ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಶಬರಿಮಲೆ ದುರಂತ ನಡೆದ ಪ್ರದೇಶ ಹುಲಿ-ಚಿರತೆಗಳದ್ದು! (Sabarimala mishap | tigers | leopards | Lord Ayyaappa)
Bookmark and Share Feedback Print
 
ಶುಕ್ರವಾರ ರಾತ್ರಿ ಕಾಲ್ತುಳಿತ ಸಂಭವಿಸಿರುವ ಶಬರಿಮಲೆ ಸಮೀಪದ ದಟ್ಟಡವಿ ಪ್ರದೇಶ ಹುಲಿ-ಚಿರತೆಗಳ ಆವಾಸ. ಅದೇ ಕಾರಣದಿಂದ ಈ ಪ್ರದೇಶದಲ್ಲಿ ಏಕಾಂಗಿಯಾಗಿ ಪ್ರಯಾಣ ಮಾಡಬಾರದು ಎಂದು ಸೂಚನೆಗಳನ್ನು ಕೂಡ ನೀಡಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಪ್ರಾಣಿಗಳ ಸಂಖ್ಯೆ ಕಡಿಮೆಯಾಗಿದ್ದರೂ, ಈ ಪ್ರದೇಶದಲ್ಲಿ ಒಬ್ಬೊಬ್ಬರು ಸಂಚರಿಸುವುದು ಅಪರೂಪ.

ಮಕರ ಜ್ಯೋತಿಯ ನಂತರ ಅವಘಡ ನಡೆದಿರುವುದು ಇಡುಕ್ಕಿ ಜಿಲ್ಲೆಯ ವೆಂಡಿಪಿರಿಯಾರ್ ಸಮೀಪದ 'ಪೆರಿಯಾರ್ ಹುಲಿ ರಕ್ಷಿತಾರಣ್ಯ'ದೊಳಗಿನ ಉಪ್ಪುಪಾರ ಎಂಬಲ್ಲಿ. ಈ ದಾರಿ ಕೆಲವು ವರ್ಷಗಳ ಹಿಂದೆ ಭಾರೀ ಅಪಾಯಕಾರಿ ಎಂದು ಪರಿಗಣಿಸಲಾಗುತ್ತಿತ್ತು. ಆಗಲೂ, ಈಗಲೂ ಈ ದಾರಿಯನ್ನು ಹೆಚ್ಚಾಗಿ ಬಳಸುವುದು ತಮಿಳುನಾಡಿನ ಅಯ್ಯಪ್ಪ ಭಕ್ತರು ಎಂದು ವರದಿಯೊಂದು ಹೇಳಿದೆ.
PR

ದಶಕಗಳ ಹಿಂದೆಲ್ಲ ಶಬರಿಮಲೆಗೆ ತೆರಳುವುದೆಂದರೆ ಪುನರ್ಜನ್ಮ ಎತ್ತಿದಂತೆ ಎಂದೇ ಭಾವಿಸಲಾಗುತ್ತಿತ್ತು. ಮಾಲೆಧಾರಿ ಮನೆಯಿಂದ ಹೊರಡುವ ಮೊದಲು ಹಿರಿಯರ ಆಶೀರ್ವಾದ ಪಡೆಯುವ ಹೊತ್ತಂತೂ ಒಂದು ಭಾರವೆನಿಸುವ ಭಾವನಾತ್ಮಕ ಸನ್ನಿವೇಶವನ್ನೇ ಸೃಷ್ಟಿಸಿ ಬಿಡುತ್ತಿತ್ತು. ಮಲೆಗೆ ಹೋದ ಮನೆ ಮಗ ಮರಳಿ ಬರುವನೇ ಎಂಬ ಸಂಶಯ ಅವರ ಮನದಲ್ಲಿ ಓಲಾಡುತ್ತಿದ್ದವು.

ಇದಕ್ಕಿರುವ ಕಾರಣ ಶಬರಿಮಲೆಯ ಹಾದಿಯಲ್ಲಿ ಹುಲಿಗಳು, ಚಿರತೆಗಳು ಭಾರೀ ಸಂಖ್ಯೆಯಲ್ಲಿವೆ ಎನ್ನುವುದು. ಸಮರ್ಪಕವಾಗಿ ವ್ರತ-ನೇಮಗಳನ್ನು ಪೂರೈಸದ ವ್ಯಕ್ತಿಯನ್ನು ಸಾಕ್ಷಾತ್ ಅಯ್ಯಪ್ಪ ಸ್ವಾಮಿಯೇ ಹುಲಿಯ ಅವತಾರದಲ್ಲಿ ಬಂದು ಎತ್ತಿಕೊಂಡು ಹೋಗುತ್ತಾರೆ ಎಂದೆಲ್ಲ ಹೇಳಲಾಗುತ್ತಿತ್ತು. ಅದಕ್ಕೆ ಪೂರಕವೆಂಬಂತೆ ಹಿಂದೆಲ್ಲ ಹಲವು ಮಂದಿ ಕ್ರೂರ ಕಾಡು ಪ್ರಾಣಿಗಳಿಗೆ ಬಲಿಯಾಗುತ್ತಿದ್ದ ಉದಾಹರಣೆಗಳೂ ಇದ್ದವು.

ವ್ರತ-ನೇಮಗಳ ಮೇಲಿನ ನಂಬಿಕೆಯನ್ನು ಅವರವರ ಭಾವಕ್ಕೆ, ನಂಬಿಕೆಗೆ ಬಿಟ್ಟರೂ, ಈ ವೆಂಡಿಪಿರಿಯಾರ್ ಪಟ್ಟಣ ಆಸುಪಾಸು ಕ್ರೂರ ಪ್ರಾಣಿಗಳಿಗೆ ಹೆಸರುವಾಸಿಯಾದುದು. ಇದಕ್ಕಿರುವ ಮತ್ತೊಂದು ಕಾರಣವೆಂದರೆ ಇದು ವನ್ಯಜೀವಿಗಳ ಸಂರಕ್ಷಣಾ ವಲಯ ಆಗಿರುವುದು. ಈ ಪ್ರದೇಶವನ್ನು ಪುಲ್ಮೇಡು ಅಥವಾ ಪುಲಿಮೇಡು ಎಂದೇ ಕರೆಯಲಾಗುತ್ತದೆ.

ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ತಮಿಳುನಾಡಿನಿಂದ ಬರುವ ಭಕ್ತಾದಿಗಳು ಈಗಲೂ ಇದೇ ಅರಣ್ಯ ಪ್ರದೇಶದಲ್ಲಿ ಅಡ್ಡ ದಾರಿಯ ಮೂಲಕ ಬರುತ್ತಾರೆ. ಆದರೆ ಯಾವತ್ತೂ ಒಬ್ಬೊಬ್ಬರಾಗಿ ಅಥವಾ ಎರಡು-ಮೂರು ಮಂದಿ ಬರುವುದಿಲ್ಲ. ಗುಂಪು ಗುಂಪಾಗಿ ಬರುತ್ತಾರೆ. ಹೀಗೆ ಬರುವುದರಿಂದ ಹುಲಿ-ಚಿರತೆಗಳು ಹತ್ತಿರಕ್ಕೆ ಬರುವುದಿಲ್ಲ ಎನ್ನುವ ನಂಬಿಕೆ.

ತಮಿಳುನಾಡಿನ ಕಂಬನ್, ಥೇಣಿ ಮತ್ತು ಮಧುರೈ ಮುಂತಾದ ಕಡೆಯಿಂದ ಶಬರಿಮಲೆಗೆ ಇಡುಕ್ಕಿ ಜಿಲ್ಲೆಯ ಮೂಲಕವೇ ಬಂದು, ಅದೇ ದಾರಿಯಿಂದ ವಾಪಸ್ ಹೋಗುತ್ತಾರೆ. ಇವರದ್ದು ಪೂರ್ಣ ಪ್ರಮಾಣದ ಪಾದಯಾತ್ರೆಯಾಗಿರುತ್ತದೆ.

ಶಬರಿಮಲೆ ಅಯ್ಯಪ್ಪ ದರ್ಶನಕ್ಕೆ ಭಕ್ತರು ತೆರಳುವ ಮಾರ್ಗಗಳು ಸಾಮಾನ್ಯವಾಗಿ ಮೂರು. ಮೊದಲನೆಯದ್ದು ಕೊಟ್ಟಾಯಂನಿಂದ ಪಂಪೆಗೆ. ಎರಡನೆಯದ್ದು ಎರುಮೇಲಿಯಿಂದ ಪಂಪೆಗೆ. ಇನ್ನೊಂದು ವೆಂಡಿಪಿರಿಯಾರ್‌ನಿಂದ ಸನ್ನಿಧಾನಕ್ಕೆ.

ಆದರೂ ಹೆಚ್ಚಿನ ಭಕ್ತಾದಿಗಳು ಬಳಸುವುದು ಮೊದಲೆರಡು ಮಾರ್ಗಗಳನ್ನು. ವೆಂಡಿಪಿರಿಯಾರ್ ಮಾರ್ಗವನ್ನು ಹೆಚ್ಚಾಗಿ ಬಳಸುವುದು ತಮಿಳುನಾಡಿನ ಮಂದಿ. ಜ್ಯೋತಿಯನ್ನು ತೀರಾ ಹತ್ತಿರದಿಂದ ನೋಡಿದಂತೆ ವೆಂಡಿಪಿರಿಯಾರಿನಲ್ಲಿ ಭಾಸವಾಗುವುದರಿಂದಲೂ ಇಲ್ಲಿ ಹೆಚ್ಚು ಭಕ್ತರು ಜಮಾವಣೆಗೊಂಡಿರುತ್ತಾರೆ.

ಈ ಬಾರಿ ಶಬರಿಮಲೆಗೆ ಬಂದು ಹೋದವರ ಸಂಖ್ಯೆ ಸುಮಾರು ನಾಲ್ಕು ಕೋಟಿಗೂ ಹೆಚ್ಚು. ಅವರಲ್ಲಿ 20 ಲಕ್ಷಕ್ಕೂ ಅಧಿಕ ಭಕ್ತರು ಶುಕ್ರವಾರ ಒಂದೇ ದಿನ ಅಯ್ಯಪ್ಪ ದರ್ಶನ ಪಡೆದಿದ್ದಾರೆ. ಸುಮಾರು ಎರಡು ಲಕ್ಷ ಅಯ್ಯಪ್ಪ ವ್ರತಧಾರಿಗಳು ವೆಂಡಿಪಿರಿಯಾರ್ ಮಾರ್ಗವಾಗಿ ಬಂದಿರಬಹುದು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಅಂದಾಜಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ