ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ವಿಮಾನ ದುರಂತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಆದರ್ಶ ಸೊಸೈಟಿ ಕಟ್ಟಡ ನೆಲಸಮ ಮಾಡಲು ಶಿಫಾರಸು;ಜೈರಾಮ್ (Adarsh building | Environment Ministry | Mumbai | violating coastal regulations)
Bookmark and Share Feedback Print
 
PTI
ತೀವ್ರ ವಿವಾದಕ್ಕೊಳಗಾಗಿದ್ದ ಆದರ್ಶ ಹೌಸಿಂಗ್ ಸೊಸೈಟಿಯ 31 ಮಹಡಿಯ ಅನಧಿಕೃತ ಕಟ್ಟಡವನ್ನು ನೆಲಸಮ ಮಾಡುವಂತೆ ಕರಾವಳಿ ನಿಬಂಧನೆ ಕಾಯಿದೆ ಪ್ರಕಾರ ಪರಿಸರ ಮತ್ತು ಅರಣ್ಯ ಸಚಿವಾಲಯ ಕೇಂದ್ರಕ್ಕೆ ಶಿಫಾರಸು ಮಾಡಿದ್ದು, ಆ ಸ್ಥಳವನ್ನು ಮೊದಲಿನ ಸ್ಥಿತಿಯಲ್ಲೇ ಇಡುವಂತೆಯೂ ಭಾನುವಾರ ಸಲ್ಲಿಸಿರುವ ಅಂತಿಮ ವರದಿಯಲ್ಲಿ ತಿಳಿಸಿದೆ.

ಅನಧಿಕೃತ ಕಟ್ಟಡವನ್ನು ನೆಲಸಮ ಮಾಡಲು ಸೊಸೈಟಿ ವಿಫಲವಾದಲ್ಲಿ, ವರದಿಯಲ್ಲಿನ ಸೂಚನೆಯಂತೆ ಸಚಿವಾಲಯವೇ ಈ ಆದೇಶವನ್ನು ಜಾರಿಗೆ ತರಬೇಕು ಎಂಬುದಾಗಿ ಹೇಳಿದೆ. ಈ ಆದೇಶವನ್ನು ಆದರ್ಶ ಸೊಸೈಟಿ ಮೂರು ತಿಂಗಳೊಳಗೆ ಪಾಲಿಸಬೇಕು. ಇಲ್ಲದಿದ್ದರೆ ಪರಿಸರ ಸಂರಕ್ಷಣೆ ಕಾಯ್ದೆಯನ್ವಯ ಕ್ರಮ ಜರುಗಿಸಲಾಗುವುದು ಎಂದು ಸಚಿವಾಲಯ ಎಚ್ಚರಿಕೆಯನ್ನೂ ನೀಡಿದೆ.

ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರಯೋಧರ ಕುಟುಂಬಕ್ಕೆ ಆದರ್ಶ ಹೌಸಿಂಗ್ ಸೊಸೈಟಿಯಲ್ಲಿ ಫ್ಲ್ಯಾಟ್ ನೀಡುವ ಯೋಜನೆಯಾಗಿತ್ತು. ಆದರೆ ಈ ಯೋಜನೆಯನ್ನು ರಾಜಕಾರಣಿಗಳು, ಮಿಲಿಟರಿಯ ಮಾಜಿ ವರಿಷ್ಠರು, ಅಧಿಕಾರಿಗಳು ದುರುಪಯೋಗಪಡಿಸಿಕೊಂಡ ಹಗರಣ ಬೆಳಕಿಗೆ ಬಂದಿತ್ತು. ಅಲ್ಲದೇ ವಸತಿ ಪಡೆದವರಲ್ಲಿ ಕಾಂಗ್ರೆಸ್ ಪಕ್ಷದ ಅಶೋಕ್ ಚವಾಣ್ ಅವರ ಸಂಬಂಧಿಕರ ಹೆಸರು ಕೇಳಿಬಂದಿದ್ದರಿಂದ ಅವರು ಮುಖ್ಯಮಂತ್ರಿ ಗದ್ದುಗೆಯಿಂದ ಕೆಳಗಿಳಿಯಬೇಕಾಯಿತು.

ಬ್ಲಾಕ್ 6, ಬ್ಯಾಕ್ ಬೇ ರೆಕ್ಲಮೇಷನ್ ಏರಿಯಾ, ಬ್ಯಾಕ್ ಬೇ ಬಸ್ ಡಿಪೋ ಸಮೀಪ, ಕ್ಯಾ.ಪ್ರಕಾಶ್ ಪಾಥೆ ಮಾರ್ಗ್, ಕೋಲಾಬಾ, ಮುಂಬೈ ಈ ಸ್ಥಳಗಳಲ್ಲಿ ಅನಧಿಕೃತವಾಗಿ ಕಟ್ಟಡ ಕಟ್ಟಲಾಗಿದೆ. ಆ ನಿಟ್ಟಿನಲ್ಲಿ ಎ ವಾರ್ಡ್ ಅನ್ನು ಸಂಪೂರ್ಣವಾಗಿ ನೆಲಸಮ ಮಾಡಬೇಕು. ಅಲ್ಲದೇ ಆ ಸ್ಥಳವನ್ನು ಯಥಾಸ್ಥಿತಿಗೆ ತರಬೇಕೆಂದು ಮೂರು ಪುಟಗಳ ವರದಿಯಲ್ಲಿ ತಿಳಿಸಲಾಗಿದೆ.

ಸೊಸೈಟಿಯು ಬೇಕಾಬಿಟ್ಟಿಯಾಗಿ ನಿಯಮಗಳನ್ನು ಗಾಳಿಗೆ ತೂರಿದೆ. ಮುಂದೆ ಇಂಥದ್ದೇ ಪ್ರಕರಣಗಳು ನಡೆಯಬಹುದು. ಹಾಗಾಗಿ ದಂಡ ವಿಧಿಸುವುದು ಯಾವುದೇ ಪ್ರಯೋಜನವಿಲ್ಲ. ಹಾಗಾಗಿ ಕಟ್ಟಡ ನೆಲಸಮ ಮಾಡುವಂತೆ ನಿಲುವು ತಳೆಯಲಾಗಿದೆ. ಬೇರೆ ಯಾವುದೇ ನಿರ್ಧಾರ ಕೈಗೊಂಡಿದ್ದರೆ ಅದು ಸುಪ್ರೀಂಕೋರ್ಟ್ ಮತ್ತು ವಿವಿಧ ಹೈಕೋರ್ಟ್‌ಗಳು ಪರಿಸರ ಸಂರಕ್ಷಣೆ ಬಗ್ಗೆ ನೀಡಿರುವ ತೀರ್ಪಿಗೆ ಅಗೌರವ ತರುತ್ತಿತ್ತು ಎಂದು ಎಂದು ಪರಿಸರ ಖಾತೆ ಸಚಿವ ಜೈರಾಮ್ ರಮೇಶ್ ಸಚಿವಾಲಯದ ಅಂತರ್ಜಾಲದಲ್ಲಿ ಪ್ರಕಟವಾಗಿರುವ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ಆದರ್ಶ ಸೊಸೈಟಿ ಅಕ್ರಮ ಕಟ್ಟಡದ ಕುರಿತಂತೆ ಪರಿಸರ ಸಚಿವಾಲಯ ನೀಡಿರುವ ನಿರ್ದೇಶನದ ಬಗ್ಗೆ ಕೂಡಲೇ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಮಹಾರಾಷ್ಟ್ರ ಸರಕಾರ ಹೇಳಿದೆ.

ಆದರ್ಶ ಸೊಸೈಟಿ ಕುರಿತಂತೆ ಪರಿಸರ ಸಚಿವಾಲಯ ನೀಡಿರುವ ಆದೇಶವನ್ನು ನಾವು ಓದಿದ್ದು, ಈ ಬಗ್ಗೆ ಏನು ಮಾಡಬಹುದು ಎಂಬ ಕುರಿತು ಶೀಘ್ರವೇ ನಿರ್ಧಾರ ಕೈಗೊಳ್ಳಲಾಗುವುದು ಎಂದು ರಾಜ್ಯ ಪರಿಸರ ಖಾತೆ ಸಚಿವ ಸಂಜಯ್ ದೇವ್‌ತಾಲೆ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

ಏತನ್ಮಧ್ಯೆ, ಪರಿಸರ ಸಚಿವಾಲಯ ನೀಡಿರುವ ವರದಿಯ ಪ್ರತಿ ದೊರೆತ ಕೂಡಲೇ ಹೈಕೋರ್ಟ್ ಮೆಟ್ಟಿಲೇರುವುದಾಗಿ ಆದರ್ಶ ಸೊಸೈಟಿಯ ವಕೀಲ ಸತೀಶ್ ಮನ್‌ಶಿಂಧೆ ಈ ಸಂದರ್ಭದಲ್ಲಿ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ