ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗಾಂಧಿ ಕುಟುಂಬಕ್ಕೂ ಕ್ವಟ್ರೋಚಿಗೂ ಏನು ಸಂಬಂಧ?: ಗಡ್ಕರಿ ಪ್ರಶ್ನೆ (Nitin Gadkari | Sonia Gandhi | Ottavio Quattrocchi | Bofors deal)
Bookmark and Share Feedback Print
 
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮೇಲೆ ಮತ್ತೊಮ್ಮೆ ತೀವ್ರ ವಾಗ್ದಾಳಿ ನಡೆಸಿರುವ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ, ಬೊಫೋರ್ಸ್ ವ್ಯವಹಾರದಲ್ಲಿ ಲಂಚ ಪಡೆದಿದ್ದ ಇಟಲಿ ಉದ್ಯಮಿ ಒಟ್ಟಾವಿಯೋ ಕ್ವಟ್ರೋಚಿ ಜತೆ ಗಾಂಧಿ ಕುಟುಂಬದ ಸಂಬಂಧ ಯಾವ ರೀತಿಯದ್ದು ಎಂದು ಪ್ರಶ್ನಿಸಿದ್ದಾರೆ.

ಬೊಫೋರ್ಸ್‌ನಲ್ಲಿ ಕಮೀಷನ್ ಪಡೆದಿದ್ದ ಕ್ವಟ್ರೋಚಿ ಮತ್ತು ಗಾಂಧಿ ಕುಟುಂಬದ ನಡುವಿನ ಸಂಬಂಧ ಯಾವ ರೀತಿಯದ್ದು ಎಂದು ನಾನು ಸೋನಿಯಾ ಗಾಂಧಿಯವರಲ್ಲಿ ಕೇಳಲು ಬಯಸುತ್ತಿದ್ದೇನೆ. ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ಮನೆಗೆ ನೇರ ಪ್ರವೇಶ ಹೊಂದಿದ್ದ ವ್ಯಕ್ತಿ ಕ್ವಟ್ರೋಚಿ -- ಇದನ್ನು ಹೇಳಿರುವುದು ನಾನಲ್ಲ. ಕ್ವಟ್ರೋಚಿ ಡ್ರೈವರ್ ಸಿಬಿಐಗೆ ನೀಡಿರುವ ಹೇಳಿಕೆಯಿದು ಎಂದು ಗಡ್ಕರಿ ಉಲ್ಲೇಖಿಸಿದರು.

ನಿಜಕ್ಕೂ ಕಾಂಗ್ರೆಸ್ ನಾಯಕರಿಗೆ ಧೈರ್ಯ ಇದ್ದರೆ, ಸೋನಿಯಾ ಗಾಂಧಿ ಮತ್ತು ಕ್ವಟ್ರೋಚಿ ನಡುವಿನ ಸಂಬಂಧವನ್ನು ಸ್ಪಷ್ಟಪಡಿಸಲಿ. ಅಲ್ಲಿ ಬೇರೇನೋ ಇರುವುದರಿಂದ ಅವರು ನನ್ನ ಪ್ರಶ್ನೆಗೆ ಉತ್ತರಿಸಲಾರರು ಎಂದು ಬಿಜೆಪಿಯ 'ಕೊಲ್ಕತ್ತಾ-ಶ್ರೀನಗರ ರಾಷ್ಟ್ರೀಯ ಏಕತಾ ಯಾತ್ರೆ'ಗೆ ಚಾಲನೆ ನೀಡುತ್ತಾ ವಾಕ್ ಪ್ರಹಾರ ನಡೆಸಿದರು.

1987ರ 15 ಬಿಲಿಯನ್ ರೂಪಾಯಿಗಳ ಮೊತ್ತದ ಬೊಫೋರ್ಸ್ ಫಿರಂಗಿ ಒಪ್ಪಂದದಲ್ಲಿ ಕ್ವಟ್ರೋಚಿ ಮತ್ತು ಆತನ ಸಹಚರ (ಈಗ ಬದುಕಿಲ್ಲ) ವಿನ್ ಚಡ್ಡಾ 412 ಮಿಲಿಯನ್ ರೂಪಾಯಿ ಲಂಚ ಪಡೆದಿದ್ದರು ಎಂದು ಡಿಸೆಂಬರ್ 31ರಂದು ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣ ಹೇಳಿದ ನಂತರ ವಿವಾದಕ್ಕೆ ಮತ್ತೆ ಜೀವ ಬಂದಿದೆ.

2.5 ಲಕ್ಷ ಕೋಟಿ ರೂಪಾಯಿ ಮೊತ್ತದ 2ಜಿ ತರಂಗಾಂತರ ಮತ್ತು ಕಾಮನ್‌ವೆಲ್ತ್ ಗೇಮ್ಸ್ ಹಗರಣಗಳಲ್ಲಿ ಕಾಂಗ್ರೆಸ್ ಮುಳುಗಿದೆ. ಗರೀಬಿ ಹಠಾವೋ ಎಂಬ ಘೋಷಣೆಯನ್ನು ಕೂಗುತ್ತಾ 56 ವರ್ಷಗಳ ಕಾಲ ದೇಶವನ್ನು ಆಳಿದರೂ, ಬಡತನವನ್ನು ನಿವಾರಿಸುವುದು ಅವರಿಂದ ಸಾಧ್ಯವಾಗಿಲ್ಲ. ಇದಕ್ಕೆಲ್ಲ ಪಕ್ಷ ಉತ್ತರಿಸಬೇಕು ಎಂದು ಗಡ್ಕರಿ ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.

ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಆಡಳಿತದಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದ ಅವರು, ಸ್ವಾತಂತ್ರ್ಯ ಬಂದು 63 ವರ್ಷಗಳಾದ ಮೇಲೂ ದೇಶದ ಶೇ.50ರಷ್ಟು ಮಂದಿಯ ದಿನದ ಸಂಪಾದನೆ ಕೇವಲ 20 ರೂಪಾಯಿ. ಶೇ.18ಕ್ಕಿಂತಲೂ ಹೆಚ್ಚು ಬೆಲೆಯೇರಿಕೆ ಎದುರಿಸಿರುವ ಅವರು 80 ರೂಪಾಯಿ ಕೊಟ್ಟು ಈರುಳ್ಳಿ ಖರೀದಿಸ ಬೇಕಾದ ಅನಿವಾರ್ಯತೆ ಒದಗಿದೆ ಎಂದು ಬೆಟ್ಟು ಮಾಡಿ ತೋರಿಸಿದರು.

ಜಮ್ಮು-ಕಾಶ್ಮೀರದ ಶ್ರೀನಗರ ಸಮೀಪವಿರುವ ಲಾಲ್‌ಚೌಕ್‌ನಲ್ಲಿ ಜನವರಿ 26ರ ಗಣರಾಜ್ಯೋತ್ಸವದಂದು ರಾಷ್ಟ್ರಧ್ವಜ ಹಾರಿಸಬೇಕು ಎನ್ನುವುದು ಬಿಜೆಪಿ ಬಯಕೆ. ಇದನ್ನು ಜಮ್ಮುವಿನ ಕಾಂಗ್ರೆಸ್ ಬೆಂಬಲಿತ ಸರಕಾರ ಹಾಗೂ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ವಿರೋಧಿಸುತ್ತಿದೆ.

ಸತತ 19 ವರ್ಷಗಳ ಕಾಲ ಇಲ್ಲಿ ರಾಷ್ಟ್ರಧ್ವಜ ಹಾರಿಸಲಾಗಿತ್ತು. ಆದರೆ ಕಳೆದ ವರ್ಷ (2010) ಧ್ವಜಾರೋಹಣವನ್ನು ಇದ್ದಕ್ಕಿದ್ದಂತೆ ನಿಲ್ಲಿಸಲಾಗಿತ್ತು. ಇದಕ್ಕೆ ಸರಕಾರಗಳು ನೀಡಿದ್ದ ಕಾರಣ, ಪ್ರತ್ಯೇಕತಾವಾದಿಗಳನ್ನು ಕೆಣಕಬಾರದೆಂದು. ಇದರ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ, ಈ ಬಾರಿ ಧ್ವಜ ಹಾರಿಸಿಯೇ ಸಿದ್ಧ ಎಂದು ಘೋಷಿಸಿದೆ. ಇದೇ ಸಂಬಂಧ ಯಾತ್ರೆಗೆ ಕೊಲ್ಕತ್ತಾದಲ್ಲಿ ಚಾಲನೆ ನೀಡಲಾಗಿದೆ. ಈ ಯಾತ್ರೆ ಲಾಲ್‌ಚೌಕ್‌ನಲ್ಲಿ ಸಮಾಪ್ತಿಯಾಗಲಿದೆ.
ಸಂಬಂಧಿತ ಮಾಹಿತಿ ಹುಡುಕಿ