ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರಜೆಗಳನ್ನು ಕೊಲ್ಲಲು ಪ್ರಜಾಪ್ರಭುತ್ವಕ್ಕೆ ಅವಕಾಶವಿಲ್ಲ: ಸುಪ್ರೀಂ (Azad encounter | Supreme Court | Maoist leader | India)
Bookmark and Share Feedback Print
 
ಆರು ತಿಂಗಳ ಹಿಂದೆ ನಡೆದ, ನಕಲಿ ಎಂದು ಆರೋಪಿಸಲಾಗಿರುವ ಹಿರಿಯ ಮಾವೋವಾದಿ ನಾಯಕ ಅಜಾದ್ ಮತ್ತು ಪತ್ರಕರ್ತ ಹೇಮಚಂದ್ರ ಪಾಂಡೆ ಅವರ ಎನ್‌ಕೌಂಟರ್ ಕುರಿತು ಸುಪ್ರೀಂ ಕೋರ್ಟ್ ಖಾರ ಪ್ರತಿಕ್ರಿಯೆ ನೀಡಿದೆ. 'ತನ್ನದೇ ಪ್ರಜೆಗಳನ್ನು ಸಾಯಿಸಲು ಪ್ರಜಾಪ್ರಭುತ್ವಕ್ಕೆ ತಾನು ಅವಕಾಶ ನೀಡುವುದಿಲ್ಲ' ಎಂದಿರುವ ನ್ಯಾಯಾಲಯ, ಈ ಸಂಬಂಧ ಕೇಂದ್ರ ಮತ್ತು ಆಂಧ್ರಪ್ರದೇಶ ಸರಕಾರಕ್ಕೆ ನೋಟೀಸ್ ಜಾರಿ ಮಾಡಿದೆ.

ಯಾವುದೇ ಕಾರಣಕ್ಕೂ ತನ್ನದೇ ಮಕ್ಕಳನ್ನು ಕೊಲ್ಲಲು ಪ್ರಜಾಪ್ರಭುತ್ವಕ್ಕೆ ನಾವು ಅವಕಾಶ ನೀಡುವುದಿಲ್ಲ ಎಂದು ನ್ಯಾಯಮೂರ್ತಿ ಅಫ್ತಾಬ್ ಆಲಂ ಮತ್ತು ಆರ್.ಎಂ. ಲೊಧಾ ಅವರ ನ್ಯಾಯಪೀಠ ತಿಳಿಸಿದೆ.

ವಿವಾದಿತ ಸಾವುಗಳ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಸಾಮಾಜಿಕ ಹೋರಾಟಗಾರ ಸ್ವಾಮಿ ಅಗ್ನಿವೇಶ್ ಮತ್ತು ಪಾಂಡೆಯ ವಿಧವಾ ಪತ್ನಿ 30ರ ಹರೆಯದ ಬಬಿತಾ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ ನ್ಯಾಯಾಲಯವು ಮೇಲಿನಂತೆ ಹೇಳಿದ್ದು, ಇದಕ್ಕೆ ಉತ್ತರಿಸುವಂತೆ ಕೇಂದ್ರ ಮತ್ತು ಆಂಧ್ರ ಸರಕಾರಕ್ಕೆ ಆದೇಶ ನೀಡಿದೆ.

ಆರು ವಾರಗಳ ಒಳಗೆ ಸರಕಾರಗಳು ಉತ್ತರ ನೀಡಬೇಕು. ಅವರು ಉತ್ತರಿಸುತ್ತಾರೆ ಎಂಬ ಭರವಸೆ ನಮ್ಮದು. ಜತೆಗೆ ಆ ಉತ್ತರವು ಸಮಾಧಾನಕರವಾಗಿರುತ್ತದೆ ಎಂದು ನಂಬಿದ್ದೇವೆ. ಸರಕಾರವು ಹಲವು ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ ಎಂದು ಪೀಠವು ತಿಳಿಸಿತು.

ಮಹಾರಾಷ್ಟ್ರ ಗಡಿ ಸಮೀಪ ಆಂಧ್ರಪ್ರದೇಶದ ಆಡಿಲಾಬಾದ್ ಜಿಲ್ಲೆಯಲ್ಲಿ 2010ರ ಜುಲೈ 1 ಮತ್ತು 2ರ ರಾತ್ರಿ ಪೊಲೀಸರು ನಡೆಸಿದ ನಕಲಿ ಎನ್‌ಕೌಂಟರಿನಲ್ಲಿ ಸಿಪಿಐ (ಮಾವೋವಾದಿ) ಕೇಂದ್ರೀಯ ಸಮಿತಿ ಹಿರಿಯ ಸದಸ್ಯ ಚೆರುಕುರಿ ರಾಜ್‌ಕುಮಾರ್ ಆಲಿಯಾಸ್ ಆಜಾದ್ ಮತ್ತು ಪಾಂಡೆ ಬಲಿಯಾಗಿದ್ದರು ಎಂದು ಆರೋಪಿಸಲಾಗಿದೆ.

ಸತ್ಯ ಶೋಧನಾ ತಂಡಗಳ ವರದಿ ಮತ್ತು ಶವಗಳ ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ ಈ ಎನ್‌ಕೌಂಟರ್ ನಿಜವಾದುದಲ್ಲ. ತೀರಾ ಹತ್ತಿರದಿಂದ ಗುಂಡು ಹೊಡೆದು ಸಾಯಿಸಲಾಗಿರುವುದು ಗಮನಕ್ಕೆ ಬಂದಿದೆ. ಹಾಗಾಗಿ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ