ಅತ್ಯಾಚಾರ ನಡೆಸಿದ ಬಿಎಸ್‌ಪಿ ಶಾಸಕನನ್ನು ಗಲ್ಲಿಗೇರಿಸಬೇಕು ಎಂದು ಅತ್ಯಾಚಾರಕ್ಕೊಳಗಾದ ನಂತರ ಸುಳ್ಳು ಆರೋಪದ ಮೇಲೆ ಒಂದು ತಿಂಗಳ ಕಾಲ ಜೈಲುವಾಸ ಅನುಭವಿಸಿ ಬಿಡುಗಡೆಗೊಂಡ 17ರ ಬಾಲಕಿಯ ಆಕ್ರೋಶದ ನುಡಿಗಳಿವು.
ಬಿಎಸ್ಪಿ ಶಾಸಕ ಪುರುಷೋತ್ತಮ ದ್ವಿವೇದಿ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದನ್ನು ಮುಚ್ಚಿ ಹಾಕುವ ಸಲುವಾಗಿ ಬಾಲಕಿ ಮೇಲೆ ನಂತರ ಕಳ್ಳತನದ ಆರೋಪ ಹೊರಿಸಿ ಬಂಡಾ ಜೈಲಿಗೆ ತಳ್ಳಲಾಗಿತ್ತು. ಅತ್ಯಾಚಾರದ ಬಗ್ಗೆ ಯಾರಿಗೂ ಹೇಳದಂತೆ ಆಕೆಗೆ ಅಲ್ಲಿಯೂ ನಿರಂತರ ಹಿಂಸೆ ನೀಡಲಾಗಿತ್ತು.
ಇದೀಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾಯಾವತಿ ಅವರ ಆದೇಶದ ನಂತರ ಬಿಡುಗಡೆಗೊಂಡ ಬಾಲಕಿ ಸುದ್ದಿಗಾರರ ಜತೆ ಮಾತನಾಡುತ್ತ, ತನ್ನ ಮೇಲೆ ರೇಪ್ ಮಾಡಿದ ಶಾಸಕನಿಗೆ ಗಲ್ಲುಶಿಕ್ಷೆಯಾಗಬೇಕು. ಅಷ್ಟೇ ಅಲ್ಲ ಶಾಸಕನ ಸಹೋದರನ ಸಮ್ಮುಖದಲ್ಲೇ ಪೊಲೀಸರು ಕೂಡ ತನ್ನನ್ನು ಥಳಿಸಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದಾಳೆ.
ಅಲಹಾಬಾದ್ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬಾಲಕಿಯನ್ನು ಬಿಡುಗಡೆ ಮಾಡಲು ಮಾಯಾವತಿ ಆದೇಶ ನೀಡಿದ್ದರು. ಅದೇ ರೀತಿ ಬಾಲಕಿ ಹಾಗೂ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡುವಂತೆಯೂ ಕೋರ್ಟ್ ನಿರ್ದೇಶನ ನೀಡಿದೆ.
ನಾನು ಕಣ್ಣೀರಿನಲ್ಲಿ ಬದುಕುವಂತಾಗಿದೆ. ಅಲ್ಲದೆ ಹೆದರಿಕೆಯಲ್ಲಿಯೇ ಕಾಲಕಳೆಯುವಂತಾಗಿದೆ. ಹಾಗಾಗಿ ನನಗೆ ಬದುಕಲು ಸುರಕ್ಷಿತ ಸ್ಥಳದ ಅವಶ್ಯಕತೆ ಇದೆ ಎಂದು ಬಾಲಕಿ ಅಲವತ್ತುಕೊಂಡಿದ್ದಾಳೆ.
ಇದೀಗ ಬಿಎಸ್ಪಿ ಶಾಸಕನ ದ್ವಿವೇದಿ ಸಹೋದರ ರಾಜಾನ ಎದುರೇ ಸಬ್ ಇನ್ಸ್‌ಪೆಕ್ಟರ್ ಜಬ್ಬಾರ್ ಅಹ್ಮದ್ ಪೊಲೀಸ್ ಸ್ಟೇಷನ್‌ನಲ್ಲಿ ಥಳಿಸಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಹ್ಮದ್‌ನನ್ನು ಹಿರಿಯ ಅಧಿಕಾರಿಗಳು ಅಮಾನತುಗೊಳಿಸಿದ್ದಾರೆ. ಆ ನಿಟ್ಟಿನಲ್ಲಿ ತನಗೆ ಪ್ರಕರಣದಲ್ಲಿ ನ್ಯಾಯ ಸಿಗಲಿದೆ ಎಂದು ಬಾಲಕಿ ವಿಶ್ವಾಸ ವ್ಯಕ್ತಪಡಿಸಿದ್ದಾಳೆ.