ಮೊಹಮ್ಮದ್ ಆಲಿ ಜಿನ್ನಾರನ್ನು ಪ್ರಶಂಸಿಸಿ ತೀವ್ರ ವಿವಾದಕ್ಕೆ ತುತ್ತಾದ ಐದು ವರ್ಷಗಳ ನಂತರ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಮತ್ತೆ ತನ್ನ ಹಿಂದಿನ ಮಾತಿಂದ ಎದುರಿಸಿದ ಬವಣೆಯನ್ನು ಮೆಲುಕು ಹಾಕಿದ್ದಾರೆ. ಜಾತ್ಯತೀತ ರಾಷ್ಟ್ರ ಪ್ರತಿಪಾದಿಸಿ ಪಾಕಿಸ್ತಾನದ ಸಂಸ್ಥಾಪಕ ಏನು ಅನುಭವಿಸಿದ್ದರೋ, ಅದೇ ವೈಯಕ್ತಿಕವಾಗಿ ನನ್ನ ಅನುಭವಕ್ಕೂ ಬಂದಿದೆ. ನಾನೂ ಕಷ್ಟ ಅನುಭವಿಸಿದ್ದೇನೆ ಎಂದು ಹೇಳಿದ್ದಾರೆ.
ಮೂಲಭೂತವಾಗಿ ಮುಸ್ಲಿಂ ಬಾಹುಳ್ಯದೊಂದಿಗೆ ಜಾತ್ಯತೀತ ರಾಷ್ಟ್ರವೊಂದನ್ನು ಬಯಸಿದ್ದ ಜಿನ್ನಾ ಏನು ಅನುಭವಿಸಿದ್ದರೋ, ಅವರ ಕುರಿತು ಪ್ರಸ್ತಾಪಿಸುವ ಮೂಲಕ ನಾನು ಕೂಡ ಅದೇ ಬವಣೆಯನ್ನು ಅನುಭವಿಸಿದ್ದೇನೆ ಎಂದು ಏನನ್ನೋ ಅಸ್ಪಷ್ಟವಾಗಿ ಹೇಳಿರುವ ಅಡ್ವಾಣಿ, ಪಾಕಿಸ್ತಾನದ ಇಂದಿನ ಸ್ಥಿತಿಗೆ ಜಿನ್ನಾ ಕಾರಣರಲ್ಲ ಎಂಬುದನ್ನು ಒತ್ತಿ ಹೇಳಿದ್ದಾರೆ.
2005ರ ಪಾಕಿಸ್ತಾನ ಪ್ರವಾಸ ಸಂದರ್ಭದಲ್ಲಿನ ಜಿನ್ನಾ ಕುರಿತ ವಿವಾದಿತ ಹೇಳಿಕೆಯನ್ನು ಅಡ್ವಾಣಿ ಉಲ್ಲೇಖಿಸಿದ್ದು ಹಿರಿಯ ಪತ್ರಕರ್ತ ಎಂ.ಜೆ. ಅಕ್ಬರ್ ಅವರ Tinderbox - The Past and Future of Pakistan ಪುಸ್ತಕ ಬಿಡುಗಡೆ ಸಮಾರಂಭದಲ್ಲಿ.
ಅಂದು ಅಡ್ವಾಣಿ ನೀಡಿದ್ದ ಹೇಳಿಕೆಯಿಂದಾಗಿ ಭಾರೀ ವಿವಾದ ಸೃಷ್ಟಿಯಾಗಿತ್ತು. ಆರೆಸ್ಸೆಸ್ ಮತ್ತು ಬಿಜೆಪಿಯ ಹಿರಿಯ ನಾಯಕರು ಅಡ್ವಾಣಿ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದರು. ಇದಕ್ಕೆ ತಲೆ ಬಾಗಿದ್ದ ಅವರ ಮೇಲಿನ ಕೋಪ ತಣಿದದ್ದು 2007ರ ಡಿಸೆಂಬರ್ ಹೊತ್ತಿಗೆ. ಅವರನ್ನು ಪ್ರಧಾನ ಮಂತ್ರಿ ಅಭ್ಯರ್ಥಿ ಎಂದು ಬಿಜೆಪಿ ಘೋಷಿಸಿತ್ತು.
ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡುತ್ತಾ, ಜಿನ್ನಾ ಓರ್ವ ಜಾತ್ಯತೀತ ವ್ಯಕ್ತಿ; ಪಾಕಿಸ್ತಾನದಲ್ಲಿನ ರಾಜಕೀಯ ಅಸ್ಥಿರತೆಗೆ ದ್ವಿರಾಷ್ಟ್ರ ಸಿದ್ಧಾಂತವನ್ನು ಪ್ರತಿಪಾದಿಸಿದ ಮೌಲಾನಾ ಅಬುಲ್ ಅಲಾ ಮೌದುದಿ ಮತ್ತು ಸರ್ವಾಧಿಕಾರಿ ಜಿಯಾ ಉಲ್ ಹಕ್ ಕಾರಣರು ಎಂದು ಆರೋಪಿಸಿದರು.
ರಾಜಕೀಯ ಮತ್ತು ಧರ್ಮವನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ. ಇಸ್ಲಾಂ ಸಂಪೂರ್ಣ ಜೀವನ ಶೈಲಿ. ರಾಜಕೀಯವೂ ಬದುಕಿನ ಒಂದು ಭಾಗವಾಗಿರುವುದರಿಂದ ಅದನ್ನು ನಿರ್ಲಕ್ಷಿಸಲು ಸಾಧ್ಯವೇ ಇಲ್ಲ ಎನ್ನುವುದು ಮೌದುದಿ ವಾದವಾಗಿತ್ತು.
ಪುಸ್ತಕದಲ್ಲಿನ ಲೇಖಕರ ಅಭಿಪ್ರಾಯವನ್ನು ಬೆಂಬಲಿಸಿರುವ ಅಡ್ವಾಣಿ, 'ಪಾಕಿಸ್ತಾನದ ಫಾದರ್ (ರಾಷ್ಟ್ರಪಿತ) ಜಿನ್ನಾರ ಮಕ್ಕಳು, ಗಾಡ್ ಫಾದರ್ ಮೌದುದಿಯ ಸಿದ್ಧಾಂತದ ಉತ್ತರಾಧಿಕಾರಿಗಳನ್ನು ಮಣಿಸಲು ಸಾಧ್ಯವಾದರೆ ಮಾತ್ರ ಪಾಕಿಸ್ತಾನ ಒಂದು ಸ್ಥಿರ ಮತ್ತು ಸಮಕಾಲೀನ ರಾಷ್ಟ್ರವಾಗಬಹುದು ಎಂದು ಅಕ್ಬರ್ ಹೇಳಿರುವುದು ಸರಿಯಾಗಿಯೇ ಇದೆ' ಎಂದರು.
'ಜಿನ್ನಾ ಪಾಕಿಸ್ತಾನದ ರಾಷ್ಟ್ರಪಿತ ಆಗಿರಬಹುದು. ಆದರೆ ಪಾಕಿಸ್ತಾನದ ಗಾಡ್ ಫಾದರ್ ಮೌದುದಿ. ಅವರ ಪ್ರಭಾವ ವಿಸ್ತಾರವಾಗಿದೆ, ಅಗಾಧವಾಗಿದೆ' ಎಂದು ಮೌದುದಿ ಕುರಿತು ಟೀಕಿಸಿರುವ ಲೇಖಕರಿಗೆ ಶಹಬ್ಬಾಸ್ ನೀಡಿದರು.