ಮಹಾನ್ ಚೇತನ ಸ್ವಾಮಿ ವಿವೇಕಾನಂದರು ಹಿಂದೂ ಲೆಫ್ಟಿಸ್ಟ್! ಅವರನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದವರೂ ಮೆಚ್ಚುತ್ತಾರೆ, ಅಪ್ಪಟ ಕಮ್ಯೂನಿಸ್ಟರೂ ಪ್ರಶಂಸಿಸುತ್ತಾರೆ. ಹೀಗೆ ಶ್ಲಾಘನೆಗೊಳಗಾದ ಮತ್ತು ಆಗುತ್ತಿರುವ ಏಕೈಕ ವ್ಯಕ್ತಿ ವಿವೇಕಾನಂದ. ಅವರು ಹಿಂದೂ ಧರ್ಮದ ಕ್ರಾಂತಿಕಾರಿ ಸಂತ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ - ಹೀಗೆಂದು ಹೇಳಿರುವುದು ಕೇಂದ್ರ ನಗರಾಭಿವೃದ್ಧಿ ಸಚಿವ ಜೈಪಾಲ್ ರೆಡ್ಡಿ.
PR
ಸ್ವಾಮಿ ವಿವೇಕಾನಂದರ 148ನೇ ಜನ್ಮ ದಿನಾಚರಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ವಿಚಾರಗೋಷ್ಠಿಯೊಂದರಲ್ಲಿ ಮಾತನಾಡುತ್ತಿದ್ದ ಅವರು, ಜನವರಿ 12ರ ದಿನವನ್ನು 'ರಾಷ್ಟ್ರೀಯ ಯುವದಿನ' ಎಂದು ಸರ್ವರೂ ಆಚರಿಸುವ ಮೂಲಕ ಅವರ ತತ್ವಗಳನ್ನು ಪಾಲಿಸಬೇಕು ಎಂದು ಕರೆ ನೀಡಿದರು.
ವಿವೇಕಾನಂದರು ಕೇವಲ ಸ್ವದೇಶಾಭಿಮಾನಿ ದಾರ್ಶನಿಕ ಮಾತ್ರವಲ್ಲ, ಅವರೊಬ್ಬ ಕ್ರಾಂತಿಕಾರಿ. ಬದಲಾವಣೆಯ ಹರಿಕಾರ. ಅವರು ಹಿಂದೂ ಕ್ರಾಂತಿಕಾರಿಯಾಗಿದ್ದರು ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಹಾಗಾಗಿ ಅವರನ್ನು ಹಿಂದೂ ಎಡಪಂಥೀಯವಾದಿ ಎಂದು ನಾನು ಗಟ್ಟಿಯಾಗಿ ಹೇಳಬಲ್ಲೆ ಎಂದು ರೆಡ್ಡಿ ನುಡಿದರು.
ವಿವೇಕಾನಂದರದ್ದು ಬಹುಮುಖಿ ವ್ಯಕ್ತಿತ್ವ. ಆದರೆ ಅವರು ಸ್ವೀಕರಿಸಿ, ಸಾರಿದ್ದು ವಿಶ್ವಮುಖಿ ವ್ಯಕ್ತಿತ್ವದ ಸಾರವನ್ನು. ಆಧುನಿಕ ಭಾರತದಲ್ಲಿ ಆರೆಸ್ಸೆಸ್ ಸೈದ್ಧಾಂತಿಕರು ಮತ್ತು ಕಮ್ಯೂನಿಸ್ಟರು ಬಹಳ ಸ್ಪಷ್ಟವಾಗಿ ಮೆಚ್ಚಿದ್ದ ಏಕೈಕ ವ್ಯಕ್ತಿಯಿದ್ದರೆ ಅದು ಸ್ವಾಮಿ ವಿವೇಕಾನಂದರು ಮಾತ್ರ ಎಂದ ಸಚಿವರು, ಅವರನ್ನು ನೇರವಾಗಿ ಹಿಂದೂ-ಲೆಫ್ಟಿಸ್ಟ್ ಎಂದು ಬಣ್ಣಿಸಿದರು.
ಜಾತಿ ವ್ಯವಸ್ಥೆಯನ್ನು ಎಲ್ಲರಿಗಿಂತ ಹೆಚ್ಚು ತೀವ್ರವಾಗಿ ಖಂಡಿಸಿದ್ದ, ವಿರೋಧಿಸಿದ್ದ 19ನೇ ಶತಮಾನದ ವೀರ ಸಂತನನ್ನು ಸ್ವತಃ ಕಮ್ಯೂನಿಸ್ಟ್ ನಾಯಕ ಎಎಂಎಸ್ ನಂಬೂದಿರಿಪಾಡ್ ಮೆಚ್ಚಿದ್ದರು. ಅವರನ್ನು ಸಮಾಜದ ಮಾದರಿ ವ್ಯಕ್ತಿ ಎಂದು ಗೌರವಿಸಿದ್ದರು ಎಂದು ಸ್ಮರಿಸಿದ ಅವರು, ವಿಶ್ವದ ಶ್ರೇಷ್ಠ ಸಮಾಜವಾದಿಗಳ ಸಾಲಿನ ಮೊದಲ ಭಾರತೀಯ ವಿವೇಕಾನಂದರು ಎಂದರು.
'ಅಮೆರಿಕದ ಸೋದರಿಯರೇ ಮತ್ತು ಸೋದರರೇ' ಎಂದು ವಿಶ್ವ ಧರ್ಮಗಳ ಚಿಕಾಗೋ ಸಮ್ಮೇಳನದಲ್ಲಿ ಮಾತು ಆರಂಭಿಸಿ ಅವರು ಮಾಡಿದ ಭಾಷಣ ಇಂದಿಗೂ ಜಗತ್ತಿನ ಕಿವಿಗಳಲ್ಲಿ ಪ್ರತಿಧ್ವನಿಸುತ್ತಿದೆ. ಹಿಂದೂ ಧರ್ಮದ ಸಿದ್ಧಾಂತವನ್ನು ಜಾಗತಿಕ ಮಟ್ಟದಲ್ಲಿ ಪಸರಿಸಿದ ಜಗತ್ತಿನ ಯುವಶಕ್ತಿಯ ಸಂಕೇತ ಸ್ವಾಮಿ ವಿವೇಕಾನಂದರು.