ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆರೆಸ್ಸೆಸ್ ಹಾಳುಗೆಡವಲು ಯತ್ನಿಸುತ್ತಿರುವ ಯುಪಿಎ: ಸ್ವಾಮಿ
(Janata Party | Subramanian Swamy | Hindu Terror | Rahul Gandhi)
ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ಮಸಿ ಬಳಿಯಲು ಯತ್ನಿಸುತ್ತಿದೆ ಎಂದು ಆರೋಪಿಸಿರುವ ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣ್ಯನ್ ಸ್ವಾಮಿ, ತಥಾಕಥಿತ ಕೇಸರಿ ಭಯೋತ್ಪಾದನೆ ಬಗ್ಗೆ ಶ್ವೇತಪತ್ರ ಹೊರಡಿಸಲು ಗೃಹ ಸಚಿವಾಲಯಕ್ಕೆ ನಿರ್ದೇಶನ ನೀಡುವಂತೆ ಪ್ರಧಾನ ಮಂತ್ರಿಯನ್ನು ಆಗ್ರಹಿಸಿದ್ದಾರೆ.
ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟ ಮತ್ತಿತರ ಭಯೋತ್ಪಾದನಾ ಕೃತ್ಯಗಳನ್ನು, ಹಿಂದೂ ಸಮುದಾಯದ ಮೇಲೆ ಹೊರಿಸುತ್ತಿರುವ ಕೇಂದ್ರ ಸರಕಾರದ ಕ್ರಮ ಹಾಸ್ಯಾಸ್ಪದ ಎಂದೂ ಸ್ವಾಮಿ ಟೀಕಿಸಿದ್ದಾರೆ.
ಸಂಜೋತಾ ಎಕ್ಸ್‌ಪ್ರೆಸ್ ಸ್ಫೋಟದ ಬಗ್ಗೆ 2008ರಲ್ಲಿ ಲಷ್ಕರ್ ಇ ತೊಯ್ಬಾ ಉಗ್ರ ನಾಗೊರಿ ನೀಡಿದ್ದ ತಪ್ಪೊಪ್ಪಿಗೆ ಹೇಳಿಕೆ ಪ್ರತಿಫಲನದಂತೆ ಈಗ ಸ್ವಾಮಿ ಅಸೀಮಾನಂದ ನೀಡಿರುವ ಹೇಳಿಕೆ ಕಾಣುತ್ತದೆ. ಎರಡೂ ಒಂದೇ ರೀತಿಯಲ್ಲಿರುವಾಗ ಯಾವುದು ನಿಜವಾದುದು ಎಂಬುದನ್ನು ಸ್ಪಷ್ಟಪಡಿಸಬೇಕು. ಯಾವ ತಪ್ಪೊಪ್ಪಿಗೆಯನ್ನು ಕೇಂದ್ರವು ಸ್ವೀಕರಿಸುತ್ತದೆ ಮತ್ತು ತಿರಸ್ಕರಿಸುತ್ತದೆ ಎಂಬುದನ್ನು ತಿಳಿಸಬೇಕು ಎಂದು ಒತ್ತಾಯಿಸಿದರು.
ಸೋಕಾಲ್ಡ್ ಹಿಂದೂ ಭಯೋತ್ಪಾದನೆ ಬಗ್ಗೆ ಇರುವ ಎಲ್ಲಾ ಅಧಿಕೃತ ದಾಖಲೆಗಳನ್ನು ಶ್ವೇತಪತ್ರ ಹೊರಡಿಸುವ ಮೂಲಕ ಬಹಿರಂಗಪಡಿಸಬೇಕು. ಈ ಪ್ರಕರಣದಲ್ಲಿ ಸಂಪೂರ್ಣ ಪಾರದರ್ಶಕತೆ ಇಲ್ಲದೆ, ಕೇಸರಿ ಭಯೋತ್ಪಾದನೆ ಎಂಬ ಅಪಪ್ರಚಾರವನ್ನು ಪಾಕಿಸ್ತಾನ ಮಾಡಲು ನಾವು ಬಿಡುವುದಿಲ್ಲ ಎಂದರು.
ಸ್ವಾಮಿ ವಿರುದ್ಧ ಮಾನನಷ್ಟ.. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿಯನ್ನು ಅತ್ಯಂತ ಕೀಳುಬಾಷೆಯಲ್ಲಿ ನಿಂದಿಸಿರುವ ಕುರಿತು ಹಿಂದಿ ದೈನಿಕದಲ್ಲಿ ವರದಿಯಾದ ಹಿನ್ನಲೆಯಲ್ಲಿ, ಸುಬ್ರಮಣ್ಯನ್ ಸ್ವಾಮಿ ಅವರ ವಿರುದ್ಧ ಗುಜರಾತ್‌ನ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಗುರ್ಜಾರ್ ಅವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಭಾರತೀಯ ದಂಡಸಂಹಿತೆಯ ಸೆಕ್ಷನ್ 153(ಎ),153(ಬಿ) ಮತ್ತು ಸೆಕ್ಷನ್ 500ರಡಿ ಕೇಸು ದಾಖಲಾಗಿದೆ. ಈ ಸಂಬಂಧ ಅಹಮದಾಬಾದ್‌ನ ನ್ಯಾಯಾಲಯದಲ್ಲಿ ಜನವರಿ 18 ರಂದು ವಿಚಾರಣೆ ನಡೆಯಲಿದೆ.