ಮತಾಂಧತೆ ಹಿಂದೆ ಬಿಜೆಪಿ-ಆರೆಸ್ಸೆಸ್ ಸಿದ್ಧಾಂತ: ಕಾಂಗ್ರೆಸ್
ನವದೆಹಲಿ, ಗುರುವಾರ, 13 ಜನವರಿ 2011( 15:40 IST )
ಬಿಜೆಪಿ-ಆರೆಸ್ಸೆಸ್‌ನ ಸಿದ್ಧಾಂತಗಳಿಂದಾಗಿ ಪಂಥೀಯ ಮನೋಭಾವ ಹೆಚ್ಚುತ್ತಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ತನ್ನ ರಾಜಕೀಯ ಲಾಭಕ್ಕಾಗಿ ಸಮಾಜವನ್ನು ಬಳಸಿಕೊಂಡಿರುವ ರೀತಿಯನ್ನು ಆತ್ಮಾವಲೋಕನ ಮಾಡಿಕೊಳ್ಳುವಂತೆ ಸಲಹೆ ನೀಡಿದೆ.
ಸುದ್ದಿಗಾರರ ಜತೆ ಮಾತನಾಡುತ್ತಿದ್ದ ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ, ಅವರ ಸಿದ್ಧಾಂತಗಳಿಂದಾಗಿ ಜನ್ಮ ತಾಳಿರುವ ಸಮಾಜವನ್ನು ಒಡೆಯುವ ಭಿನ್ನತೆಯನ್ನು ನಾಶಪಡಿಸಲು ಸ್ವತಃ ಅವರೇ ಆತ್ಮಾವಲೋಕನ ಮಾಡಿಕೊಳ್ಳಬೇಕು. ಗಂಭೀರವಾಗಿ ಚಿಂತಿಸಬೇಕು ಎನ್ನುವುದು ನನ್ನ ಅಭಿಪ್ರಾಯ ಎಂದರು.
ಒಂದು ವೇಳೆ ಬಿಜೆಪಿ ಮತ್ತು ಸಂಘ ಪರಿವಾರ ಅಂತರಂಗ ವೀಕ್ಷಣೆ ಮಾಡದಿದ್ದರೆ, ಮುಂದೊಂದು ದಿನ ಅವರು ತಮ್ಮನ್ನೇ ತಾವು ಆರೋಪಿಸುವಂತಹ ಸ್ಥಿತಿ ಬರಲಿದೆ ಎಂದು ಭವಿಷ್ಯ ನುಡಿದರು.
ಯುಪಿಎ ಸರಕಾರದ ವಿರುದ್ಧ ಆರೋಪಗಳನ್ನು ಮಾಡುವ ಅಥವಾ ಗಮನವನ್ನು ಬೇರೆಡೆ ಕೊಂಡೊಯ್ಯಲು ಯತ್ನಿಸುವ ಬದಲು ಬಿಜೆಪಿ ಮತ್ತು ಆರೆಸ್ಸೆಸ್‌ಗಳು ತಮ್ಮ ಹುಳುಕುಗಳನ್ನು ನೋಡಿಕೊಳ್ಳಬೇಕು. ಬಿಜೆಪಿ ಮತ್ತು ಆರೆಸ್ಸೆಸ್‌ಗಳ ಸಂಯೋಚಿತ ಸಿದ್ಧಾಂತ ಮತ್ತು ತತ್ವಗಳಿಂದ ಪ್ರೇರಣೆ ಪಡೆದ ವ್ಯಕ್ತಿಗಳು ಮತ್ತು ಸಂಘಟನೆಗಳು ಭಯೋತ್ಪಾದನೆಗೆ ಬೆಂಬಲ, ಪೋಷಣೆ ನೀಡಿರುವ ಆರೋಪಗಳನ್ನು ಪರಿಶೀಲನೆ ನಡೆಸಬೇಕು ಎಂದು ತಿವಾರಿ ಒತ್ತಾಯಿಸಿದರು.
ಹಿಂದೂ ನಾಯಕರ ಮೇಲೆ ಕಾಂಗ್ರೆಸ್ ಮಾಡುತ್ತಿರುವ ದಾಳಿಯಿಂದಾಗಿ, ಪಾಕಿಸ್ತಾನದಿಂದ ಪ್ರಚೋದಿಸಲ್ಪಡುತ್ತಿರುವ ಭಯೋತ್ಪಾದನೆಯ ಕುರಿತ ಸರಕಾರದ ನಿಲುವು ಬಲ ಕಳೆದುಕೊಳ್ಳಲಿದೆ ಎಂಬ ಬಿಜೆಪಿ ವಾದಕ್ಕೆ ಅವರು ಪ್ರತಿಕ್ರಿಯಿಸುತ್ತಿದ್ದರು.
ಭಯೋತ್ಪಾದನಾ ಪ್ರಕರಣಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿರುವ ಆರೆಸ್ಸೆಸ್ ನಾಯಕರ ಪಾತ್ರದ ಕುರಿತು ತನಿಖಾ ದಳಗಳ ತನಿಖೆಯನ್ನು ಸಮರ್ಥಿಸಿಕೊಂಡ ಕಾಂಗ್ರೆಸ್ ನಾಯಕ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಯಾವುದನ್ನೂ ಮುಚ್ಚಿಡಲು ಸಾಧ್ಯವಿಲ್ಲ. ಸಮಸ್ಯೆ ಇರುವುದು ನಿಜವೇ ಆಗಿದ್ದರೆ, ಅದನ್ನು ಗುರುತಿಸುವ ಮತ್ತು ಪರಿಹರಿಸುವ ಧೈರ್ಯ ಇರಬೇಕಾಗುತ್ತದೆ ಎಂದರು.
ಸಂಘ ಪರಿವಾರದ ಮೇಲೆ ಭಯೋತ್ಪಾದನೆಯನ್ನು ಅಂಟಿಸಲಾಗುತ್ತಿದೆ ಎಂದು ಕಾಂಗ್ರೆಸ್ ವಿರುದ್ಧ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್ ಕಿಡಿ ಕಾರಿದ ನಂತರ ಕಾಂಗ್ರೆಸ್ ಈ ಪ್ರತಿಕ್ರಿಯೆ ನೀಡಿದೆ.