ಹುಡುಗಿಯರು ಜೀನ್ಸ್ ಧರಿಸುವುದರಿಂದ ಅವರ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಇಂತಹ ಆಕ್ಷೇಪಕಾರಿ ಬಟ್ಟೆ ಧರಿಸುವುದರಿಂದ ಚುಡಾವಣೆಯಂತಹ ಪ್ರಸಂಗಗಳು ಹೆಚ್ಚಿವೆ ಎಂದಿರುವ ಖಾಪ್ ಪಂಚಾಯಿತಿಯೊಂದು ಗ್ರಾಮದಲ್ಲಿ ಯುವತಿಯರು ಜೀನ್ಸ್ ಧರಿಸಬಾರದು ಎಂದು ನಿಷೇಧ ಹೊರಡಿಸಿದೆ.
ಜೀನ್ಸ್ ಧರಿಸುವುದರಿಂದ ಲೈಂಗಿಕ ಕಿರುಕುಳ ಪ್ರಕರಣಗಳು, ಚುಡಾವಣೆ, ಯುವ ಜೋಡಿಗಳ ಪರಾರಿ ಮುಂತಾದುವು ಹೆಚ್ಚಿವೆ. ಅದಕ್ಕೆಲ್ಲ ಆಕ್ಷೇಪಕಾರಿ ಬಟ್ಟೆಗಳು ಪ್ರಚೋದನೆ ನೀಡುತ್ತವೆ ಎಂದು ಈ ಜಾತಿ ಪಂಚಾಯಿತಿ 'ಪತ್ತೆ' ಮಾಡಿದೆ.
ಇದು ನಡೆದಿರುವುದು ಉತ್ತರ ಪ್ರದೇಶದ ಮುಜಾಫರ ನಗರ ಜಿಲ್ಲೆಯ ಬೆನ್ಸಾವಲ್ ಗ್ರಾಮದಲ್ಲಿ. ಈ ಗ್ರಾಮದ ಖಾಪ್ ಪಂಚಾಯಿತಿ ಮುಖ್ಯಸ್ಥ ಬಾಬಾ ಸೂರಜ್ ಇಂತಹ ಆದೇಶ ಹೊರಡಿಸಿದ್ದಾನೆ.
ಈ ನಿಷೇಧವನ್ನು ಗ್ರಾಮದಲ್ಲಿ ಜಾರಿಗೆ ತರಲು ಐದು ಮಂದಿ ಮಹಿಳಾ ಸದಸ್ಯರ ಸಮಿತಿಯೊಂದನ್ನು ಕೂಡ ಪಂಚಾಯಿತಿ ರಚಿಸಿದೆ. ಸಮಸ್ಯೆ ಉದ್ಭವಿಸುವುದನ್ನು ತಡೆಗಟ್ಟುವ ಸಲುವಾಗಿ ಕಡ್ಡಾಯವಾಗಿ ನಿಷೇಧ ಜಾರಿಗೆ ಬರಬೇಕು. ಹುಡುಗಿಯರು ಇನ್ನು ಮುಂದೆ ಜೀನ್ಸ್ ಧರಿಸಲೇಬಾರದು ಎಂದು ಕಟ್ಟುನಿಟ್ಟಿನ ಸೂಚನೆಗಳನ್ನು ಪ್ರತಿ ಮನೆಗಳಿಗೂ ನೀಡಲಾಗಿದೆ.
ಹಿಂದೆ ಇದೇ ರೀತಿಯ ಹಲವು ಹಾಸ್ಯಾಸ್ಪದ ಪ್ರಸಂಗಗಳಿಂದ ಈ ಖಾಪ್ ಪಂಚಾಯಿತಿಗಳು ಸುದ್ದಿಯಾದವುಗಳು. ಅವುಗಳಲ್ಲಿ ಗಂಭೀರವಾದುದು ಮರ್ಯಾದಾ ಹತ್ಯೆಗಳು. ಸಗೋತ್ರದಲ್ಲಿ ಅಥವಾ ಬೇರೆ ಜಾತಿಯವರನ್ನು ಮದುವೆಯಾದ ಜೋಡಿಗಳನ್ನು ಅಮಾನವೀಯ ರೀತಿಯಲ್ಲಿ ಕೊಂದು ಹಾಕಲು ಈ ಖಾಪ್ ಪಂಚಾಯಿತಿಗಳು ಆದೇಶ ನೀಡುತ್ತಾ ಬಂದಿವೆ.
ಅವಿವಾಹಿತ ಯುವತಿಯರು ಮೊಬೈಲ್ ಫೋನ್ ಬಳಕೆ ಮಾಡಬಾರದು ಎಂಬ ಆದೇಶವನ್ನೂ ಇತ್ತೀಚೆಗೆ ಹೊರಡಿಸಲಾಗಿತ್ತು. ಇದಕ್ಕೂ ಕಾರಣ ಹುಡುಗಿಯರು ಸ್ವೇಚ್ಛಾಚಾರದಿಂದ ಇರುತ್ತಾರೆ ಎನ್ನುವುದು. ಮೊಬೈಲ್ ಬಳಕೆಯಿಂದ ಪರಾರಿಯಂತಹ ಪ್ರಸಂಗಗಳು ಹೆಚ್ಚುತ್ತಿವೆ ಎಂದು ಪಂಚಾಯಿತಿ ಹೇಳಿಕೊಂಡಿತ್ತು.