ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಶಬರಿಮಲೆ ಕಾಲ್ತುಳಿತ; ಕರ್ನಾಟಕದ 25, ಒಟ್ಟು 104 ಬಲಿ (Sabarimala stampede | Kerala | Karnataka | Tamil Nadu)
Bookmark and Share Feedback Print
 
WD
ಅಯ್ಯಪ್ಪ ದರ್ಶನಕ್ಕೆ ತೆರಳಿದ್ದ ಭಕ್ತಸ್ತೋಮ ಮಕರ ಜ್ಯೋತಿ ನೋಡಿ ಮರಳುತ್ತಿದ್ದಾಗ ಕಾಲ್ತುಳಿತ ಸಂಭವಿಸಿದ್ದು, ಶಬರಿಮಲೆ ಇತಿಹಾಸದಲ್ಲೇ ಕಂಡು ಕೇಳರಿಯದ ಈ ಘೋರ ದುರಂತಕ್ಕೆ ಕರ್ನಾಟಕದ ಕನಿಷ್ಠ 25 ಮಂದಿ ಸೇರಿದಂತೆ 104ಕ್ಕೂ ಹೆಚ್ಚು ಭಕ್ತರು ಬಲಿಯಾಗಿದ್ದಾರೆ.

ದುರ್ಘಟನೆ ನಡೆದಿರುವುದು ಕೇರಳದ ಪಟ್ಟನಂತಿಟ್ಟ ಜಿಲ್ಲೆಯಲ್ಲಿನ ಶಬರಿಮಲೆ ಬೆಟ್ಟದಲ್ಲಿರುವ ಅಯ್ಯಪ್ಪ ದೇಗುಲದಿಂದ ಐದು ಕಿಲೋ ಮೀಟರ್ ದೂರದದಲ್ಲಿರುವ ಮತ್ತು ಇಂಡಿಕ್ಕಿ ಜಿಲ್ಲೆಯ ವೆಂಡಿಪಿರಿಯಾರ್ ಎಂಬಲ್ಲಿಂದ 25 ಕಿಲೋ ಮೀಟರ್ ದೂರದಲ್ಲಿರುವ ಉಪ್ಪುಪಾರಾ ಎಂಬಲ್ಲಿ. ಶುಕ್ರವಾರ ಸಂಜೆ ಮಕರಜ್ಯೋತಿ ನೋಡಿ ಮರಳುತ್ತಿದ್ದ ಹೊತ್ತಿಗೆ, ಸುಮಾರು ರಾತ್ರಿ 8.15ಕ್ಕೆ ದುರಂತ ಸಂಭವಿಸಿದೆ.

ರಕ್ಷಣಾ ಕಾರ್ಯಾಚರಣೆಗೆ ರಾಜ್ಯ ಪೊಲೀಸರು ಮತ್ತು ಮಿಲಿಟರಿಯನ್ನು ಬಳಸಲಾಗಿದೆ. ಇದುವರೆಗೆ 90ಕ್ಕೂ ಹೆಚ್ಚು ಶವಗಳನ್ನು ಹೊರ ತೆಗೆಯಲಾಗಿದ್ದು, 60ರಷ್ಟು ಮೃತದೇಹಗಳ ಗುರುತು ಪತ್ತೆ ಹಚ್ಚಲಾಗಿದೆ. ಸಾವಿನ ಸಂಖ್ಯೆಯಲ್ಲಿ ಏರುಪೇರಾಗುವ ಸಾಧ್ಯತೆಗಿವೆ.

ಕರ್ನಾಟಕದ 25 ಭಕ್ತರು...
ಬೆಳಗಾವಿ ಜಿಲ್ಲೆಯ 11, ಬೆಂಗಳೂರಿನ ಪ್ರಕಾಶ್‌ನಗರದ ಇಬ್ಬರು, ಗರುಡಾಚಾರ್ ಪಾಳ್ಯದ ಮೂವರು, ಮೈಸೂರಿನ ಇಬ್ಬರು, ಬಾಗಲಕೋಟೆ ಜಿಲ್ಲೆಯ ಓರ್ವ, ರಾಯಚೂರು ಜಿಲ್ಲೆ ಸಿಂಧನೂರಿನ ಓರ್ವ, ಬಳ್ಳಾರಿ ಜಿಲ್ಲೆಯ ಓರ್ವ, ಆನೇಕಲ್ ತಾಲೂಕು ಹೊಸ್ಕೂರಿನ ಓರ್ವ ಸೇರಿದಂತೆ ಕರ್ನಾಟಕದ ಕನಿಷ್ಠ 25 ಭಕ್ತರು ನಿನ್ನೆ ನಡೆದ ಕಾಲ್ತುಳಿತ ದುರಂತದಲ್ಲಿ ಸಾವನ್ನಪ್ಪಿದ್ದಾರೆ.

ಇನ್ನೂ ಹಲವರು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಲವು ಮಂದಿ ಕಾಣೆಯಾಗಿದ್ದಾರೆ. ಕರ್ನಾಟಕದ ಭಕ್ತರನ್ನು ರಕ್ಷಿಸುವುದು ಮತ್ತು ಶವಗಳ ಪತ್ತೆ ಕಾರ್ಯಕ್ಕಾಗಿ ರಾಜ್ಯ ಪೊಲೀಸರ ತಂಡ ಈಗಾಗಲೇ ಶಬರಿಮಲೆ ತಲುಪಿದೆ.

ಅಧಿಕೃತ ಮೂಲಗಳ ಪ್ರಕಾರ ಬೆಳಗಾವಿಯ ಗೋಕಾಕ್‌ನಿಂದ ಹೊರಟಿದ್ದ ಭಕ್ತರಲ್ಲಿ ಒಂಬತ್ತು ಮಂದಿ ದುರಂತಕ್ಕೆ ಬಲಿಯಾಗಿದ್ದಾರೆ. ಅವರನ್ನು ಚಂದು ಗುಂಡಕಲ್ಲಿ, ಪ್ರಕಾಶ ಪೂಜಾರಿ, ಬುಡ್ಡಿ, ಸೀತಾರಾಮ್, ಪುರುಷೋತ್ತಮ್, ಬಾಬು, ಗೋವಿಂದು, ಮಣಿಕಂಠ ಎಂದು ಗುರುತಿಸಲಾಗಿದೆ.

ಗೋಕಾಕ್‌ನಿಂದ ಒಟ್ಟು ಮೂರು ತಂಡಗಳು ಶಬರಿಮಲೆ ಯಾತ್ರೆಗೆ ಹೊರಟಿದ್ದವು. ಇವರಲ್ಲಿ ಒಟ್ಟಾರೆ 45ಕ್ಕೂ ಅಧಿಕ ಮಂದಿ ಕಾಣೆಯಾಗಿದ್ದಾರೆ. ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ಮೂಲಗಳು ಹೇಳಿವೆ.

ಹುಬ್ಬಳ್ಳಿಯ ಮಂಜುನಾಥ್, ವಿಷ್ಣುಮೂರ್ತಿ, ನಾಗಾರ್ಜುನ್, ಮೈಸೂರಿನ ಸುರೇಶ್, ಮುರುಗನ್, ಬೆಳಗಾವಿಯ ವೆಂಕಟೇಶ್, ಶಿವಯ್ಯ, ಮಹೇಶ್ವರನ್, ಆನೇಕಲ್ ತಾಲೂಕಿನ ಹೊಸ್ಕೂರಿನ ವೆಂಕಟಸ್ವಾಮಿ, ಕಾರವಾರದ ಮೆಹಬೂಬ್ ಸಾಬ್ ಮಸ್ಕಿ ಇತರೆ ಸಾವನ್ನಪ್ಪಿದ ಕರ್ನಾಟಕದ ಅಯ್ಯಪ್ಪ ಭಕ್ತರು.

ರಾಜ್ಯ ಪೊಲೀಸ್ ಇಲಾಖೆ ಸಹಾಯವಾಣಿ - 080-22211777

ಗಾಯಗೊಂಡವರು...
ಕೇರಳ ಸರಕಾರ ಪ್ರಕಟಿಸಿರುವ ಮಾಹಿತಿಯ ಪ್ರಕಾರ ಕರ್ನಾಟಕದ ಹಲವು ಮಂದಿ ಭಕ್ತರು ಘಟನೆಯಲ್ಲಿ ಗಾಯಗೊಂಡಿದ್ದಾರೆ. ಅವರನ್ನು ಇಲ್ಲೇ ಸಮೀಪದ ಸರಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗಿದೆ.

ಅವರ ಅಸ್ಪಷ್ಟ ಹೆಸರುಗಳು ಮತ್ತು ಊರುಗಳು ಹೀಗಿವೆ:
* ಕೆಎಚ್‌ಡಿಸಿ ಕಾಲೊನಿಯ ವಿಜಯ ವಿ. ಕೊಪ್ಪಳ
* ಬಾಗಲಕೋಟೆಯ ವಿಜಯನ್, ಬಸವರಾಮು, ರಾಜು
* ದಾನಾಪುರದ ರೋಹಿತ್, ಸುರೇಶ್, ಬಸವರಾಜು
* ಬಳ್ಳಾರಿಯ ಚಿಪ್ಪಯ್ಯ ಸ್ವಾಮಿ, ಉಣ್ಣಿಕೃಷ್ಣನ್
* ಮಡಿಕೇರಿಯ ಹರೀಶ್
* ಬೆಂಗಳೂರಿನ ಮಂಜುನಾಥ್, ಸಮರಾಜ್
* ಕೆ.ಆರ್. ಪುರಂನ ಎ.ಎಂ. ರಾಮಾನುಜಪ್ಪ
* ಮೈಸೂರಿನ ವಾಗೇಶ್, ಎಂ.ಜೆ. ಸ್ವಾಮಿ, ಉದಯ
* ಬೆಳಗಾವಿಯ ಮಣಿಗೇಶ್
* ಚಪೂರಿನ ಸತೀಶ್
* ಜಂಗೆಟ್ಟಿಯ ಯಮುನಪ್ಪ
* ಕಡುಪೆಟ್ಟಿಯ ಜಗದೀಶ್
* ಕೊಪ್ಪಳದ ವಾಸು

ದುರಂತಕ್ಕೆ ಕಾರಣ ಜೀಪು...
ಶಬರಿಮಲೆಯಲ್ಲಿ ಮಕರ ಜ್ಯೋತಿ ದರ್ಶನದ ನಂತರ ಭಕ್ತರು ತಂತಮ್ಮ ಮನೆಗಳಿಗೆ ಹಿಂತಿರುಗುತ್ತಿದ್ದಾಗ ವೇಗವಾಗಿ ಬಂದ ಜೀಪೊಂದು ಭಕ್ತರ ಮೇಲೆ ಹರಿದು ಹೋಗಿತ್ತು. ಇದರಿಂದ ಭೀತರಾದ ಜನ ದಿಕ್ಕಾಪಾಲಾದರು.

ಇನ್ನೊಂದು ಮೂಲದ ಪ್ರಕಾರ ಎರಡು ಬಸ್ಸುಗಳು ಮತ್ತು ಒಂದು ಜೀಪು ಮುಂದಕ್ಕೆ ಹೋಗಲು ಪೈಪೋಟಿ ನಡೆಸುತ್ತಿದ್ದವು. ಆಗ ಒಂದು ಬಸ್ ಕಂದಕಕ್ಕೆ ಉರುಳಿತು. ಜೀಪು ಭಕ್ತರ ಮೇಲಿನಿಂದಲೇ ಹಾದು ಹೋಯಿತು. ಇದರಿಂದ ಭೀತರಾದ ಭಕ್ತರು ಎಲ್ಲೆಂದರಲ್ಲಿ ಓಡತೊಡಗಿದರು. ಹಾಗಾಗಿ ಕಾಲ್ತುಳಿತ ಸಂಭವಿಸಿದೆ.

ರಾತ್ರಿ ಹೊತ್ತು ಬೆಳಕಿನ ವ್ಯವಸ್ಥೆ ಸಮರ್ಪಕವಾಗಿ ಇಲ್ಲದೇ ಇದ್ದ ಕಾರಣ ರಕ್ಷಣಾ ಕಾರ್ಯಾಚರಣೆಗೆ ಭಾರೀ ಅಡಚಣೆ ಉಂಟಾಯಿತು. ಘಟನೆಯಲ್ಲಿ ಮೃತಪಟ್ಟವರಲ್ಲಿ ಹೆಚ್ಚಿನವರು ತಮಿಳುನಾಡು, ಆಂಧ್ರಪ್ರದೇಶ ಮತ್ತು ಕರ್ನಾಟಕಕ್ಕೆ ಸೇರಿದವರು ಎಂದು ಪೊಲೀಸರು ತಿಳಿಸಿದ್ದಾರೆ.

ಶಬರಿಮಲೆಯ ಅತಿದೊಡ್ಡ ದುರಂತ...
ಮೂಲಗಳ ಪ್ರಕಾರ ಶಬರಿಮಲೆಯಲ್ಲಿ ನಡೆದ ಅತಿದೊಡ್ಡ ದುರಂತವಿದು. ಈ ಹಿಂದೆ ಇಷ್ಟೊಂದು ಪ್ರಮಾಣದಲ್ಲಿ ಭಕ್ತರು ಬಲಿಯಾದ ಉದಾಹರಣೆಗಳು ನಡೆದಿಲ್ಲ.

1952ರಲ್ಲಿ ಪಟಾಕಿ ದಾಸ್ತಾನು ಮಳಿಗೆಯೊಂದು ಸ್ಫೋಟಿಸಿದ್ದರಿಂದ 65 ಮಂದಿ ಭಕ್ತರು, 1999ರಲ್ಲಿ ಪಂಪಾ ಸಮೀಪ ಕಾಲ್ತುಳಿತಕ್ಕೆ 53 ಮಂದಿ ಭಕ್ತರು ಬಲಿಯಾದುದು ಶಬರಿಮಲೆಯ ಇತ್ತೀಚಿನ ದುರ್ಘಟನೆಗಳು.

ಹೆಚ್ಚಿನ ವಿವರಗಳಿಗೆ ಈ ಕೆಳಗೆ ನೀಡಲಾಗಿರುವ ಕೇರಳ ಸರಕಾರದ ವೆಬ್‌ಸೈಟನ್ನು (www.sdma.kerala.gov.in) ನೋಡಬಹುದು. ಅಲ್ಲಿ Sabarimala Stampede ಎಂಬ ಪ್ರತ್ಯೇಕ ವಿಭಾಗದಲ್ಲಿ ಬಲಿಯಾದವರ ಮತ್ತು ಗಾಯಗೊಂಡವರ ವಿವರಗಳನ್ನು ಪ್ರಕಟಿಸಲಾಗಿದೆ.


ಸಂಬಂಧಿತ ಮಾಹಿತಿ ಹುಡುಕಿ