ದೇಶಭಕ್ತರನ್ನು ದೇಶಕ್ಕೆ ಅಪಾಯಕಾರಿಗಳು ಎಂದು ಬಿಂಬಿಸಲಾಗುತ್ತಿದೆ. ಸಂಸತ್ ದಾಳಿಯಲ್ಲಿ ತಪ್ಪಿತಸ್ಥರು ಎಂದು ತೀರ್ಪು ಪಡೆದುಕೊಂಡವರು ರಕ್ಷಣೆ ಪಡೆಯುತ್ತಿದ್ದಾರೆ. ಸಂಘ ಪರಿವಾರದ ಗೌರವವನ್ನು ಮಣ್ಣುಪಾಲು ಮಾಡುವ ಯಾವುದೇ ಅವಕಾಶವನ್ನು ಕಾಂಗ್ರೆಸ್ ತಪ್ಪಿಸಿಕೊಳ್ಳುತ್ತಿಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಆರೋಪಿಸಿದರು.
ದೇಶದಲ್ಲಿ ನಡೆದ ಮಹತ್ವದ ಭಯೋತ್ಪಾದನಾ ಪ್ರಕರಣಗಳನ್ನು ನಡೆಸಿದ್ದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ನಾಯಕರು ಎಂದು ಬಿಂಬಿಸಲಾಗುತ್ತಿರುವುದರ ಹಿಂದಿನ ಉದ್ದೇಶ ಕೇವಲ ಮತಬ್ಯಾಂಕ್ ರಾಜಕಾರಣ. ತನಿಖೆಗಳನ್ನು ತಿರುಚಲಾಗುತ್ತಿದೆ. ತಮಗೆ ಬೇಕಾದಂತೆ ಮಾಡಲಾಗುತ್ತಿದೆ ಎಂದು ಸಂಘ ಪರಿವಾರವನ್ನು ಬಿಜೆಪಿ ಸಮರ್ಥಿಸಿಕೊಂಡಿದೆ.
ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟ ವಿದೇಶಿಗರ ಕೈವಾಡದೊಂದಿಗೆ ನಡೆದಿತ್ತು ಎಂದು ಹೇಳಲಾಗುತ್ತಿತ್ತು. ಇದನ್ನು ಅಮೆರಿಕಾವೂ ಹೇಳಿತ್ತು. ಈಗ ಇನ್ನೊಂದು ಬಗೆಯ ಹೇಳಿಕೆಗಳನ್ನು ನೀಡಲಾಗುತ್ತಿದೆ. ಎಲ್ಲವೂ ಮತ ಬ್ಯಾಂಕ್ ರಾಜಕಾರಣ ಎಂದು ಗಡ್ಕರಿ ಟೀಕಿಸಿದರು.
'ಆರೆಸ್ಸೆಸ್‌ನ ರಹಸ್ಯಗಳು: ಸಂಘದ ವಿಶದೀಕರಣ' ಎಂಬ ಪುಸ್ತಕವನ್ನು ನವದೆಹಲಿಯಲ್ಲಿ ಬಿಡುಗಡೆ ಮಾಡಿ ಮಾತನಾಡುತ್ತಿದ್ದ ಅವರು, ಮುಂಬೈ ಎಟಿಎಸ್ ಮಾಜಿ ಮುಖ್ಯಸ್ಥ ದಿವಂಗತ ಹೇಮಂತ್ ಕರ್ಕರೆಯವರ ಪಾತ್ರವನ್ನೂ ವಿಶ್ಲೇಷಿಸಿದರು.
'ಆರೆಸ್ಸೆಸ್‌ನ ಪ್ರಸಕ್ತ ಮುಖ್ಯಸ್ಥ ಮೋಹನ್ ಭಾಗ್ವತ್ ಮತ್ತು ಇಂದ್ರೇಶ್ ಕುಮಾರ್ ಅವರನ್ನು ಹತ್ಯೆಗೈಯಲು ಮಾಲೆಗಾಂವ್ ಸ್ಫೋಟ ಪ್ರಕರಣದ ಆರೋಪಿ ಶ್ರೀಕಾಂತ್ ಪುರೋಹಿತ್ ಮತ್ತು ಇತರ ಆರೋಪಿಗಳು ಸಂಚು ರೂಪಿಸಿದ್ದರ ಕುರಿತಾದ ಸಂಭಾಷಣೆಗಳು ಕರ್ಕರೆಯವರ ಲ್ಯಾಪ್‌ಟಾಪ್‌ನಲ್ಲಿದ್ದವು ಎಂಬುದನ್ನು ಕೇಳಿದ್ದೇನೆ'
'ಆರೆಸ್ಸೆಸ್ ನಾಯಕ ಇಂದ್ರೇಶ್ ಕುಮಾರ್ ಅವರನ್ನು ಐಎಸ್ಐ ಏಜೆಂಟ್ ಎಂದು ಕರ್ಕರೆಯವರು ಹೇಳಿರುವುದನ್ನು ಕೂಡ ಕೇಳಿದ್ದೇನೆ. ಹಾಗಿದ್ದರೆ, ಇಂತವರೊಂದಿಗೆ ಸೇರಿಕೊಂಡು ಆರೆಸ್ಸೆಸ್ ನಾಯಕರು ತಮ್ಮದೇ ಜನರ ಮೇಲೆ ದಾಳಿಗಳನ್ನು ನಡೆಸಲು ಹೇಗೆ ಸಾಧ್ಯ?'
'ಸಂಘದ ಘನತೆಯನ್ನು ಹಾಳು ಮಾಡಲು ಸಿಗುವ ಯಾವುದೇ ಆವಕಾಶವನ್ನು ಕಾಂಗ್ರೆಸ್ ತಪ್ಪಿಸಿಕೊಳ್ಳುತ್ತಿಲ್ಲ. ಪ್ರತಿ ಬಾರಿಯೂ ತಳಬುಡವಿಲ್ಲದ ಆರೋಪಗಳನ್ನು ಮಾಡುತ್ತಿದೆ. ಆದರೆ ಇಂತಹ ಆರೋಪಗಳು ಬಂದಾಗಲೆಲ್ಲ, ಈ ಹಿಂದಿಗಿಂತಲೂ ಹೆಚ್ಚು ಪ್ರಬಲವಾಗಿ ಆರೆಸ್ಸೆಸ್ ಹೊರ ಹೊಮ್ಮಿದೆ' ಎಂದು ಆರೆಸ್ಸೆಸ್‌ನಿಂದಲೇ ಬಿಜೆಪಿ ಅಧ್ಯಕ್ಷರಾಗಿ ನೇಮಕಗೊಂಡವರು ಎಂದು ಹೇಳಲಾಗುವ ಗಡ್ಕರಿ ಹೇಳಿದರು.