ಕಾಶ್ಮೀರದಲ್ಲಿ ಸೇನೆ ಕಡಿತಕ್ಕೆ ಸೇನಾ ಮುಖ್ಯಸ್ಥರಿಂದ ವಿರೋಧ
ನವದೆಹಲಿ, ಶುಕ್ರವಾರ, 14 ಜನವರಿ 2011( 18:45 IST )
ಜಮ್ಮು-ಕಾಶ್ಮೀರದಲ್ಲಿನ ಭದ್ರತಾ ಪಡೆಗಳ ಸಂಖ್ಯೆಯನ್ನು ಶೇ.25ರಷ್ಟು ಇಳಿಕೆ ಮಾಡುವ ಮುನ್ಸೂಚನೆಯನ್ನು ಕೇಂದ್ರ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ನೀಡಿದ ಬೆನ್ನಿಗೆ, ಅದರ ಅಗತ್ಯವಿಲ್ಲ ಎಂದು ಅತ್ತ ಸೇನಾ ಮುಖ್ಯಸ್ಥ ಜನರಲ್ ವಿ.ಕೆ. ಸಿಂಗ್ ಪ್ರತಿಕ್ರಿಯಿಸಿದ್ದಾರೆ. ಇದರೊಂದಿಗೆ ಸರಕಾರ ಮತ್ತು ಸೇನೆಯ ನಡುವೆ ಅಭಿಪ್ರಾಯ ಭೇದವಿರುವುದು ಬಹಿರಂಗವಾಗಿದೆ.
ಜಮ್ಮು-ಕಾಶ್ಮೀರದ ಜನವಸತಿ ಪ್ರದೇಶಗಳಲ್ಲಿ ನಿಯೋಜನೆಗೊಂಡಿರುವ ಸೇನೆಯನ್ನು, ಅದರಲ್ಲೂ ಅರೆಸೇನಾ ಪಡೆಯನ್ನು ಮುಂದಿನ 12 ತಿಂಗಳುಗಳ ಅವಧಿಯಲ್ಲಿ ಶೇ.25ರಷ್ಟು ಹಿಂದಕ್ಕೆ ಪಡೆದುಕೊಳ್ಳಲಾಗುತ್ತದೆ ಎಂದು ನಿನ್ನೆಯಷ್ಟೇ ಪಿಳ್ಳೈ ತಿಳಿಸಿದ್ದರು.
ವಿಶ್ವಾಸ ವೃದ್ಧಿಗಾಗಿ ಕೈಗೊಳ್ಳಬೇಕಾದ ಕ್ರಮಗಳ ಅಂಗವಾಗಿ ನಾಗರಿಕ ಪ್ರದೇಶಗಳಲ್ಲಿರುವ ಭದ್ರತಾ ಪಡೆಗಳ ಬಂಕರುಗಳನ್ನು ಕೂಡ ನಾಶಪಡಿಸಲಾಗುತ್ತದೆ ಎಂದು ಅವರು ಹೇಳಿದ್ದರು.
ಆದರೆ ಈ ಹೇಳಿಕೆಗೆ ಮಿಲಿಟರಿಯಿಂದ ಸೂಚ್ಯವಾದ ವಿರೋಧ ವ್ಯಕ್ತವಾಗಿದೆ. ಜಮ್ಮು-ಕಾಶ್ಮೀರದಲ್ಲಿ ಸೇನೆಯನ್ನು ಕಡಿತಗೊಳಿಸುವ ಅಗತ್ಯವಿಲ್ಲ ಎಂದು ಸೇನಾ ಮುಖ್ಯಸ್ಥ ವಿ.ಕೆ. ಸಿಂಗ್ ಹೇಳಿದ್ದಾರೆ.
ನಮ್ಮ ಪ್ರಕಾರ ರಾಜ್ಯದಲ್ಲಿ ರಕ್ಷಣಾ ಪಡೆಗಳನ್ನು ಕಡಿಮೆಗೊಳಿಸುವ ಅಗತ್ಯವಿಲ್ಲ ಎಂದಿರುವ ಸಿಂಗ್, ಈಗಾಗಲೇ ಹೆಚ್ಚುವರಿಯಾಗಿ ನಿಯೋಜನೆಗೊಂಡಿರುವುದರ ಮೇಲೆ ಇದರಿಂದ ಹೆಚ್ಚಿನ ಒತ್ತಡ ಹೇರಿದಂತಾಗಿಲ್ಲ. ಸರಕಾರಕ್ಕೆ ಪೊಲೀಸ್ ಪಡೆಗಳು ಮತ್ತು ಅರೆ ಸೇನಾಪಡೆಗಳನ್ನು ಕಡಿಮೆಗೊಳಿಸಬೇಕು ಎಂದು ಅನ್ನಿಸಿದರೆ, ಅದಕ್ಕೆ ನಾನೇನೂ ಹೇಳುವುದಿಲ್ಲ ಎಂದರು.
ಸರಕಾರ ಹೇಳಿದಂತೆ ಸೇನಾ ಪಡೆಗಳನ್ನು ಹಿಂದಕ್ಕೆ ಪಡೆದುಕೊಂಡರೆ ಹೆಚ್ಚುವರಿ ಒತ್ತಡ ನಮ್ಮ ಮೇಲಾಗದು. ಈ ಕುರಿತ ಯಾವುದೇ ನಿರ್ಧಾರ ಸರಕಾರಕ್ಕೆ ಬಿಟ್ಟದ್ದು ಎಂದು ಸಿಂಗ್ ವಿವರಣೆ ನೀಡಿದರು.
ರಕ್ಷಣಾ ಪಡೆಗಳನ್ನು ಕಡಿತಗೊಳಿಸುವ ಬಗ್ಗೆ ಸೇನೆಗೆ ಯಾವುದೇ ಮಾಹಿತಿಯಿಲ್ಲ. ಈ ಸಂಬಂಧ ಯಾವುದೇ ಕ್ರಮ ಕೈಗೊಳ್ಳುವುದಿದ್ದರೂ, ಮುಖ್ಯಮಂತ್ರಿ ನೇತೃತ್ವದ ಯುನಿಫೈಡ್ ಕಮಾಂಡ್ ಜತೆಗಿನ ಸಮಾಲೋಚನೆ ನಂತರವೇ ಎನ್ನುವ ವಿಶ್ವಾಸ ನನ್ನದು ಎಂದರಾದರೂ, ಪಿಳ್ಳೈ ಹೇಳಿಕೆಗೆ ನೇರ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.