾಗಿ ಶೇ.23.7 ಮಂದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅನಾರೋಗ್ಯವೆಂದು ಶೇ.21, ನಿಗೂಢ ಆತ್ಮಹತ್ಯೆಯೆಂದು ಶೇ.16.8, ಪ್ರೇಮ ವೈಫಲ್ಯವೆಂದು ಶೇ.2.9 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಡತನ, ವರದಕ್ಷಿಣೆ ವಿವಾದ ಮತ್ತು ಮಾದಕ ದ್ರವ್ಯದ ಕಾರಣಗಳಿಂದಾಗಿ ತಲಾ ಶೇ.2.3ರಂತೆ ಆತ್ಮಹತ್ಯೆಗಳು ದಾಖಲಾಗಿವೆ. ದಿವಾಳಿಯಾಗಿರುವುದು ಅಥವಾ ದಿಢೀರ್ ಆರ್ಥಿಕ ಕುಸಿತದಿಂದ ಶೇ.2.5 ಹಾಗೂ ಇತರ ಕಾರಣಗಳಿಗಾಗಿ ಶೇ.26.2 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ವರದಿಯ ಪ್ರಮುಖ ಅಂಶಗಳು...
* ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶದಲ್ಲಿ ಆತ್ಮಹತ್ಯೆ ಪ್ರಮಾಣ ಶೇ.3.3 ಮಾತ್ರ.
* ಪಶ್ಚಿಮ ಬಂಗಾಲ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ಕರ್ನಾಟಕಗಳ ಒಟ್ಟು ಆತ್ಮಹತ್ಯೆ ಪಾಲು ಶೇ.55.
* ಸ್ವ ಉದ್ಯೋಗಿಗಳು ಆತ್ಮಹತ್ಯೆ ಮಾಡಿಕೊಳ್ಳುವುದು ಹೆಚ್ಚು. ದೇಶದ ಒಟ್ಟು ಆತ್ಮಹತ್ಯೆಯಲ್ಲಿ ಇವರ ಪ್ರಮಾಣ ಶೇ.39.8. ನಂತರದ ಸ್ಥಾನ (ಶೇ.14.5) ಉದ್ಯೋಗದಲ್ಲಿ ಇರುವವರದ್ದು. ಮೂರನೇ ಸ್ಥಾನದಲ್ಲಿ (ಶೇ.19.7) ಗೃಹಿಣಿಯರಿದ್ದಾರೆ.
* ಆತ್ಮಹತ್ಯೆ ಮಾಡಿಕೊಂಡವರ ಶೈಕ್ಷಣಿಕ ಮಟ್ಟವನ್ನು ನೋಡಿದಾಗ, ಈ ರೀತಿಯಾಗಿ ಪ್ರಾಣ ಕಳೆದುಕೊಂಡವರಲ್ಲಿ ಹೆಚ್ಚಿನವರು (ಶೇ.23.7) ಹಿರಿಯ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದವರು. ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದವರು ಶೇ.23.4, ಅನಕ್ಷರಸ್ಥರು ಶೇ.21.4, ಪದವಿಪೂರ್ವ ಶೇ.18.7, ಪ್ರೌಢ ಶಿಕ್ಷಣ ಪಡೆದವರು ಶೇ.8.8, ಪದವೀಧರರು ಶೇ.2.3, ಡಿಪ್ಲೋಮಾ ಓದಿದವರು ಶೇ.0.9 ಹಾಗೂ ಶೇ.0.8 ಸ್ನಾತಕೋತ್ತರ ಪದವೀಧರರು.
* ಒಟ್ಟಾರೆ ಆತ್ಮಹತ್ಯೆಯಲ್ಲಿ ವಿಷ ಸೇವಿಸಿದವರ (14,850) ಪ್ರಮಾಣವೇ ಹೆಚ್ಚು. ನಂತರದ ಸ್ಥಾನ (13,612) ನೇಣು ಹಾಕಿಕೊಂಡಿರುವವರದ್ದು. ಮೂರನೇ ಸ್ಥಾನದಲ್ಲಿ ಬೆಂಕಿ ಹಚ್ಚಿಕೊಂಡು ಸತ್ತವರು 4,126.
ಸಂಬಂಧಿತ ಮಾಹಿತಿ ಹುಡುಕಿ