ಇಂಡಿಯನ್ ಮುಜಾಹಿದೀನ್ ಸಂಸ್ಥಾಪಕ ಸದಸ್ಯ, ಕರ್ನಾಟಕ ಮೂಲದ ಕುಖ್ಯಾತ ಭಯೋತ್ಪಾದಕ ರಿಯಾಜ್ ಭಟ್ಕಳ್‌ನನ್ನು ಪಾಕಿಸ್ತಾನದ ಕರಾಚಿಯಲ್ಲಿ ಮುಗಿಸಲಾಗಿದೆಯೇ? ಭೂಗತ ಪಾತಕಿ ಛೋಟಾ ರಾಜನ್ ಪ್ರಕಾರ ಹೌದು, ರಾಜನ್ ಸಹಚರರೇ ರಿಯಾಜ್‌ನನ್ನು ಹತ್ಯೆ ಮಾಡಿದ್ದಾರೆ.
ರಿಯಾಜ್ ಭಟ್ಕಳ್ ಮತ್ತು ಆತನ ಸಹಚರ ನಿಸಾರ್ ಅನ್ವರ್ ಎಂಬಾತನನ್ನು ಕರಾಚಿಯಲ್ಲಿನ ಗುಲ್ಶನ್ ಇಕ್ಬಾಲ್ ಪ್ರದೇಶದ ಕರೀನಾ ಮಾರ್ಕೆಟ್ ಎಂಬಲ್ಲಿ ತನ್ನ ಸಹಚರರು ಕೊಂದು ಹಾಕಿದ್ದಾರೆ ಎಂದು ಛೋಟಾ ರಾಜನ್ ಬಹಿರಂಗಪಡಿಸಿದ್ದಾನೆ. ಇದು ಎಷ್ಟು ಸತ್ಯ ಎಂಬುದನ್ನು ಕೇಂದ್ರ ಗುಪ್ತಚರ ಇಲಾಖೆ ಪರಿಶೀಲನೆ ನಡೆಸುತ್ತಿದೆ.
ರಿಯಾಜ್‌ನನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಕರಾಚಿಯ ಜಿಯಾವುದ್ದೀನ್ ಆಸ್ಪತ್ರೆಯ 222ನೇ ವಾರ್ಡಿನ 18ನೇ ನಂಬರಿನ ಬೆಡ್ಡಿನಲ್ಲಿ ಆತ ಕೊನೆಯುಸಿರೆಳೆದಿದ್ದಾನೆ. ಸತ್ತವನು ರಿಯಾಜ್ ಎಂಬುದನ್ನು ಗುರುತಿಸಿ ಖಚಿತಪಡಿಸಿರುವುದು ಅಬ್ದುಲ್ ಅಜೀಜ್ ಬಿದಾನಿ ಎಂಬಾತ ಎಂದೂ ಮುಂಬೈ ಮೂಲದ ಭೂಗತ ಪಾತಕಿ ರಾಜನ್ ಸ್ಪಷ್ಟಪಡಿಸಿದ್ದಾನೆ.
ಗುಪ್ತಚರ ಇಲಾಖೆ, ಮುಂಬೈ ಉಗ್ರ ನಿಗ್ರಹ ದಳ, ಕರ್ನಾಟಕ ಪೊಲೀಸರು ಮತ್ತು ಭಟ್ಕಳದಲ್ಲಿರುವ ರಿಯಾಜ್ ಸಂಬಂಧಿಕರು ಈ ಸುದ್ದಿಯ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ರಾಜನ್ ಹೇಳಿರುವುದು ಇನ್ನೂ ಖಚಿತವಾಗಿಲ್ಲ ಎಂದಷ್ಟೇ ತಿಳಿಸಿದ್ದಾರೆ.
ಯಾರೀತ ರಿಯಾಜ್? ಈ ರಿಯಾಜ್ ಭಟ್ಕಳ್ ನೈಜ ಹೆಸರು ರಿಯಾಜ್ ಶಾಬಂದ್ರಿ. ಆದರೆ ಭಾರತದಲ್ಲಿ ಕಾರ್ಯಾಚರಣೆ ನಡೆಸುವಾಗ ಶಾರೂಖ್ ಖಾನ್, ರೋಷನ್ ಖಾನ್, ಅಜೀಜ್ ಆಲಿಯಾಸ್ ಅಹ್ಮೆದಿ ಭಾಯ್ ಎಂಬ ಹೆಸರುಗಳನ್ನು ಬಳಸುತ್ತಿದ್ದ. ಪಾಕಿಸ್ತಾನದಲ್ಲಿ ಈತ ಇಟ್ಟುಕೊಂಡಿದ್ದ ಹೆಸರು ದಿಲ್ವಾರ್ ಇಕ್ಬಾಲ್.
ಈತ ಮೂಲತಃ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯವನು. ಇಂಡಿಯನ್ ಮುಜಾಹಿದೀನ್ ಇನ್ನೊಬ್ಬ ಸಂಸ್ಥಾಪಕ ಸದಸ್ಯ ಇಕ್ಬಾಲ್ ಭಟ್ಕಳ್ ಆಲಿಯಾಸ್ ಮೊಹಮ್ಮದ್ ಭಾಯ್ ಈತನ ಸಹೋದರ ಸಂಬಂಧಿ. ರಿಯಾಜ್ ಮತ್ತು ಇಕ್ಬಾಲ್, ಭಟ್ಕಳ ಸಹೋದರರೆಂದೇ ಕುಖ್ಯಾತರಾದವರು.
ಹುಟ್ಟಿದ್ದು ಭಟ್ಕಳದಲ್ಲಾದರೂ, ಇವರಿಬ್ಬರೂ ಬೆಳೆದದ್ದು ಮುಂಬೈಯ ಕುರ್ಲಾದಲ್ಲಿ. ಅವರು ಮುಂಬೈಯಲ್ಲಿ ಚರ್ಮದ ವ್ಯಾಪಾರ ನಡೆಸುತ್ತಿದ್ದರು. ನಿಧಾನವಾಗಿ ಇವರು ಇಸ್ಲಾಮಿಕ್ ಭಯೋತ್ಪಾದನೆಯತ್ತ ಆಕರ್ಷಿತರಾಗಿದ್ದರು.
ಕುರ್ಲಾದಲ್ಲಿ ನಿಷೇಧಿತ ಸಂಘಟನೆ ಸಿಮಿಯ ಕಚೇರಿ ಸಮೀಪವೇ ಉಳಿದುಕೊಂಡಿದ್ದ ಈ ಭಟ್ಕಳ ಸಹೋದರರು, ನಂತರದ ದಿನಗಳಲ್ಲಿ ಸಿಮಿ ಸದಸ್ಯರಾಗಿದ್ದರು. ಅಲ್ಲದೆ 2001ರಲ್ಲಿ ಮಹಾರಾಷ್ಟ್ರ ಸರಕಾರವು ಸಂಘಟನೆಯನ್ನು ನಿಷೇಧಿಸುವವರೆಗೂ ಕಚೇರಿಯನ್ನು ನಡೆಸುವಷ್ಟರ ಮಟ್ಟಿಗೆ ಬೆಳೆದಿದ್ದರು.
ಸಿಮಿ ನಿಷೇಧಕ್ಕೊಳಗಾದ ನಂತರ ಅವರು ಇತರರ ಜತೆ ಸೇರಿ ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆಯನ್ನು ಹುಟ್ಟು ಹಾಕಿದ್ದರು. ನಂತರದ ದಿನಗಳಲ್ಲಿ ಇದೇ ಹೆಸರಿನಲ್ಲಿ ದೇಶದಾದ್ಯಂತ ದುಷ್ಕೃತ್ಯಗಳನ್ನು ನಡೆಸುತ್ತಾ ಬಂದ ಭಟ್ಕಳ ಸಹೋದರರು, ಇತರ ಭಯೋತ್ಪಾದಕ ಸಂಘಟನೆಗಳಿಗೂ ಸಹಕಾರ ನೀಡುತ್ತಾ ಬಂದವರು.
ಇಕ್ಬಾಲ್ ಭಟ್ಕಳ್ ಮತ್ತು ರಿಯಾಜ್ ಭಟ್ಕಳ್ ಐದು ವರ್ಷಗಳ ಹಿಂದೆಯೇ ಪಾಕಿಸ್ತಾನಕ್ಕೆ ಪರಾರಿಯಾಗಿದ್ದರು.
ಈ ಭಟ್ಕಳ ಸಹೋದರರು ದೇಶದಾದ್ಯಂತ ಹಲವು ಉಗ್ರ ಕೃತ್ಯಗಳನ್ನು ನಡೆಸಿದ್ದಾರೆ. ಅವುಗಳಲ್ಲಿ ಪ್ರಮುಖವಾದುವು ಹೈದರಾಬಾದ್, ವಾರಣಾಸಿ, ಜೈಪುರ, ಅಹಮದಾಬಾದ್, ಪುಣೆ ಮತ್ತು ದೆಹಲಿ ಸ್ಫೋಟಗಳು.