ಒಂದಿಲ್ಲೊಂದು ವಿವಾದಗಳಿಂದಲೇ ಸದಾ ಸುದ್ದಿಯಲ್ಲಿರುವ ರಾಹುಲ್ ಗಾಂಧಿ ಈಗ ಯುಪಿಎ ಸರಕಾರದ ಮೈತ್ರಿ ಪಕ್ಷಗಳಲ್ಲೇ ಒಡಕಿಗೆ ಕಾರಣರಾಗಿದ್ದಾರೆ. ಬೆಲೆಯೇರಿಕೆಯನ್ನು ನಿಯಂತ್ರಿಸಲು ವಿಫಲವಾಗಿರುವುದಕ್ಕೆ ಅವರು ನೀಡಿರುವ ಕಾರಣವೇ ಇಷ್ಟೊಂದು ವಿವಾದಕ್ಕೆ ಕಾರಣವಾಗಿರುವುದು.
ಯುಪಿಎ ಸರಕಾರವು ಬೆಲೆಯೇರಿಕೆಯನ್ನು ನಿಯಂತ್ರಿಸಲು ವಿಫಲವಾಗಿರುವುದು ಸಮ್ಮಿಶ್ರ ಸರಕಾರದ ಕಾರಣದಿಂದ ಎಂದು ಲಕ್ನೋದಲ್ಲಿ ವಿದ್ಯಾರ್ಥಿಗಳ ಜತೆ ಸಂವಾದ ನಡೆಸುತ್ತಿದ್ದ ಸಂದರ್ಭದಲ್ಲಿ ರಾಹುಲ್ ಹೇಳಿದ್ದರು. ಇದು ಎನ್‌ಸಿಪಿ ನಾಯಕ ಶರದ್ ಪವಾರ್ ಅವರನ್ನು ಕೆರಳಿಸಿತ್ತು. ಅವರ ಪಕ್ಷವೀಗ ಕಾಂಗ್ರೆಸ್ ನಾಯಕನ ವಿರುದ್ಧ ಕಿಡಿ ಕಾರುತ್ತಿದೆ. ಅತ್ತ ಕಾಂಗ್ರೆಸ್ ಕೂಡ ಸ್ಪಷ್ಟನೆ ನೀಡಲು ಮುಂದಾಗಿದೆ.
ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರವು ಬೆಲೆಯೇರಿಕೆ ಮತ್ತು ಭ್ರಷ್ಟಾಚಾರವನ್ನು ನಿಯಂತ್ರಿಸಲು ವಿಫಲವಾಗಿರುವುದು ಯಾಕೆ ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದ್ದರು.
ಇದಕ್ಕೆ ಉತ್ತರಿಸಿದ್ದ ರಾಹುಲ್, ಈಗ ಇರುವುದು ಇಂದಿರಾ ಗಾಂಧಿ ಆಡಳಿತವಲ್ಲ. ಅವರು ಮಾಡಿದ ಹಾಗೆ ಈಗ ಮಾಡಲು ಸಾಧ್ಯವಿಲ್ಲ. ನಾವು (ಕಾಂಗ್ರೆಸ್) ಏಕಾಂಗಿಯಾಗಿ ಸರಕಾರವನ್ನು ನಡೆಸುತ್ತಿಲ್ಲ. ನಮ್ಮದು ಯುಪಿಎ ಮೈತ್ರಿಕೂಟ. ಇಲ್ಲಿ ಕೆಲವೊಂದು ನಿರ್ಬಂಧಗಳಿರುತ್ತವೆ ಎಂದಿದ್ದರು.
ಇದು ಸಹಜವಾಗಿಯೇ ಕೇಂದ್ರ ಆಹಾರ ಮತ್ತು ಕೃಷಿ ಖಾತೆ ಸಚಿವ ಶರದ್ ಪವಾರ್ ಅವರನ್ನು ಕುಪಿತಗೊಳಿಸಿದೆ. ರಾಹುಲ್ ತನ್ನನ್ನೇ ಗುರಿಯಾಗಿಟ್ಟುಕೊಂಡು ಈ ಹೇಳಿಕೆ ನೀಡಿದ್ದಾರೆ ಎಂದು ಅವರ ಪಕ್ಷ ಕಿಡಿ ಕಾರಿದೆ.
ವಾಸ್ತವ ಸ್ಥಿತಿಗಳನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳಬೇಕು. ಹಣದುಬ್ಬರವನ್ನು ನಿಯಂತ್ರಿಸುವುದು ಯಾರೂ ಒಬ್ಬರಿಂದ ಸಾಧ್ಯವಿಲ್ಲ. ಅದು ಸಮೂಹ ಯತ್ನದಿಂದ ಆಗಬೇಕಾಗಿರುವ ಕಾರ್ಯ. ಬೆಲೆಯೇರಿಕೆಗೂ ಸಮ್ಮಿಶ್ರ ಸರಕಾರಕ್ಕೂ ಸಂಬಂಧ ಕಲ್ಪಿಸುವುದು ಸರಿಯಲ್ಲ ಎಂದು ಎನ್‌ಸಿಪಿ ನಾಯಕ ತಾರಿಕ್ ಅನ್ವರ್ ತಿರುಗೇಟು ನೀಡಿದ್ದಾರೆ.
ಸರಕಾರದ ಪ್ರಮುಖ ಪಕ್ಷದ ಹೇಳಿಕೆಗಳು ವಿನಯತೆಯಿಂದ ಕೂಡಿರಬೇಕೇ ಹೊರತು ಭಂಡತನದಿಂದ ಅಲ್ಲ. ಅದು ವಾಸ್ತವ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಎನ್‌ಸಿಪಿ ಪ್ರಧಾನ ಕಾರ್ಯದರ್ಶಿ ಡಿ.ಪಿ. ತ್ರಿಪಾಠಿ ಹೇಳಿದ್ದಾರೆ.
ಆದರೆ ಈ ನಾಯಕರ ವಾದವನ್ನು ಮತ್ತೊಬ್ಬ ನಾಯಕ ಹಾಗೂ ಕೇಂದ್ರ ಸಚಿವ ಪ್ರಫುಲ್ ಪಟೇಲ್ ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ. ರಾಹುಲ್ ಗಾಂಧಿ ತನ್ನ ಹೇಳಿಕೆಯಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಪವಾರ್ ಅವರನ್ನು ಹೆಸರಿಸಿಲ್ಲ. ಹಾಗಾಗಿ ಈ ಕುರಿತು ಅನಗತ್ಯ ವಿವಾದ ಎಬ್ಬಿಸಲಾಗುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿ ವಾಗ್ದಾಳಿ... ಬೆಲೆಯೇರಿಕೆ ನಿಯಂತ್ರಣ ಮಾಡಲು ವಿಫಲವಾಗಿರುವುದಕ್ಕೆ ಸಮ್ಮಿಶ್ರ ಸರಕಾರ ಕಾರಣ ಎಂಬ ಹೇಳಿಕೆ ನೀಡಿರುವ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಕೂಡ ಮುಗಿ ಬಿದ್ದಿದೆ.
ವಾಜಪೇಯಿ ಕೂಡ ಸಮ್ಮಿಶ್ರ ಸರಕಾರವನ್ನು ನಡೆಸಿದ್ದರು. ಆದರೆ ಬೆಲೆಗಳು ನಿಯಂತ್ರಣದಲ್ಲಿದ್ದವು. ಸಮ್ಮಿಶ್ರ ಸರಕಾರದಲ್ಲಿನ ನಿರ್ಬಂಧಗಳು ಸಿದ್ಧಾಂತದ ಮೇಲೆ ಪ್ರಭಾವ ಬೀರಬಹುದೇ ಹೊರತು, ಬೆಲೆಯೇರಿಕೆಯನ್ನು ನಿಯಂತ್ರಣಕ್ಕೆ ತರುವ ಕ್ರಮಗಳ ಮೇಲಲ್ಲ ಎಂದು ಬಿಜೆಪಿ ವಕ್ತಾರೆ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯಿಸಿದ್ದಾರೆ.