ಮಾನವನದ್ದು ಯಾವತ್ತಿದ್ದರೂ ಸ್ವಾರ್ಥ ಸ್ವಭಾವ. ಹಂಚಿ ತಿನ್ನುವ ಬದಲು ತಾನೊಬ್ಬನೇ ತಿನ್ನಬೇಕೆನ್ನುವುದು, ಇದ್ದರೂ ಪರರಿಗೆ ಕೊಡಲು ಚೌಕಾಶಿ ಮಾಡುವುದು ಹುಟ್ಟುಗುಣ. ಬೆರಳೆಣಿಕೆ ಮಂದಿಯಷ್ಟೇ ಇದರಿಂದ ಹೊರತಾದವರು ಕಾಣ ಸಿಗುತ್ತಾರೆ. ಇದೇ ರೀತಿ ವರ್ತಿಸಿದ ವ್ಯಕ್ತಿಯೊಬ್ಬನ ಮೂಗನ್ನೇ ಕತ್ತರಿಸಿ ಹಾಕಿದ ಪ್ರಸಂಗ ಮಧ್ಯಪ್ರದೇಶದಲ್ಲಿ ನಡೆದಿದೆ.
ತನ್ನ ಬಾವಿಯಿಂದ ನೀರು ತೆಗೆಯುತ್ತಿರುವುದಕ್ಕೆ ಪ್ರತಿಯಾಗಿ ಹಣ ಕೇಳಿದ್ದನ್ನೇ ಮುಂದಿಟ್ಟುಕೊಂಡು ಪಕ್ಕದ ಮನೆಯವರು ಗಟ್ಟಿಯಾಗಿ ಹಿಡಿದು ಮೂಗನ್ನೇ ಕತ್ತರಿಸಿದ್ದಾರೆ. ಅಶೋಕ್ ಶರ್ಮಾ ಎಂಬಾತನೇ ಈ ರೀತಿಯಾಗಿ ಮೂಗು ಕಳೆದುಕೊಂಡಿರುವಾತ.
ಮೊರೆನಾ ಜಿಲ್ಲೆಯ ಅಂಬಾಹ್ ಗ್ರಾಮದಲ್ಲಿನ ಅಶೋಕ್ ಶರ್ಮಾ ಮನೆಯ ಎದುರಿನ ಬಾವಿಯಿಂದ ಪಕ್ಕದ ಮನೆಯವರು ಕುಡಿಯಲು ನೀರು ಕೊಂಡೊಯ್ದಿದ್ದರು. ಇದಕ್ಕೆ ಹಣ ಪಾವತಿ ಮಾಡಬೇಕು ಎನ್ನುವುದು ಶರ್ಮಾ ವಾದವಾಗಿತ್ತು.
ಇದಕ್ಕೆ ನೆರೆ ಮನೆಯವರು ಒಪ್ಪಿರಲಿಲ್ಲ. ಹಣ ಕೊಡುವುದಿಲ್ಲ ಎಂದು ವಾದಿಸಿದ್ದರು. ಕೊಡಲೇ ಬೇಕು ಎಂದು ಶರ್ಮಾ ಬೆದರಿಕೆ ಹಾಕಿದಾಗ ಕುಪಿತರಾದ ಅವರು, ಹರಿತವಾದ ಕತ್ತಿಯನ್ನು ತೆಗೆದುಕೊಂಡು ಮೂಗನ್ನೇ ಕತ್ತರಿಸಿ ಬಿಟ್ಟಿದ್ದಾರೆ.
ಶರ್ಮಾನ ಮೂಗು ಮತ್ತು ತುಟಿಗಳಿಗೆ ತೀವ್ರ ಗಾಯವಾಗಿದೆ. ಆತನನ್ನು ಇಲ್ಲಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಮೊರೆನಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಕುಮಾರ್, ಶರ್ಮಾ ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದೇವೆ. ಆರೋಪಿಗಳು ಪರಾರಿಯಾಗಿದ್ದಾರೆ. ಅವರನ್ನು ಶೀಘ್ರದಲ್ಲೇ ಬಂಧಿಸುತ್ತೇವೆ ಎಂದಿದ್ದಾರೆ.